ದಾವಣಗೆರೆ: ಒಂದನೇ ವಾರ್ಡ್‌ನ ಎಸ್‌ಜೆಎಂ ನಗರದ ಚೌಡೇಶ್ವರಿ ದೇವಸ್ಥಾನ ಮುಂದಿನ ಕಮಾನನ್ನು ಮಹಾನಗರ ಪಾಲಿಕೆಯಲ್ಲಿರುವ ಹಿಂದೂ ವಿರೋಧಿ ಅಧಿಕಾರಿಗಳು ವಿನಾಕಾರಣ ತೆರವುಗೊಳಿಸಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ, ಯುವ ಬಿಜೆಪಿ ಕಾರ್ಯಕರ್ತರು ಸೋಮವಾರ ಉಪ ವಿಭಾಗಾಧಿಕಾರಿ ಕಚೇರಿ ವೃತ್ತದಲ್ಲಿ 2 ಗಂಟೆಗೂ ಅಧಿಕ ಕಾಲ ರಸ್ತೆ ತಡೆದು, ಪ್ರತಿಭಟನೆ ನಡೆಸಿದರು.
ಚೌಡೇಶ್ವರಿ ದೇವಸ್ಥಾನದ ಮುಂದಿನ ಕಮಾನು ತೆರವುಗೊಳಿಸಿರುವ ನಗರಪಾಲಿಕೆ ಅಧಿಕಾರಿಗಳು ಪುನಾಃ ಅದೇ ಸ್ಥಳದಲ್ಲಿ ಕಮಾನು ನಿರ್ಮಿಸಿ ಕೊಡಬೇಕು. ಕಮಾನನ್ನು ಅಕ್ರಮವಾಗಿ ಕಟ್ಟಲಾಗಿದೆ ಎನ್ನುವುದಾದರರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಅಕ್ರಮ ಕಟ್ಟಡ ತೆರವುಗೊಳಿಸಬೇಕು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾಕರು, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
2 ಗಂಟೆಗೂ ಅಧಿಕ ಕಾಲ ರಸ್ತೆ ತಡೆ ನಡೆಸಿದರು. ದಿಢೀರ್ ರಸ್ತೆ ತಡೆಯಿಂದ ಸಂಚಾರದಲ್ಲಿ ಸಾಕಷ್ಟು ವ್ಯತ್ಯಯ ಉಂಟಾಯಿತು. ಸ್ಥಳಕ್ಕಾಗಮಿಸಿದ ಪೊಲೀಸರು ರಸ್ತೆ ತಡೆ ತೆರವುಗೊಳಿಸುವಂತೆ ಮನವಿ ಮಾಡಿದರು. ಆದರೆ, ಪ್ರತಿಭಟನಾಕಾರರು ತಮ್ಮ ಪಟ್ಟು ಬಿಡಲಿಲ್ಲ.
ಇದರಿಂದಾಗಿ ತೀವ್ರ ಮಾತಿನ ಚಕಮಕಿ, ವಾಗ್ವಾದವೇ ನಡೆಯಿತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಒಂದು ವಾರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ಪ್ರತಿಭಟನೆಗೆ ಕಾರಣ: ಎಸ್‌ಜೆಎಂ ನಗರದ ಚೌಡೇಶ್ವರಿ ದೇವಸ್ಥಾನದ ಮುಂದೆ ಅಕ್ರಮವಾಗಿ ಕಮಾನು ಕಟ್ಟಲಾಗಿದೆ ಎಂಬ ಕಾರಣದಿಂದ ನಗರಪಾಲಿಕೆ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಿದ್ದಾರೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆರೋಪವಾಗಿತ್ತು.
ಧಾರ್ಮಿಕ ಶ್ರದ್ಧಾ ಕೇಂದ್ರದ ಕಮಾನನ್ನು ತೆರವುಗೊಳಿಸಿರುವಂಥಹ ಅಧಿಕಾರಿಗಳು ಕಮಾನನ್ನು ಪುನರ್ ನಿರ್ಮಾಣ ಮಾಡಿಕೊಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿತ್ತು. ಹಾಗಾಗಿ ದಿಢೀರ್ ಪ್ರತಿಭಟನೆ, ರಸ್ತೆ ತಡೆ ನಡೆಸಲಾಯಿತು.