ಲಕ್ನೋ: ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಪಾರುಪಳ್ಳಿ ಕಶ್ಯಪ್ “ಸಯ್ಯದ್ ಮೋದಿ’ ಬ್ಯಾಡ್ಮಿಂಟನ್ ಟೂರ್ನಿಯ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ. ಆದರೆ ಹಾಲಿ ಮಿಶ್ರ ಡಬಲ್ಸ್ ಚಾಂಪಿಯನ್ಸ್ ಜೋಡಿ ಪ್ರಣವ್ ಜೆರ್ರಿ ಜೋಪ್ರಾ-ಎನ್. ಸಿಕ್ಕಿ ರೆಡ್ಡಿ ಆರಂಭಿಕ ಪಂದ್ಯದಲ್ಲೇ ಆಘಾತ ಅನುಭವಿಸಿದರು.
ವನಿತಾ ಸಿಂಗಲ್ಸ್ ವಿಭಾಗದ ಆರಂಭಿಕ ಪಂದ್ಯದಲ್ಲಿ ವಿಶ್ವದ 10ನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್ ಮಾರಿಶಿಯಸ್‌ನ ಕೇಟ್ ಫೂ ಕ್ಯುನೆ ವಿರುದ್ಧ 21-10, 21-10 ನೇರ ಗೇಮ್‌ಗಳಿಂದ ಜಯಿಸಿ ಮುಂದಿನ ಸುತ್ತಿಗೆ ಲಗ್ಗೆಯಿಟ್ಟರು. ಸೈನಾ ಇನ್ನು ಭಾರತದವರೇ ಆದ ಅಮೋಲಿಕಾ ಸಿಂಗ್ ಸಿಸೋದಿಯಾ ಅವರನ್ನು ಎದುರಿಸಲಿದ್ದಾರೆ.
ವನಿತಾ ವಿಭಾಗದ ಮತ್ತೂಂದು ಪಂದ್ಯದಲ್ಲಿ ಮಾಜಿ ರಾಷ್ಟ್ರೀಯ ಚಾಂಪಿಯನ್ ಋತುಪರ್ಣ ದಾಸ್ ರಶ್ಯದ ನತಾಲಿಯಾ ಪ್ರಮಿನ್‌ವೊವಾ ಅವರನ್ನು 21-19, 18-21, 21-10 ಗೇಮ್‌ಗಳಿಂದ ಸೋಲಿಸಿದರು. ಮುಂದಿನ ಪಂದ್ಯದಲ್ಲಿ ತವರಿನ ಶ್ರುತಿ ಮುಂಡಾಡ ವಿರುದ್ಧ ಆಡಲಿದ್ದಾರೆ. ಉಳಿದಂತೆ ಪ್ರಾಶಿ ಜೋಶಿ, ಸೈಲಿ ರಾಣೆ, ರಿಯಾ ಮುಖರ್ಜಿ, ಪ್ರದೇಶಿ ಶ್ರೇಯಾಂಶಿ, ರೇಷ್ಮಾ ಕಾರ್ತಿಕ್, ಸಾಯಿ ಉತ್ತೇಜಿತಾ ರಾವ್ ಕೂಡ ಮುಂದಿನ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಪಿ. ಕಶ್ಯಪ್ ಥಾಯ್ಲೆಂಡ್‌ನ ತಾನೊಂಗಾಕ್ ಸಾನ್ಸ್‌ಂಬೊಂಬೊಸ್ಕ್ ವಿರುದ್ಧ 21-14, 21-12 ನೇರ ಗೇಮ್‌ಗಳಿಂದ ಜಯಿಸಿದರು. ದ್ವಿತೀಯ ಸುತ್ತಿನಲ್ಲಿ ಇಂಡೋನೇಶ್ಯದ ಫ್ರಿಮನ್ ಅಬ್ದುಲ್ ಖೊಲಿಕ್ ಅವರನ್ನು ಎದುರಿಸಲಿದ್ದಾರೆ.
ಚೊಚ್ಚಲ ಸಾರ್ಲೊರ್‌ಲಕ್ಸ್ ಓಪನ್ ಪ್ರಶಸ್ತಿ ಗೆದ್ದ ಶುಭಂಕರ್ ಡೇ ಸ್ವೀಡನ್‌ನ ಫೆಲಿಕ್ಸ್ ಬುರೆಸ್ಟೆಡ್ ಅವರನ್ನು 21-15, 21-13 ಅಂತರದಿಂದ ಸೋಲಿಸಿದರೆ, ಬಿ. ಸಾಯಿ ಪ್ರಣೀತ್ ರಶ್ಯದ ಸರ್ಗೆಯಿ ಸಿರಾಂತ್ ವಿರುದ್ದ 21-12, 21-10 ಗೇಮ್‌ಗಳಿಂದ ಗೆದ್ದರು.
ಹಾಲಿ ಚಾಂಪಿಯನ್ಸ್‌ಗೆ ಸೋಲು
ಮಿಶ್ರ ಡಬಲ್ಸ್ ವಿಭಾಗದ ಹಾಲಿ ಚಾಂಪಿಯನ್ಸ್ ಭಾರತದ ಪ್ರಣವ್ ಜೆರ್ರಿ ಚೋಪ್ರಾ- ಎನ್. ಸಿಕ್ಕಿ ರೆಡ್ಡಿ ಜೋಡಿ ಆರಂಭಿಕ ಪಂದ್ಯದಲ್ಲೇ ಚೀನದ ರೆನ್ ಕ್ಸಿಂಗ್ಯು-ಝಹು ಚಾಂಮಿನ್ ವಿರುದ್ಧ 14-21, 11-21 ಗೇಮ್‌ಗಳಿಂದ ಪರಾಭವಗೊಂಡರು.
ಇದೇ ವಿಭಾಗದಲ್ಲಿದ್ದ ಮತ್ತೂಂದು ಭಾರತ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಅಶ್ವಿನಿ ಪೊನ್ನಪ್ಪ 21-10, 21-10 ಗೇಮ್‌ಗಳಿಂದ ಕೃಷ್ಣ ಪ್ರಸಾದ್ ಗರ್ಗ್- ಋತುಪರ್ಣ ಪಾಂಡ ಜೋಡಿಯನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿದೆ.