Advertisement

By election ಹೊಸ್ತಿಲಲ್ಲಿ ಕಾಂಗ್ರೆಸ್‌ಗೆ ಮುಜುಗರ ತಂದ ಸೈಲ್‌ ಪ್ರಕರಣ

01:53 AM Oct 27, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ 3 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಹೊಸ್ತಿಲಲ್ಲೇ ಆಡಳಿತಾರೂಢ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ಕಾರವಾರ ಶಾಸಕ ಸತೀಶ್‌ ಸೈಲ್‌ ಅದಿರು ಕಳವು ಪ್ರಕರಣದಲ್ಲಿ ಶಿಕ್ಷೆಯಾಗಿ ಗುರಿಯಾಗಿ ಜೈಲು ಪಾಲಾಗಿರುವುದು ಸರಕಾರ ಹಾಗೂ ಪಕ್ಷಕ್ಕೆ ತೀವ್ರ ಮುಜುಗರ ತಂದಿದೆ.

Advertisement

ಉಪ ಚುನಾವಣೆಗೆ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ ಮೈತ್ರಿ ವಿರುದ್ಧ ಸೆಡ್ಡು ಹೊಡೆದು ರಣೋತ್ಸಾಹದಲ್ಲಿದ್ದ ಕಾಂಗ್ರೆಸ್‌ ಪಡೆಗೆ ಸತೀಶ್‌ ಸೈಲ್‌ ಪ್ರಕರಣ ಸಹಜವಾಗಿಯೇ ಮುಜುಗರ ಸೃಷ್ಟಿಸಿದೆ. ಇದೇ ವಿಷಯವನ್ನು ಉಪ ಚುನಾವಣೆಯಲ್ಲಿ ವಿಪಕ್ಷಗಳು ಪ್ರಧಾನವಾಗಿ ಚರ್ಚಿಸುವ ಸಾಧ್ಯತೆಗಳಿವೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸೇರಿದಂತೆ ರಾಜ್ಯ ಸರಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಿರುವ ಬಿಜೆಪಿ-ಜೆಡಿಎಸ್‌ ನಾಯಕರಿಗೆ ಈಗ ಮತ್ತೂಂದು ಅಸ್ತ್ರ ಸುಲಭವಾಗಿ ಲಭ್ಯವಾದಂತೆ ಆಗಿದೆ.

ಮುಡಾ ಪ್ರಕರಣದಲ್ಲಿ ಈಗಾಗಲೇ ಮುಡಾ ಕಚೇರಿಗೆ ಇ.ಡಿ. ದಾಳಿಜತೆಗೆ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಸಿಎಂ ಪತ್ನಿ ವಿಚಾರಣೆ ನಡೆಸಿದ್ದು, ಇನ್ನೇನು ಯಾವುದೇ ಸಮಯದಲ್ಲಿ ಸಿಎಂಗೆ ಇ.ಡಿ. ಇಲ್ಲವೇ ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಉಪ ಚುನಾವಣೆಯಲ್ಲಿ ಈಗ ಆಡಳಿತ ಪಕ್ಷದ ವಿರುದ್ಧ ಮುಗಿಬೀಳಲು ಸತೀಶ್‌ ಸೈಲ್‌ ಪ್ರಕರಣ ವಿಪಕ್ಷಗಳಿಗೆ ವರವಾಗಿ ಸಿಕ್ಕಿದೆ.

ಇದಕ್ಕೆ ಪ್ರತಿಯಾಗಿ ವಿಪಕ್ಷಗಳಿಗೆ ತಿರುಗೇಟು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಂತ್ರಗಾರಿಕೆ ರೂಪಿಸುತ್ತಿದ್ದು,ಒಟ್ಟಾರೆ ಆರೋಪ – ಪ್ರತ್ಯಾರೋಪಗಳ ಸುರಿಮಳೆ ನಡೆಯುವುದು ಖಚಿತವಾಗಿದೆ.

