Advertisement

ಪೂಜೆ-ಉದ್ಘಾಟನೆಗೆ ಆಹ್ವಾನಿಸದ್ದಕ್ಕೆ ಆಕ್ರೋಶ

01:19 PM Feb 18, 2017 | Team Udayavani |

ದಾವಣಗೆರೆ: ಜನರ ಸಮಸ್ಯೆಗಳ ಬಿಟ್ಟು ಜನಪ್ರತಿನಿಧಿಗಳು ತಮ್ಮ ಹಕ್ಕುಗಳ ಕುರಿತು ಚರ್ಚೆಯಲ್ಲೇ ಶುಕ್ರವಾರ ನಡೆದ ಜಿಲ್ಲಾ ಪಂಚಾಯತ್‌ ಸಾಮಾನ್ಯ ಸಭೆ ಮುಳುಗಿಹೋಯಿತು.  ಜಿಲ್ಲೆಯಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆಯಿಂದ ಜನ ತತ್ತರಿಸುತ್ತಿದ್ದಾರೆ.

Advertisement

ಈ ಕುರಿತು ಚರ್ಚಿಸಬೇಕಾದ ಜಿಪಂ ಸದಸ್ಯರು, ನಮ್ಮನ್ನು ಕರೆಯದೇ ಅದು ಹೇಗೆ ಅಧಿಕಾರಿಗಳು ಕುಡಿಯುವ ನೀರಿನ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸುತ್ತಾರೆ?. ಜಿಪಂ ಸದಸ್ಯರಿಗೆ ಯಾವುದೇ ಸ್ಥಾನಮಾನ ಇಲ್ಲವೆ? ಶಾಸಕರು ಮಾತ್ರ ಎಲ್ಲಾ ಅಧಿಕಾರ ಅನುಭವಿಸಬೇಕೆ? ಎಂದೆಲ್ಲಾ ಹರಿಹಾಯ್ದರು. 

ಆಡಳಿತರೂಢ ಬಿಜೆಪಿಯ ಬಾನುವಳ್ಳಿ ಕ್ಷೇತ್ರದ ಸದಸ್ಯ ಬಿ.ಎಂ. ವಾಗೀಶ್‌ ಸ್ವಾಮಿ, ಹರಿಹರ ತಾಲೂಕಿನ ಕೆಲ ಗ್ರಾಮಗಳಲ್ಲಿ ಇಂದೇ ಕೆಲ ಕುಡಿಯುವ ನೀರಿನ ಕಾಮಗಾರಿಗಳ ಗುದ್ದಲಿ ಪೂಜೆ ಇಟ್ಟುಕೊಂಡಿದ್ದಾರೆ. ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಹರಿಹರ ಶಾಸಕರ ಒತ್ತಡಕ್ಕೆ ಮಣಿದು ಈ ರೀತಿ ಮಾಡುತ್ತಿದ್ದಾರೆ.

ನಮಗೆ ಯಾವುದೇ ಹಕ್ಕುಭಾದ್ಯತೆಗಳಿಲ್ಲವೇ? ಎಂದು ಪ್ರಶ್ನಿಸಿದರು. ಈ ಹಿಂದೆ ನಮ್ಮ ಜಿಪಂ ಕಾಮಗಾರಿ ಅನುಷ್ಠಾನದಲ್ಲೂ ಶಾಸಕರು ಹಸ್ತಕ್ಷೇಪ  ಮಾಡುತ್ತಾರೆ ಎಂಬುದನ್ನು ನಾವು ವಿರೋಧಿಸಿದ್ದೆವು. ಕೊನೆಗೆ ಜನತೆಯ ಹಿತದೃಷ್ಟಿಯಿಂದ ಕಾಮಗಾರಿನಡೆದರೆ ಸಾಕು ಎಂದುಕೊಂಡು ನಾವೇ ಹೊಂದಿಕೊಂಡೆವು.

ಆದರೆ, ಇದೀಗ ಅಧಿಕಾರಿಗಳು ನಮ್ಮನ್ನು ಸಂಪೂರ್ಣ ಕಡೆಗಣಿಸುತ್ತಿದ್ದಾರೆ ಎಂದು ದೂರಿದರು. ಅಧಿಕಾರಿಗಳು ಸಹ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಶಾಸಕರಾದರೆ ಅವರಿಗೇನು ಕೊಂಬಿಲ್ಲ. ನಮ್ಮಂತೆಯೇ ಅವರು ಜನರಿಂದ ಆಯ್ಕೆಯಾದವರು. ನಾನು 25 ಸಾವಿರ ಮತ ಪಡೆದು ಆಯ್ಕೆಯಾದ ಪ್ರತಿನಿಧಿ.

Advertisement

ಅವರಿಗೆ 2 ಲಕ್ಷ ಮತದಾರರು ಮತ ಹಾಕಿರಬಹುದು ಎಂದು ಹರಿಹಾಯ್ದು, ನಮಗೆ ಮರ್ಯಾದೆ ಇಲ್ಲದಇಂತಹ ಸ್ಥಾನ ಬೇಡ. ನಾವೇನು ದುಡ್ಡು ಕೊಟ್ಟು  ಬಂದು ಇಲ್ಲಿ ಸದಸ್ಯರಾಗಿಲ್ಲ. ಇಂತಹ ಸ್ಥಾನಕ್ಕೆ ನನ್ನದು ಧಿಕ್ಕಾರ ಇದೆ ಎಂದು ಸಭೆಯಿಂದ ಹೊರ ನಡೆದರು. ಕಾಂಗ್ರೆಸ್‌ ಸದಸ್ಯರಾದ ಬಸವಂತಪ್ಪ, ಓಬಳೇಶಪ್ಪ ಇತರರು ಹೋಗಿ ವಾಗೀಶ ಸ್ವಾಮಿಯವರನ್ನು ಮನವೊಲಿಸಿ, ಕರೆತಂದರು. 

ಈತನ್ಮಧ್ಯೆ ಕುಡಿಯುವ ನೀರು ಇಲಾಖೆಯ ಸಹಾಯಕ ಅಭಿಯಂತರರು ಈ ಕುರಿತು ನಮಗೂ ಸಹ ಮಾಹಿತಿ ಇಲ್ಲ. ಹೀಗಾಗಿಯೇ ನಾವು ಸದಸ್ಯರ ಗಮನಕ್ಕೆ  ತರಲಾಗಿಲ್ಲ ಎಂದು ಉತ್ತರಿಸಿದರು. ಇದರಿಂದ ಕುಪಿತಗೊಂಡ ಸದಸ್ಯರಾದ ಓಬಳೇಶ, ಉತ್ತಂಗಿ ಮಂಜುನಾಥ, ಜೆ. ಸುನಿತಾ ಇತರರು ಅಧಿಕಾರಿ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 

ಆಗ ಮಧ್ಯ ಪ್ರವೇಶಿಸಿದ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್‌. ಅಶ್ವತಿ, ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡು ಇಂತಹ ವಿಷಯಗಳ ಕುರಿತು ಒಂದು ತಾಸು ಚರ್ಚೆ ನಡೆಸುವ ಅಗತ್ಯವಿದೆಯಾ? ನೀವು ಸದಸ್ಯರಿಗೆ ಮಾಹಿತಿ ನೀಡಬೇಕಲ್ಲವೇ? ಇನ್ನು ಮುಂದೆ ಹೀಗಾಗದ ಹಾಗೆ ನೋಡಿಕೊಳ್ಳಿ ಸೂಚಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next