ಭೀಮಣ್ಣ ಬಿ. ವಡವಟ್
ಸೈದಾಪುರ: ಬೆಳಗುಂದಿ ಗ್ರಾಪಂ ವ್ಯಾಪ್ತಿಯ ಆನೂರು ಬಿ ಗ್ರಾಮದಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ದಿಂದಾಗಿ ಅನೇಕ ಸಮಸ್ಯೆಗಳು ಎದುರಾಗಿವೆ.
ಆನೂರು ಬಿ ಗ್ರಾಮದಲ್ಲಿ ಸುಮಾರು 700ರಿಂದ 800 ಜನಸಂಖ್ಯೆ ಇದೆ. ಮೂಲಭೂತ ಸೌಕರ್ಯ ಸೇರಿದಂತೆ ಹಲ ಸಮಸ್ಯೆಗಳು ಜನರನ್ನು ನಿದ್ದೆಗೆಡಿಸಿವೆ. 2018ರಲ್ಲಿ ನಿರ್ಮಾಣವಾದ ಶುದ್ಧ ನೀರಿನ ಘಟಕ ಪ್ರಾರಂಭವಾದ ಕೇವಲ ಒಂದು ವರ್ಷದಲ್ಲಿ ಸಾರ್ವಜನಿಕರಿಗೆ ಒದಗಿಸುವ ತನ್ನ ಸೇವೆ ಸ್ಥಗಿತಗೊಳಿಸಿದೆ.
ಅಸಮರ್ಪಕ ವಿದ್ಯುತ್ ಪೂರೈಕೆ ಮತ್ತು ಸೀಮಿತವಾದ ನೀರಿನ ಕೊಳವೆ ಬಾವಿ ಇಲ್ಲದಿರುವುದು ಇದಕ್ಕೆ ಕಾರಣ. ನೀರು ಶುದ್ಧೀಕರಣ ಯಂತ್ರೋಪಕರಣಗಳು ತುಂಬಾ ಕಳಪೆಯಾಗಿವೆ. ಒಂದು ವರ್ಷದಲ್ಲಿ ಹಾಳಾಗಿವೆ. ಇದರಿಂದ ಜನರು ನಿತ್ಯ ದೂರದ ಕೊಳವೆ ಬಾವಿ ನೀರು ಕುಡಿಯಲು ಮತ್ತು ಬಳಸಲು ಅವಲಂಬಿಸಿದ್ದಾರೆ.
ಗ್ರಾಮದ ಸರ್ಕಾರಿ ಶಾಲೆಯಲ್ಲಿ ಉತ್ತಮವಾದ ಮಕ್ಕಳ ಹಾಜರಾತಿ ಇದೆ. ಆದರೆ ಸರಿಯಾದ ಆಟದ ಮೈದಾನ, ತರಗತಿ ಕೋಣೆಗಳ ಕೊರತೆ ಕಾಡುತ್ತಿದೆ. ಗ್ರಾಮದ ಮಧ್ಯ ಮತ್ತು ರಸ್ತೆ ಪಕ್ಕದಲ್ಲಿ ಶಾಲೆ ಇದೆ. ವಾಹನಗಳ ಕಿರಿಕಿರಿಯಿಂದ ಮಕ್ಕಳಿಗೆ ಅಭ್ಯಾಸದ ಕಡೆ ಗಮನ ಕೇಂದ್ರಿಕರಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮವಾದ ವಾತಾವರಣ ನಿರ್ಮಿಸಬೇಕು ಎಂಬುದು ಇಲ್ಲಿನ ಶಿಕ್ಷಣ ಪ್ರೇಮಿಗಳ ಒತ್ತಾಯವಾಗಿದೆ.
ನೈರ್ಮಲ್ಯ ಸಮಸ್ಯೆಯಿಂದ ವಿವಿಧ ಸಾಂಕ್ರಾಮಿಕ ರೋಗ ಹರಡುವ ಭಯದಲ್ಲಿ ಜನರು ಜೀವಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ಚರಂಡಿ ನಿರ್ಮಿಸದೇ ಇರುವುದರಿಂದ ಕೊಳಚೆ ನೀರು ರಸ್ತೆಯಲ್ಲಿ ಹರಿದು ಮನೆ ಮುಂದಿನ ಅಂಗಳದಲ್ಲಿ ನಿಂತು ಕೆಟ್ಟ ವಾಸನೆ ಬೀರುತ್ತಿದೆ. ಇದರಿಂದಾಗಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಗ್ರಾಮದಲ್ಲಿ ರಸ್ತೆಸಂಪೂರ್ಣ ಹದಗೆಟ್ಟಿದೆ. ರಸ್ತೆ ಸಂಚಾರಕ್ಕೆ
ಯೋಗ್ಯವಲ್ಲದಂತಾಗಿದೆ.
ಎಲ್ಲೆಂದರಲ್ಲಿ ಆಳವಾದ ತಗ್ಗುಗಳು, ಜಲ್ಲಿಕಲ್ಲುಗಳು ಬಿದ್ದಿವೆ. ಹಾಗಾಗಿ ಪ್ರಯಾಣಿಕರು, ವಾಹನ ಸವಾರರು ಹರಸಾಹಸಪಡುತ್ತ ಸಂಚರಿಸುವುದು ಸಾಮಾನ್ಯವಾಗಿದೆ.