ಸೈದಾಪುರ: ಸರಕಾರದ ನಿಯಮಗಳನ್ನು ಗಾಳಿಗೆ ತೂರಿದ ಆಧಾರ್ ನೋಂದಣಿ ಸಿಬ್ಬಂದಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದ ಅಟಲ್ ಜೀ ಜನ ಸ್ನೇಹಿ ಕೇಂದ್ರದ ಆಧಾರ ನೋಂದಣಿ ಸಿಬ್ಬಂದಿ ಸರಿಯಾದ ಸಮಯಕ್ಕೆ ಬಾರದೆ ಇರುವುದು ಮತ್ತು ಒಂದು ಆಧಾರ್ ನೋಂದಣಿಗೆ ಬೆಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ. ಈ ವಿಚಾರವಾಗಿ ಅನೇಕ ಬಾರಿ ಮೌಖೀಕವಾಗಿ ಮತ್ತು ಲಿಖೀತವಾಗಿ ಅಧಿಕಾರಿಗಳಿಗೆ ತಿಳಿಸಿದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ದೂರಿದ್ದಾರೆ.
ಈಚೆಗೆ ಪಡಿತರ ಚೀಟಿಗೆ ಆಧಾರ್ ಜೋಡಣೆ ಮಾಡಿಸಬೇಕು ಎಂದು ಸರಕಾರ ಆದೇಶಿಸಿದ ಹಿನ್ನೆಲೆಯಲ್ಲಿ ದಿನನಿತ್ಯ ನೂರಾರು ಜನರು ಆಧಾರ್ ನೋಂದಣಿಗೆ ಆಗಮಿಸುತ್ತಿದ್ದಾರೆ. ಆದರೆ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ನೋಂದಣಿ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಜನರು ದಿನನಿತ್ಯ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಪಟ್ಟಣದ ಉಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಮಲ್ಲಿಕಾರ್ಜುನ ಸಂಗ್ವಾರ್, ನಾಗರಾಜ, ಹಣಮಂತ ಗೂಡೂರ, ಶಾಹಿದ್ ಕೂಡಲೂರ ಸೇರಿದಂತೆ ರಾಂಪೂರ, ಕೊಂಡಪೂರ, ಸಂಗ್ವಾರ್, ಮುನಗಲ್ ಸೇರಿದಂತೆ ವಿವಿಧ ಗ್ರಾಮಸ್ಥರು ನೂರಾರೂ ಸಂಖ್ಯೆಯಲ್ಲಿ ಆಗಮಿಸಿದ್ದರು.
ನಾನು ವಾರದಿಂದ ಆಧಾರ್ ತಿದ್ದುಪಡಿಗೆ ಬೆಳಗ್ಗೆ 5:00 ಗಂಟೆಗೆ ಬರುತ್ತಿದ್ದೇನೆ. ಆದರೆ ಇಲ್ಲಿನ ಕಂಪ್ಯೂಟರ್ ಆಪರೇಟರ್ ಹನ್ನೊಂದು ಗಂಟೆಗೆ ಆಗಮಿಸುತ್ತಾರೆ. ಇಂತಹ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.
•
ಸಾಬರೆಡ್ಡಿ ನಾಯಕ,
ಸೈದಾಪುರ ನಿವಾಸಿ