ಸೈದಾಪುರ: ಧಾರಕಾರ ಸುರಿದ ಮಳೆಗೆ ಸೈದಾಪುರ ಪಟ್ಟಣ ಕೆರೆಯಾಗಿ ಪರಿವರ್ತನೆಯಾಗಿದ್ದರೂ ಜನಪ್ರತಿನಿಧಿಗಳು ಮತ್ತು ಗ್ರಾಪಂ ಆಡಳಿತ ಜಾಣ ಕುರಡರಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರವಿವಾರ ಮಧ್ಯಾಹ್ನ ಏಕಾಏಕಿ ಸುರಿದ ಮಳೆಗೆ ಪಟ್ಟಣದ ತಗ್ಗು ಪ್ರದೇಶದ ಜನವಸತಿ ಕೇಂದ್ರಗಳಾದ ತಾಯಿ ಕಾಲೋನಿ, ಗಂಗಾನಗರ, ಲಕ್ಷ್ಮೀನಗರ ಸೇರಿದಂತೆ ಹಲವು ಪ್ರದೇಶದ ಮನೆಗಳಿಗೆ ಚರಂಡಿ ನೀರು ಸೇರಿದಂತೆ ಮಳೆ ನೀರು ನುಗ್ಗಿದೆ. ಇದರಿಂದ ಇಲ್ಲಿನ ನಾಗರಿಕರು ಮಳೆಯಲ್ಲಿಯೇ ಮನೆಗಳಿಗೆ ನುಗ್ಗುವ ನೀರನ್ನು ತಡೆಯಲು ಹರಸಾಹಸ ಪಟ್ಟರು. ನಡುಗಡ್ಡೆಯಾದ ಸೈದಾಪುರ ನೆಮ್ಮದಿ ಕೇಂದ್ರ: ನಿತ್ಯ ಸಾಕಷ್ಟು ಸಂಖ್ಯೆಯಿಂದ ಕೂಡಿರುತ್ತಿದ್ದ
ನೆಮ್ಮದಿ ಕೇಂದ್ರ ಕಚೇರಿ ಮಳೆಯಿಂದ ನೀರು ಆವರಿಸಿ ನಡುಗಡ್ಡೆಯಂತಾಗಿದೆ. ಕಚೇರಿಯಲ್ಲಿನ ದಾಖಲೆಗಳು ಹಾಳಾಗುವ ಸಂಭವ ಇದೆ. ಕೊಳಚೆ ನೀರು ತುಂಬಿದ ತಾಯಿ ಕಾಲೋನಿ: ಪಟ್ಟಣದ ತಾಯಿ ಕಾಲೋನಿಯಲ್ಲಿ ಒಳಚರಂಡಿ ಸಂಪೂರ್ಣ ಅವೈಜ್ಞಾನಿಕದಿಂದ ಕೂಡಿದೆ. ಮಳೆ ನೀರಿನ ಜೊತೆ ಚಂರಡಿ ನೀರು ಸಂಗ್ರಹವಾಗಿ ಸಂಪೂರ್ಣವಾಗಿ ಕೊಳಚೆ ನೀರಿನ ಕೆರೆಯಾಗಿದೆ. ಆತಂಕದಲ್ಲಿ ರೈತರು: ಅತಿಯಾದ ಮಳೆಯಿಂದ ಜಮೀನಿನಲ್ಲಿ ನೀರು ಆವರಿಸಿ ತೊಗರಿ, ಹತ್ತಿ ಬೆಳೆಗಾರರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ಮನೆಗಳ ಛಾವಣಿ ಕುಸಿದು ತೊಂದರೆ ಅನುಭಸುವಂತಾಗಿದೆ.
Advertisement
ಶಾಸಕರು-ಜಿಲ್ಲಾಧಿಕಾರಿ ಗಮನಕ್ಕೆಪಟ್ಟಣದ ಬಹುತೇಕ ಒಳ ಚರಂಡಿಗಳು ಅವೈಜ್ಞಾನಿಕವಾಗಿವೆ. ಅದರಲ್ಲಿ ಪಟ್ಟಣದ ಪ್ರಮುಖ ರಸ್ತೆಯಾದ ಅಂಬಿಗರ ಚೌಡಯ್ಯ ವೃತ್ತದಿಂದ ರೈಲ್ವೆ ಗೇಟ್‌ವರೆಗೆ ಸಿಸಿ ರಸ್ತೆ ನಿರ್ಮಿಸಲು ರಸ್ತೆ ಅಗೆದ ಮಣ್ಣು, ಅಲ್ಪ ಸ್ವಲ್ಪ ಚರಂಡಿ ನೀರು ಸಾಗುವ ದಾರಿಗಳನ್ನು ಮುಚ್ಚಿವೆ. ಈ ಕುರಿತು ಶಾಸಕರಿಗೆ, ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ.