Advertisement

ಜನರಿಗೆ ಕ್ವಾರಂಟೈನ್‌ ಕೇಂದ್ರಗಳದ್ದೇ ಭೀತಿ

06:35 PM May 17, 2020 | Naveen |

ಸೈದಾಪುರ: ಅನ್ಯ ರಾಜ್ಯಗಳಿಗೆ ವಲಸೆ ಹೋಗಿದ್ದ ಜನರು ಇದೀಗ ಲಾಕ್‌ಡೌನ್‌ ನಂತರ ಸ್ವಗ್ರಾಮಗಳಿಗೆ ಹಿಂತಿರುಗುತ್ತಿದ್ದು, ಅವರೆಲ್ಲರಿಗೂ ಕ್ವಾರಂಟೈನ್‌ ಮಾಡುವುದಕ್ಕೆ ಸರ್ಕಾರಿ-ಖಾಸಗಿ ಶಾಲಾ ಕಟ್ಟಡಗಳನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಿರುವುದು ಪಟ್ಟಣದ ಜನರಲ್ಲಿ ಕೊರೊನಾ ಭೀತಿಯನ್ನುಂಟು ಮಾಡಿದೆ.

Advertisement

ಪಟ್ಟಣದ ಹೊರವಲಯದಲ್ಲಿರುವ ಖಾಸಗಿ ಮತ್ತು ಸರ್ಕಾರಿ ವಸತಿ ಶಾಲಾ ಕಟ್ಟಡಗಳಲ್ಲಿ ಗುರುವಾರದವರೆಗೆ ಬಹುತೇಕ ಪುಣೆ, ಮುಂಬೈ ಮತ್ತು ಹೈದ್ರಾಬಾದ್‌ ಮಹಾನಗರಗಳಿಂದ ಬಂದ ಸುಮಾರು 330 ಜನರಿಗೆ ಕ್ವಾರಂಟೈನ್‌ ಮಾಡಲಾಗಿದೆ. ಆದರೆ ಇಲ್ಲಿನ ಖಾಸಗಿ ಶಾಲಾ ಕಟ್ಟಡಕ್ಕೆ ತಡೆಗೋಡೆ ಇದಿಲ್ಲ ಹಾಗೂ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗೆ ಹೊಂದಿಕೊಂಡಿರುವುದರಿಂದ ವಲಸೆ ಕಾರ್ಮಿಕರು ರಸ್ತೆ ಮೇಲೆ ಅಲೆದಾಡುತ್ತಿರುವುದು ಸಾರ್ವಜನಿಕರಲ್ಲಿ ಕೊರೊನಾ ಹರಡುವಿಕೆ ಭೀತಿ ಹೆಚ್ಚಾಗಿದೆ. ಏಕೆಂದರೆ ಜಿಲ್ಲೆಯಲ್ಲಿ ಅನ್ಯ ರಾಜ್ಯದಿಂದ ಆಗಮಿಸಿ, ಕ್ವಾರಂಟೈನ್‌ ಮಾಡಿರುವ ಜನರಿಂದ ಕೊರೊನಾ ಬಂದಿದೆ.

ಅದಕ್ಕೋಸ್ಕರ ಪಟ್ಟಣದ ಹೊರ ವಲಯದಲ್ಲಿರುವ ಕ್ವಾರಂಟೈನ್‌ ಕೇಂದ್ರಗಳಿಗೆ ಹೆಚ್ಚಿನ ಭದ್ರತೆ ಹಾಗೂ ಅಲ್ಲಿನ ವಲಸಿಗರಿಗೆ ಮೂಲ ಸೌಕರ್ಯ ಒದಗಿಸಬೇಕೆಂದು ಇಲ್ಲಿನ ಜನ ಆಗ್ರಹಿಸುತ್ತಿದ್ದಾರೆ. ಕೇಂದ್ರದಲ್ಲಿರುವ ವಲಸಿಗರು ಗುಂಪು ಗುಂಪಾಗಿ ಊಟ ಮಾಡುತ್ತಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದರಿಂದ ಕ್ವಾರಂಟೈನ್‌ ಕೇಂದ್ರಗಳು ಕೋವಿಡ್ ಹಾಟ್‌ಸ್ಪಾಟ್‌ಗಳಾಗಿ ಮಾರ್ಪಾಡಾಗುತ್ತವೆಯೋ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

2 ಕೇಂದ್ರದಲ್ಲಿ ವಲಸಿಗರು: ಸೈದಾಪುರ ಪಟ್ಟಣದಲ್ಲಿ ಜಿಲ್ಲಾಡಳಿತ ವತಿಯಿಂದ ಎರಡು ಕ್ವಾರಂಟೈನ್‌ ಕೇಂದ್ರ ಸ್ಥಾಪಿಸಿ ವಲಸಿಗರನ್ನಿಡಲಾಗಿದೆ. ಆದರೆ ಅಲ್ಲಿರುವ ಪೊಲೀಸ್‌-ಕಂದಾಯ ಇಲಾಖೆ ಸಿಬ್ಬಂದಿಗೆ ಮುಂಜಾಗ್ರತಾ ಕ್ರಮವಾಗಿ ಯಾವುದೇ ಸುರಕ್ಷತೆ ಕಿಟ್‌ಗಳನ್ನು ವಿತರಿಸದಿರುವುದು ಕಂಡು ಬಂದಿದೆ. ಶೀಘ್ರ ಸುರಕ್ಷತೆ ಕ್ರಮ ಕೈಗೊಳ್ಳಬೇಕೆಂದು ಕೇಂದ್ರದಲ್ಲಿರುವ ಸಿಬ್ಬಂದಿ ಮನವಿ ಮನವಿ ಮಾಡಿಕೊಂಡಿದ್ದಾರೆ.

ಇಬ್ಬರು ಜಿಲ್ಲಾಸ್ಪತ್ರೆಗೆ ದಾಖಲು
ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಇಬ್ಬರು ವಲಸಿಗರಿಗೆ ಮೇ 13ರಂದು ರಾತ್ರಿ ತೀವ್ರ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆರೋಗ್ಯ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇದರಿಂದ ಆ ಕೇಂದ್ರದಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

Advertisement

ಸೈದಾಪುರ ಹೊರ ವಲಯದಲ್ಲಿ ಸ್ಥಾಪಿಸಿದ ಕ್ವಾರಂಟೈನ್‌ ಕೇಂದ್ರಗಳಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ. ಹಾಗೂ ಅಲ್ಲಿರುವ ವಲಸಿಗರು ಕೇಂದ್ರಗಳನ್ನು ಬಿಟ್ಟು ಹೊರ ಹೋಗದಂತೆ ಸೂಕ್ತ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.
ಮುಸ್ತಾಫ್‌,
ಕಂದಾಯ ನಿರೀಕ್ಷಕ, ಸೈದಾಪುರ

ಭೀಮಣ್ಣ ಬಿ ವಡವಟ್‌

Advertisement

Udayavani is now on Telegram. Click here to join our channel and stay updated with the latest news.

Next