ಶಿರಿಯಾರ ಗ್ರಾ.ಪಂ. ವ್ಯಾಪ್ತಿಯ ಸಾೖಬ್ರಕಟ್ಟೆ ಮುಖ್ಯ ಪೇಟೆಯಲ್ಲಿ ಮಂಗಳವಾರ ಹಲವು ದಶಕದಿಂದ ಗ್ರಾಮೀಣ ಸಂತೆ ನಡೆಯುತ್ತದೆ. ಉತ್ತರಕ್ಕೆ ಶಿರಿಯಾರ ಗ್ರಾ.ಪಂ., ದಕ್ಷಿಣಕ್ಕೆ ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯನ್ನು ಈ ಪ್ರದೇಶ ಒಳಗೊಂಡಿದೆ. ಆದರೆ ಸಂತೆಗೆ ವ್ಯವಸ್ಥಿತವಾದ ಮಾರುಕಟ್ಟೆ ಇಲ್ಲದಿರುವುದರಿಂದ ಗ್ರಾಹಕರು, ವ್ಯಾಪಾರಿಗಳು ಪ್ರತಿ ವಾರ ಸಮಸ್ಯೆ ಎದುರಿಸುತ್ತಿದ್ದಾರೆ. ಶೀಘ್ರ ಮೂಲ ಸೌಕರ್ಯಗಳೊಂದಿಗೆ ಸಂತೆ ಮಾರುಕಟ್ಟೆ ನಿರ್ಮಿಸುವ ಕುರಿತು ಸಂಬಂಧಿತರು ಗಮನಹರಿಸಬೇಕಿದೆ.
ಕೋಟ: ಕೋಟ ಹೋಬಳಿಯ ಸಾೖಬ್ರಕಟ್ಟೆಯ ಮಂಗಳವಾರದ ಸಂತೆ ಉಡುಪಿ ಜಿಲ್ಲೆಯ ಪ್ರಮುಖ ಗ್ರಾಮೀಣ ಸಂತೆಗಳಲ್ಲಿ ಒಂದು. ಸುತ್ತಲಿನ ಶಿರಿಯಾರ, ಯಡ್ತಾಡಿ, ವಡ್ಡರ್ಸೆ, ಬಿಲ್ಲಾಡಿ ಗ್ರಾ.ಪಂ. ವ್ಯಾಪ್ತಿಯ ಹತ್ತಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು ಇಲ್ಲಿಗೆ ವ್ಯಾಪಾರಕ್ಕಾಗಿ ಆಗಮಿಸುತ್ತಾರೆ. ಹಳ್ಳಿಯ ರೈತರು ಮನೆಯಲ್ಲಿ ಬೆಳೆದ ತರಕಾರಿ, ಹಣ್ಣು ಹಂಪಲುಗಳನ್ನು ನೇರವಾಗಿ ಇಲ್ಲಿಗೆ ತಂದು ಮಾರಾಟ ನಡೆಸುವ ಪರಿಪಾಠ ಹಲವು ದಶಕಗಳಿಂದ ಬೆಳೆದು ಬಂದಿದೆ. ಹೀಗಾಗಿ ಈ ಸಂತೆಗೆ ಗ್ರಾಹಕರು ಕೂಡ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಇಷ್ಟೆಲ್ಲ ಅನುಕೂಲಗಳಿದ್ದರೂ ಸಂತೆಗೆ ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಇದರಿಂದಾಗಿ ಗ್ರಾಹಕರು, ವ್ಯಾಪಾರಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.
ಸ್ಥಳಾವಕಾಶದ ಸಮಸ್ಯೆ :
ಜಿಲ್ಲೆಯ ಹಲವು ಕಡೆಗಳಲ್ಲಿ ಎ.ಪಿ.ಎಂ.ಸಿ. ವತಿಯಿಂದ ಸುಸಜ್ಜಿತ ಸಂತೆ ಮಾರುಕಟ್ಟೆ ನಿರ್ಮಾಣವಾಗಿದೆ. ಹೀಗಾಗಿ ಇಲ್ಲಿಯೂ ವ್ಯವಸ್ಥಿತವಾದ ಮಾರುಕಟ್ಟೆ ನಿರ್ಮಿಸಬೇಕು. ಈ ಮೂಲಕ ಐತಿಹಾಸಿಕ ಸಂತೆಯನ್ನು ಉಳಿಸಿಕೊಳ್ಳಬೇಕು ಎಂದು ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸಿದ್ದಾರೆ.
ಆದರೆ ಪ್ರಸ್ತುತ ಸಂತೆ ನಡೆಯುತ್ತಿರುವ ಜಾಗದಲ್ಲಿ ಅಗತ್ಯ ಪ್ರಮಾಣದ ಸರಕಾರಿ ಸ್ಥಳಾವಕಾಶವಿಲ್ಲ ಹಾಗೂ ಅಕ್ಕ-ಪಕ್ಕದಲ್ಲಿ ಕೂಡ ಸರಕಾರಿ ನಿವೇಶನವಿಲ್ಲ ಎಂದು ಸ್ಥಳೀಯಾಡಳಿತ ಹೇಳಿಕೊಂಡು ಬಂದಿದೆ. ಇದು ನಿಜವಾದಲ್ಲಿ ಪೇಟೆಯ ದಕ್ಷಿಣ ಭಾಗದಲ್ಲಿರುವ ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಾರುಕಟ್ಟೆ ನಿರ್ಮಿಸಲು ಅಗತ್ಯವಿರುವ ಸರಕಾರಿ ಜಾಗದ ಲಭ್ಯತೆ ಕುರಿತು ಪರಿಶೀಲಿಸಬೇಕಿದೆ ಅಥವಾ ಶಿರಿಯಾರ ಗ್ರಾ.ಪಂ.ನಿಂದಲೇ ಖಾಸಗಿ ಜಾಗವನ್ನು ಖರೀದಿಸಿಯಾದರೂ ಸೂಕ್ತ ಜಾಗವನ್ನು ಕಾಯ್ದಿರಿಸಬೇಕಿದೆ.
