ಸೈದಾಪುರ: ಮುಂಬೈ, ಪುಣೆಯಿಂದ ಪಟ್ಟಣಕ್ಕೆ ಆಗಮಿಸಿದ ಜನರನ್ನು ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ಕಳೆದ ಹದಿನೈದು ದಿನಗಳಿಂದ ಕ್ವಾರಂಟೈನ್ ಮಾಡಲಾಗಿತ್ತು. ಕಾರ್ಮಿಕರ ವರದಿ ನೆಗೆಟಿವ್ ಬಂದಿದ್ದರಿಂದ ಕಾರ್ಮಿಕರನ್ನು ಮನೆಗೆ ಕಳುಹಿಸಲಾಯಿತು.
ಒಟ್ಟು 254 ವಲಸೆ ಕಾರ್ಮಿಕರ ಕ್ವಾರಂಟೈನ್ ಅವಧಿ ಮುಗಿದಿದ್ದರಿಂದ ಹಾಗೂ ಮೇ 25 ರಂದು ಬೆಂಗಳೂರಿಗೆ ಕಳುಹಿಸಿದ ಸ್ವ್ಯಾಬ್ ಟೆಸ್ಟ್ ವರದಿಯು ನೆಗೆಟಿವ್ ಬಂದಿದ್ದು, ಈ ವರದಿಯನ್ನು ಆಧರಿಸಿ ಜಿಲ್ಲಾ ಧಿಕಾರಿ ಅನುಮತಿ ಮೇರೆಗೆ 254 ಜನರನ್ನು ಶನಿವಾರ ಮನೆಗೆ ಕಳುಹಿಸಿಕೊಡಲಾಯಿತು.
ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಗೊಳಿಸಿದ ಎಲ್ಲರಿಗೂ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಪ್ರಮಾಣ ಪತ್ರ ವಿತರಿಸಿದರು. ಕ್ವಾರಂಟೈನಲ್ಲಿದ ಜನರಿಗೆ ಕೈಗಳ ಮೇಲೆ ಸೀಲ್ ಹಾಕಿ, ಇಲ್ಲಿಂದ ಮನೆಗೆ ಹೋದ ನಂತರವು ಪ್ರತಿಯೊಬ್ಬರು ಹದಿನಾಲ್ಕು ದಿನಗಳವರೆಗೆ ಮನೆಯಲ್ಲಿಯೇ ಸುರಕ್ಷಿತ ಅಂತರ ಕಾಪಾಡಿಕೊಂಡು ಇರುವಂತೆ ಸೂಚಿಸಿದರು. ಅಲ್ಲದೇ ಆರೋಗ್ಯದಲ್ಲಿ ಏನಾದರು ತೊಂದರೆ ಕಾಣಿಸಿಕೊಂಡರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಿಗೆ ಬಸ್ ಗಳ ಮೂಲಕ ಅವರವರ ಮನೆಗಳಿಗೆ ಹೋಗಲು ವ್ಯವಸ್ಥೆ ಮಾಡಲಾಗಿತ್ತು.
ತಹಶೀಲ್ದಾರ್ ಚೆನ್ನಮಲ್ಲಪ್ಪ ಘಂಟಿ, ಉಪತಹಶೀಲ್ದಾರ್ ಗೋಪಾಲ ಕಪೂರ, ಕಂದಾಯ ನಿರೀಕ್ಷಕ ಮುಸ್ತಾಫ್, ಡಾ.ಮುದ್ದು ಸರ್ ಅಹ್ಮದ್, ಕಲ್ಲಪ್ಪ ಜಂಜಿಗಡ್ಡಿ, ಕುಬೇರಾ, ಮಂಜುನಾಥ, ಶೇಖ್ ಹಸನ್, ವೆಂಕಟೇಶ, ಅಹ್ಮದ್ ಅಜ್ಮೀರ್ ಬಾಡಿಯಾಲ, ಶಿವರಾಜ, ನಾಗೇಂದ್ರಪ್ಪ ಮಾಧ್ವಾರ, ಸೇರಿದಂತೆ ಇತರರಿದ್ದರು.