ಸೈದಾಪುರ: ಸಮಸ್ತ ಜೀವ ರಾಶಿಗಳಿಗೆ ಒಳಿತಾಗಲಿ ಎಂಬ ಸಂಕಲ್ಪದೊಂದಿಗೆ ಲೋಕ ಕಲ್ಯಾಣಕ್ಕಾಗಿ ಅನುಷ್ಠಾನ ಮಾಡಲಾಗಿದೆ ಎಂದು ನೆರಡಗಂ ವಿರಕ್ತ ಮಠದ ಪಂಚಮ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.
ಸಮೀಪದ ಕೃಷ್ಣಾ ನದಿ ತಟದಲ್ಲಿರುವ ಗುರ್ಜಾಲ ಗ್ರಾಮದ ಸಿದ್ಧಲಿಂಗೇಶ್ವರ ಶಾಖಾ ಮಠದಲ್ಲಿ ನಡೆದ 21 ದಿನಗಳ ಮೌನ ಅನುಷ್ಠಾನ ಮಂಗಲ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಅನುಷ್ಠಾನ ಕುಳಿತ ನಾಲ್ಕನೇ ದಿನಕ್ಕೆ ಕೃಷ್ಣೆ ಮೈದುಂಬಿ ಹರಿಯುತ್ತಿದ್ದು, ಸುತ್ತಲು ಜಲ ಆವರಿಸಿ ನಡುಗಡ್ಡೆಯಂತಾಯಿತು. ಆದರೆ ಗುರುವಿನ ಕೃಪೆಯಿಂದ ನಮಗೆ ಯಾವುದೇ ರೀತಿ ಭಯ ಕಾಡಲಿಲ್ಲ. ಬದಲಿಗೆ ನೀರನ್ನು ಕಂಡು ಮನಸ್ಸಿಗೆ ಖುಷಿ ಆಯ್ತು, ಭಕ್ತರ ಸಹಕಾರ ಹಾಗೂ ನೆರವಿನೊಂದಿಗೆ ಮೌನ ಅನುಷ್ಠಾನ ಯಶಸ್ವಿಯಾಯಿತು ಎಂದು ತಿಳಿಸಿದರು.
ಮೌನ ಅನುಷ್ಠಾನ ಮಂಗಲ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬಳ್ಳಾರಿಯ ಸುವರ್ಣಗಿರಿ ವಿರಕ್ತ ಮಠ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ವಹಿಸಿಕೊಂಡಿದ್ದರು. ಶಹಾಪುರ ಪಕೀರೇಶ್ವರ ಮಠದ ಗುರುಪಾದ ಸ್ವಾಮಿಗಳು, ಕಡೇಚೂರು ಹಿರೇಮಠ ಸಂಸ್ಥಾನದ ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು, ರಾಯಚೂರಿನ 108 ಸಾವಿರ ದೇವರ ಸಂಸ್ಥಾನದ ಬಿಲ್ಲೆಮಠದ ಶಾಂತಮಲ್ಲಿ ಶಿವಾಚಾರ್ಯ ಸ್ವಾಮಿಗಳು, ಶಿವಲಿಂಗ ಮಹಾಸ್ವಾಮಿಗಳು, ಶಂಭುಲಿಂಗ ಸ್ವಾಮಿಗಳು, ಸಿದ್ಧರಾಮ ದೇವರು, ಸದಾಶಿವ ದೇವರು, ಶಿವ ಬಸವ ದೇವರು, ಚಂದ್ರಶೇಖರ ದೇವರು, ಸೂಗೂರಯ್ಯ ಸ್ವಾಮಿಗಳು ಸೇರಿದಂತೆ ಅಪಾರ ಸಂಖ್ಯೆಯ ಭಕ್ತ ಸಮೂಹ ಸೇರಿತ್ತು.