ಗ್ರಾಮೀಣ ಅರ್ಥಿಕತೆಗೆ ಪುಷ್ಟಿ :
ಪ್ರತಿ ಮಂಗಳವಾರ ಸುತ್ತ ಹತ್ತೂರಿನ ಸಾವಿರಾರು ಮಂದಿ ಸಂತೆ ವ್ಯಾಪಾರಕ್ಕಾಗಿ ಇಲ್ಲಿಗೆ ಆಗಮಿಸುವುದರಿಂದ ಸ್ಥಳೀಯ ಅಂಗಡಿ-ಮುಂಗಟ್ಟುಗಳಲ್ಲಿ ಉತ್ತಮ ವ್ಯವಹಾರ ನಡೆಯುತ್ತದೆ ಹಾಗೂ ಗ್ರಾಮೀಣ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಲಭ್ಯವಾಗುತ್ತದೆ. ಬಸ್ಸು, ರಿಕ್ಷಾ ಮುಂತಾದ ಸಾರಿಗೆ ವ್ಯವಸ್ಥೆಗಳಿಗೂ ಸಂತೆಯಂದು ಬೇಡಿಕೆ ಹೆಚ್ಚಿರುತ್ತದೆ. ಈ ರೀತಿ ಗ್ರಾಮೀಣ ಅರ್ಥಿಕತೆಗೆ ಪುಷ್ಠಿ ನೀಡುವಲ್ಲಿ ಸಂತೆ ಪೂರಕವಾಗಿದೆ.
ಇತರ ಸಮಸ್ಯೆಗಳೇನು? :
- ಜ ಪೇಟೆಯಲ್ಲಿ ಎಲ್ಲಿಯೂ ಶೌಚಾಲಯದ ವ್ಯವಸ್ಥೆ ಇಲ್ಲ.
- ಮಾರುಕಟ್ಟೆ ಪ್ರದೇಶದಲ್ಲಿ ಒಳಚರಂಡಿ ಇಲ್ಲ.
- ಪೇಟೆಯಲ್ಲಿ ಕುಡಿಯುವ ನೀರಿನ ಘಟಕ ಅಗತ್ಯವಿದೆ.
- ಸಂತೆಯಲ್ಲಿ ಸ್ವತ್ಛತೆಯ ಕೊರತೆ ಇದೆ.
- ವಿದ್ಯುತ್ ದೀಪದ ವ್ಯವಸ್ಥೆ ಅಗತ್ಯವಿದೆ.
ಮಾರುಕಟ್ಟೆ ಅಗತ್ಯ :
ಹಲವಾರು ವರ್ಷದಿಂದ ಇಲ್ಲಿನ ಸಂತೆಯಲ್ಲಿ ವ್ಯಾಪಾರ ನಡೆಸುತ್ತಿದ್ದೇನೆ. ಗ್ರಾಹಕರು ಸಾಕಷ್ಟು ಉತ್ಸಾಹದಿಂದ ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತಾರೆ. ಸಂತೆ ಮಾರುಕಟ್ಟೆ ಕಟ್ಟಡ ನಿರ್ಮಾಣವಾದರೆ ಇನ್ನಷ್ಟು ಅನುಕೂಲವಾಗಲಿದೆ.
-ಸತೀಶ್ ಪೂಜಾರಿ, ಸಂತೆಯ ಗ್ರಾಹಕ
ಪರಿಶೀಲನೆ ನಡೆಸುತ್ತೇವೆ :
ಸಾೖಬ್ರಕಟ್ಟೆಗೆ ವ್ಯವಸ್ಥಿತ ಸಂತೆ ಮಾರುಕಟ್ಟೆ ಅಗತ್ಯವಿದೆ. ಇಲ್ಲಿನ ಅಕ್ಕ-ಪಕ್ಕದ ಸರಕಾರಿ ಜಾಗವನ್ನು ಈಗಾಗಲೇ ಇತರ ಉದ್ದೇಶಕ್ಕಾಗಿ ಕಾಯ್ದಿರಿಸಿದ್ದು ಇದರಲ್ಲಿ ಯಾವುದಾದರೂ ಬದಲಾವಣೆ ಮಾಡಲು ಸಾಧ್ಯವೇ ಅಥವಾ ಇತರ ಸ್ಥಳಾವಕಾಶದ ಕುರಿತು ಪರಿಶೀಲಿಸಲಾಗುವುದು.
-ಸುಧೀಂದ್ರ ಶೆಟ್ಟಿ, ಅಧ್ಯಕ್ಷರು, ಶಿರಿಯಾರ ಗ್ರಾ.ಪಂ.
-ರಾಜೇಶ್ ಗಾಣಿಗ ಅಚ್ಲಾಡಿ