ಶಿಕ್ಷೆಯಿಂದ ಅನರ್ಹ ಜನಪ್ರತಿನಿಧಿಗಳು
ಯಾವುದೇ ಚುನಾಯಿತ ಪ್ರತಿನಿಧಿ 2 ಅಥವಾ ಅದಕ್ಕಿಂತ ಹೆಚ್ಚು ವರ್ಷ ಶಿಕ್ಷೆಗೆ ಗುರಿಯಾದರೆ ತತ್‌ಕ್ಷಣವೇ ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ಈ ರೀತಿ ಸ್ಥಾನ ಕಳೆದುಕೊಂಡವರ ಪಟ್ಟಿ ಇಲ್ಲಿದೆ.
1. ಲಾಲು ಪ್ರಸಾದ್‌ ಯಾದವ್‌ (ಆರ್‌ಜೆಡಿ) – ಮೇವು ಹಗರಣದಲ್ಲಿ 2013ರಲ್ಲಿ ಶಿಕ್ಷೆ
2. ಜಯಲಲಿತಾ (ಎಐಎಡಿಎಂಕೆ) – ಅಕ್ರಮ ಆಸ್ತಿ ಪ್ರಕರಣ – 2014ರಲ್ಲಿ ಶಿಕ್ಷೆ
3. ಮೊಹಮ್ಮದ್‌ ಫೈಜಲ್‌ (ಎನ್‌ಸಿಪಿ) – ಕೊಲೆ ಯತ್ನ ಪ್ರಕರಣದಲ್ಲಿ 2022ರಲ್ಲಿ ಶಿಕ್ಷೆ
4. ಆಜಂ ಖಾನ್‌ (ಆರ್‌ಜೆಡಿ) – ದ್ವೇಷ ಭಾಷಣ ಪ್ರಕರಣದಲ್ಲಿ
2022ರಲ್ಲಿ ಶಿಕ್ಷೆ
5. ಅನಿಲ್‌ ಕುಮಾರ್‌ ಸಹಾನಿ (ಆರ್‌ಜೆಡಿ) – ವಂಚನೆ ಪ್ರಕರಣದಲ್ಲಿ 2022ರಲ್ಲಿ ಶಿಕ್ಷೆ
6. ವಿಕ್ರಂ ಸಿಂಗ್‌ ಸಹಾನಿ (ಬಿಜೆಪಿ) – ದೊಂಬಿ ಪ್ರಕರಣದಲ್ಲಿ 2022ರಲ್ಲಿ ಶಿಕ್ಷೆ
7. ಪ್ರದೀಪ್‌ ಚೌಧರಿ (ಕಾಂಗ್ರೆಸ್‌) – ಹಲ್ಲೆ ಪ್ರಕರಣದಲ್ಲಿ 2021ರಲ್ಲಿ ಶಿಕ್ಷೆ
8. ಕುಲದೀಪ್‌ ಸಿಂಗ್‌ ಸಾಗರ್‌ (ಬಿಜೆಪಿ) – ಅತ್ಯಾಚಾರ ಪ್ರಕರಣದಲ್ಲಿ 2020ರಲ್ಲಿ ಶಿಕ್ಷೆ
9. ಅಬ್ದುಲ್ಲಾ ಆಜಂ ಖಾನ್‌ (ಎಸ್‌ಪಿ) – ಪೊಲೀಸ್‌ ಮೇಲೆ ಆಕ್ರಮಣ ಕೇಸಲ್ಲಿ 2023ರಲ್ಲಿ ಶಿಕ್ಷೆ
10. ಅನಂತ್‌ ಸಿಂಗ್‌ (ಜೆಡಿಯು) – ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣದಲ್ಲಿ 2022ರಲ್ಲಿ ಶಿಕ್ಷೆ

Advertisement

ಶಾಸಕ ಸ್ಥಾನದಿಂದ ಅನರ್ಹ ಆದರೆ ರಾಜ್ಯದ ಮೊದಲಿಗ!

ಜನಪ್ರತಿನಿಧಿಗಳ ಕಾಯ್ದೆ- 1951ರ ಪ್ರಕಾರ ಯಾವುದೇ ಜನಪ್ರತಿನಿಧಿಯ ವಿರುದ್ಧ 2 ವರ್ಷಕ್ಕಿಂತ ಮೇಲ್ಪಟ್ಟು ಶಿಕ್ಷೆ ಪ್ರಕಟವಾದರೆ ತತ್‌ಕ್ಷಣದಿಂದಲೇ ಅವರ ಸದಸ್ಯತ್ವ ಅನರ್ಹಗೊಳ್ಳುತ್ತದೆ. ಈ ಹಿಂದೆ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾದರೂ ಮೇಲ್ಮನವಿ ಸಲ್ಲಿಸಿ ಪ್ರಕರಣ ಇತ್ಯರ್ಥವಾಗುವವರೆಗೆ ಸದಸ್ಯತ್ವ ರಕ್ಷಣೆಯಾಗುತ್ತಿತ್ತು.

ಆದರೆ ಹಿರಿಯ ವಕೀಲೆ ಲಿಲ್ಲಿ ಇಸಾಬೆಲ್‌ ಥಾಮಸ್‌ ಹಾಗೂ ಕೇಂದ್ರ ಸರಕಾರದ ನಡುವಣ ಪ್ರಕರಣದಲ್ಲಿ 2013ರ ಜು. 10ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಅನ್ವಯ ಶಿಕ್ಷೆ ಪ್ರಕಟವಾದ ಕೂಡಲೇ ಸದಸ್ಯತ್ವ ರದ್ದಾಗುತ್ತದೆ. ಆದರೆ 2013ರ ಆ. 30ರಂದು ಕಾಯ್ದೆಗೆ ತಿದ್ದುಪಡಿ ತಂದಿದ್ದ ಕೇಂದ್ರ ಸರಕಾರವು ಶಿಕ್ಷೆ ಪ್ರಕಟಗೊಂಡ ಕೂಡಲೇ ಸದಸ್ಯತ್ವ ರದ್ದಾಗದಂತೆ ರಕ್ಷಣೆ ನೀಡಲು ಮುಂದಾಗಿತ್ತು. ಇದನ್ನೂ ಸುಪ್ರೀಂ ಕೋರ್ಟ್‌ ಊರ್ಜಿತಗೊಳಿಸಿರಲಿಲ್ಲ.

