ಹೊಸದಿಲ್ಲಿ : ಛೋಟೆ ನವಾಬ್ ಸೈಫ್ ಅಲಿ ಖಾನ್ ಮತ್ತು ಬೇಗಂ ಕರೀನಾ ಕಪೂರ್ ಖಾನ್ ದಂಪತಿಗೆ ಕಳೆದ ವರ್ಷ ಡಿಸೆಂಬರ್ 20ರಂದು ಮುದ್ದಾದ ಗುಂಡುಗುಂಡು ಗಂಡು ಮಗು ತೈಮೂರ್ ಅಲಿ ಖಾನ್ ಜನಿಸಿದಂದಿನಿಂದ ಆತ ಮಾಧ್ಯಮದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.
ಹೊಸ ಸುದ್ದಿ ಏನಪ್ಪ ಅಂದ್ರೆ ಸೈಫ್ ಗೆ ತಾನು ತನ್ನ ಮಗನಿಗೆ ಇಟ್ಟ ಹೆಸರು (ತೈಮೂರ್ ಅಲಿ ಖಾನ್) ಈಗ ಅದ್ಯಾಕೋ ಇಷ್ಟವಿಲ್ಲ ! ಮಗನ ಹೆಸರಿನೊಂದಿಗೆ ಹುಟ್ಟಿಕೊಂಡ ವಿವಾದದಿಂದ ಬೇಸರ ಪಟ್ಟುಕೊಂಡಿರುವ ಸೈಫ್, ಈಗಿನ್ನು ತಾನು ಆತನ ಹೆಸರನ್ನು ಬದಲಾಯಿಸುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಂತಿದೆ.
ಇತಿಹಾಸ ಓದಿದವರಿಗೆ ಗೊತ್ತಿರುವ ಸಂಗತಿ ಎಂದರೆ ತೈಮೂರ್ ಎಂಬಾತ ಟರ್ಕೊ – ಮಂಗೋಲ್ ಆಕ್ರಮಣಕಾರಿ ಅರಸ; ತನ್ನ ನಿರ್ದಯ, ನಿಷ್ಕರುಣೆಯ ದುಷ್ಕೃತ್ಯಗಳಿಗೆ ಕುಖ್ಯಾತಿ ಪಡೆದವ. ಹಾಗಿರುವಾಗ ಸೈಫ್ – ಕರೀನಾ ದಂಪತಿ ತಮ್ಮ ನವಜಾತ ಗಂಡು ಮಗುವಿಗೆ ಈ ಕುಖ್ಯಾತ ಆಕ್ರಮಣಕಾರಿ ದೊರೆಯ ಹೆಸರನ್ನು ಇಟ್ಟದ್ದಾದರೂ ಏಕೆ ಎಂಬ ಪ್ರಶ್ನೆ ಅಂದು ಇಂಟರ್‌ನೆಟ್ ತುಂಬಾ ವ್ಯಾಪಕವಾಗಿ ಹರಿದಾಡಿತ್ತು.
“ಕ್ರೂರಿ ಐತಿಹಾಸಿಕ ದೊರೆ ತೈಮೂರನ ವಿಷಯವೆಲ್ಲ ನಮಗೆ ಗೊತ್ತಿಲ್ಲ; ಪರ್ಶಿಯನ್ ಭಾಷೆಯಲ್ಲಿ ತೈಮೂರ್ ಎಂಬ ಪದದ ಅರ್ಥ ಕಬ್ಬಿಣ. ಹಾಗಾಗಿ ನಮ್ಮ ಮಗು ಮುಂದೆ ದೊಡ್ಡವನಾದಾಗ ಕಬ್ಬಿಣದಷ್ಟು ಗಟ್ಟಿಮುಟ್ಟಾಗಬೇಕು ಎಂಬ ಹಂಬಲದಲ್ಲಿ ನಾವು ಆತನಿಗೆ ಆ ಹೆಸರನ್ನು ಇಟ್ಟಿದ್ದೇವೆ’ ಎಂದು ಸೈಫ್-ಕರೀನಾ ಅಂದು ತಮ್ಮ ಟೀಕಾಕಾರಿಗೆಲ್ಲ ಉತ್ತರ ನೀಡಿದ್ದರು.
ಆದರೆ ಸೈಫ್ ಗೆ ಕ್ರಮೇಣ ತನ್ನ ಮಗನಿಗೆ ತೈಮೂರ್ ಎಂದು ಹೆಸರಿಟ್ಟಿರುವುದು ಅದ್ಯಾಕೋ ಸರಿ ಬರಲಿಲ್ಲ. ಮಗುವಿಗೆ ಒಂದು ಅಥವಾ ಎರಡು ವರ್ಷವಾದಾಗ ಅದಕ್ಕೆ ಬೇರೊಂದು ಒಳ್ಳೆಯ, ಎಲ್ಲರಿಗೂ ಖುಷಿ – ಸಮಾಧಾನ ತರುವ ಹೆಸರನ್ನು ಇಡೋಣ ಎಂದು ಈಗ ಸೈಫ್ ಗೆ ಅನ್ನಿಸಿದೆ. ಹಾಗೆಂದು ಸೈಫ್ ಈಚೆಗೆ “ಡೆಲ್ಲಿ ಟೈಮ್ಸ್’ ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
“ತೈಮೂರ್‌ನ ಹೆಸರು ಬದಲಾಯಿಸುವ ನನ್ನ ಇಂಗಿತವನ್ನು ನಾನು ಇದುವರೆಗೆ ಯಾರಲ್ಲೂ ಹೇಳಿಲ್ಲ; ಕರೀನಾಗೆ ಹೇಳಿದೆ; ಆದರೆ ಹೆಸರು ಬದಲಾಯಿಸುವ ಆಲೋಚನೆ ಆಕೆಗೆ ಇಷ್ಟವಾಗಿಲ್ಲ; ಆದರೂ ಈ ವಿಷಯ ನನ್ನ ಆಂತರ್ಯವನ್ನು ಸೇರಿಕೊಂಡಿದೆ. ನನ್ನ ಮಗ ದೊಡ್ಡವನಾದಾಗ ತನ್ನ ಹೆಸರಿನ ಕಾರಣಕ್ಕೆ ಅಪ್ರಿಯನಾಗುವುದು ನನಗೆ ಇಷ್ಟವಿಲ್ಲ; ಈಗ ಅಲ್ಲದಿದ್ದರೂ ಆತನಿಗೆ ಒಂದು ಅಥವಾ ಎರಡು ವರ್ಷ ಪ್ರಾಯವಾದಾಗ ಆತನ ಹೆಸರು ಬದಲಾಯಿಸಬೇಕು ಎಂದುಕೊಂಡಿದ್ದೇನೆ’ ಎಂದು ಸೈಫ್ ಸಂದರ್ಶನದಲ್ಲಿ ಹೇಳಿದರು.