ಸೈದಾಪುರ: ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಬಿಸಿಲಿನ ತಾಪ ಹೊಂದಿರುವ ಜಿಲ್ಲೆಗಳ ಪೈಕಿ ಗಿರಿಗಳ ನಾಡು ಯಾದಗಿರಿ ಜಿಲ್ಲೆ ಕೂಡ ಒಂದಾಗಿದೆ.
ಸೈದಾಪುರ ಸುತ್ತಲಿನ ಗ್ರಾಮದ ಜನ ಬೇಸಿಗೆ ಸುಡು ಬಿಸಿಲಿನ ಪ್ರಖರತೆಗೆ ತತ್ತರಿಸಿ ಹೋಗಿದ್ದಾರೆ. ಉಷ್ಣಾಂಶ ಈಗಾಗಲೇ 44 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆ ಕಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಜನ ಬಿಸಿಲಿನ ತಾಪ ತಪ್ಪಿಸಿಕೊಳ್ಳಲು ಗ್ರಾಮದ ಅಗಸಿ ಕಟ್ಟೆ ಅಥವಾ ದೇವಸ್ಥಾನ ಮುಂದಿನ ಮರಗಳ ಕೆಳಗೆ ಕುಳಿತು ಕಾಲ ಕಳೆಯುತ್ತಿದ್ದಾರೆ. ಯುವಕರಂತೂ ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಈಜು ಮೊರೆ ಹೋಗಿದ್ದಾರೆ.
ರೈತರು ನೇಗಿಲು, ಕುಂಟೆ ಹೊಡೆಯಲು ಬೆಳಗ್ಗೆ 6:00 ಗಂಟೆಗೆ ಹೋಗಿ 9:00 ಗಂಟೆ ಒಳಗೆ ಮನೆ ಸೇರಿಕೊಳ್ಳುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಮನುಷ್ಯ ಸೇರಿದಂತೆ ಜಾನುವಾರಗಳು ತೀರಾ ತೊಂದರೆ ಅನುಭವಿಸುತ್ತಿವೆ. ಕುಡಿಯಲು ನೀರಿನ ಕೊರತೆ ಕಂಡು ಬುರುತ್ತಿದ್ದು, ಜಾನುವಾರಗಳಿಗೆ ಪಯ್ನಾಯ ವ್ಯವಸ್ಥೆ ಕಲ್ಪಿಸಬೇಕಾಗಿದೆ.
ಮನೆ ಬಿಟ್ಟು ಹೊರ ಬಂದರೆ ಸಾಕು ಬಿರು ಬಿಸಿಲಿನ ತಾಪ ಮೈ ಮೇಲೆ ಕೆಂಡ ಬಿದ್ದಂತಾಗುತ್ತದೆ. ಬಿಸಿಲಿನ ತಾಪದ ಪರಿಣಾಮ ಬಹುತೇಕ ಮದುವೆ ಹಾಗೂ ಇತರೆ ಕಾರ್ಯಗಳಿಗೆ ಹೊರ ಹೋಗಲು ಸಾಧ್ಯವಾಗುತ್ತಿಲ್ಲ.
•
ಸುರೇಶ ಆನಂಪಲ್ಲಿ,
ಸ್ಥಳೀಯ ನಿವಾಸಿ