ಸ್ಪೀಕರ್‌ ಮುಂದಿರುವ ಆಯ್ಕೆ ಏನು?
ಶಿಕ್ಷೆ ಪ್ರಕಟವಾದ ತತ್‌ಕ್ಷಣದಿಂದಲೇ ಸತೀಶ್‌ ಸೈಲ್‌ ಅವರು ಶಾಸಕ ಸ್ಥಾನದಿಂದ ಅನರ್ಹಗೊಳ್ಳಲಿದ್ದು, ಅದರ ಪ್ರಮಾಣೀಕೃತ ಪ್ರತಿಯನ್ನು ನ್ಯಾಯಾಲಯದಿಂದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರ ಕಚೇರಿ ಹಾಗೂ ಚುನಾವಣ ಆಯೋಗಕ್ಕೆ ರವಾನಿಸಲಾಗುತ್ತದೆ. ಆದರೆ ಇದುವರೆಗೆ ವಿಧಾನಸಭಾಧ್ಯಕ್ಷರ ಕಚೇರಿಗೆ ಸತೀಶ್‌ ಸೈಲ್‌ ಶಿಕ್ಷೆ ಕುರಿತ ಆದೇಶದ ಪ್ರಮಾಣೀಕೃತ ಪ್ರತಿ ತಲುಪಿಲ್ಲವೆಂದು ಮೂಲಗಳು ತಿಳಿಸಿವೆ.

3 ಬಾರಿ ಸ್ಪರ್ಧೆ, 2 ಬಾರಿ ಶಾಸಕ
ಉತ್ತರ ಕನ್ನಡ ಜಿಲ್ಲೆಯ ಕಾರವಾರ ವಿಧಾನಸಭಾ ಕ್ಷೇತ್ರದಿಂದ 2 ಬಾರಿ ಶಾಸಕರಾಗಿದ್ದ ಸತೀಸ್‌ ಸೈಲ್‌ ಅವರು 2013ರಲ್ಲಿ ಮೊತ್ತಮೊದಲ ಬಾರಿಗೆ ಪಕ್ಷೇತರರಾಗಿ ಗೆಲ್ಲುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದರು. 2018ರ ಚುನಾವಣೆ ವೇಳೆಗೆ ಕಾಂಗ್ರೆಸ್‌ ಸೇರಿದ್ದ ಅವರು ಬಿಜೆಪಿಯ ರೂಪಾಲಿ ನಾಯ್ಕ ವಿರುದ್ಧ ಸೋತಿದ್ದರು. 2023ರ ಚುನಾವಣೆಯಲ್ಲಿ ಸತೀಶ್‌ ಸೈಲ್‌ ಅವರು ಬಿಜೆಪಿಯ ರೂಪಾಲಿ ನಾಯ್ಕ ಅವರನ್ನು 2,138 ಮತಗಳ ಅಂತರದಿಂದ ಸೋಲಿಸಿದ್ದರು.

ಆದೇಶ ರದ್ದಾದರೆ ಮಾತ್ರ ಬಚಾವ್‌
ಆದೇಶದ ಪ್ರತಿ ಸಿಕ್ಕಿದ ಬಳಿಕ ಅದನ್ನು ಪರಿಶೀಲಿಸಿ ಕಾನೂನು ಅಭಿಪ್ರಾಯ ಪಡೆದು ಸ್ಪೀಕರ್‌ ಅವರು ಶಾಸಕತ್ವ ಅನರ್ಹಗೊಳಿಸುವ ಬಗ್ಗೆ ಅಧಿಸೂಚನೆ ಹೊರಡಿಸಬೇಕಾಗುತ್ತದೆ. ಆದರೆ ಸತೀಶ್‌ ಸೈಲ್‌ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಪ್ರಕಟಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಹೈಕೋರ್ಟ್‌ ಅಧೀನ ನ್ಯಾಯಾಲಯ ಪ್ರಕಟಿಸಿರುವ ಶಿಕ್ಷೆಗೆ ತಡೆಯಾಜ್ಞೆ ನೀಡಿದರೆ ಆಗ ಶಾಸಕ ಸ್ಥಾನ ರದ್ದಾಗುವುದಿಲ್ಲ. ಪ್ರಕರಣ ಇತ್ಯರ್ಥ ಆಗುವವರೆಗೆ ಶಾಸಕ ಸ್ಥಾನದ ರಕ್ಷಣೆ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next