ಬಳ್ಳಾರಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಲಭಿಸಿದ ವಿಶೇಷ ಸ್ಥಾನಮಾನದಿಂದ ಈ ಭಾಗದ ಸರ್ಕಾರಿ ನೌಕರರಿಗೆ ಮುಂಬಡ್ತಿ ಲಭಿಸದೆ ಅನ್ಯಾಯವಾಗಿದೆ ಎಂದು ಅಹಿಂದ ಚಿಂತಕರ ವೇದಿಕೆಯ ಅಧ್ಯಕ್ಷ ಸೈಬಣ್ಣಾ ಜಾಮದಾರ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕಕ್ಕೆ 371(ಜೆ) ಕಾಲಂ ಜಾರಿಗೆ ತರುವ ಮೂಲಕ ವಿಶೇಷ ಸ್ಥಾನಮಾನ ಕಲ್ಪಿಸಿರುವ ಕೇಂದ್ರ ಸರ್ಕಾರ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಿದೆ. ಆದರೆ, ಕಲ್ಯಾಣ ಕರ್ನಾಟಕ ವೃಂದದಲ್ಲಿರುವ ಹೊರಗಿನವರು ಸಮರ್ಪಕವಾಗಿ ಬಡ್ತಿ ಪಡೆಯುತ್ತಿದ್ದಾರೆ. ರಾಜ್ಯ ವೃಂದದಲ್ಲಿರುವ ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ ನೀಡಬೇಕಿದ್ದ ಶೇ. 8ರ ಮೀಸಲಾತಿ ಸೌಲಭ್ಯ ನೀಡುವಲ್ಲಿ ಅನ್ಯಾಯವಾಗುತ್ತಿದೆ. ಕೇವಲ ಬೆಂಗಳೂರಿನ ಬಿಬಿಎಂಪಿಯಲ್ಲಷ್ಟೇ ಉದ್ಯೋಗದಲ್ಲಿ ಶೇ. 8ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಹೊರತು, ಬೆಳಗಾವಿ, ಮೈಸೂರು, ಬೆಂಗಳೂರು ವಿಭಾಗಗಳಲ್ಲಿ ನೀಡುತ್ತಿಲ್ಲ ಎಂದು ಆರೋಪಿಸಿದರು.
371(ಜೆ) ಕಾಲಂ ಅಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ರಾಜ್ಯ ವೃಂದದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 8ರಷ್ಟು ಮೀಸಲಾತಿ ಕಲ್ಪಿಸಬೇಕು. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಗಳಿಸಿದರೂ ರಾಜ್ಯ ವೃಂದದ ಸಾಮಾನ್ಯ ಅಥವಾ ಶೇ. 8ರ ಮೀಸಲಾತಿಯಲ್ಲಿ ಪರಿಗಣಿಸಲ್ಲ. ಮೇಲಾಗಿ ಅಲ್ಲಿನ ಉನ್ನತಾಧಿಕಾರಿಗಳು ಈ ಭಾಗದ ಅಭ್ಯರ್ಥಿಗಳು ಪ್ರಥಮ, ದ್ವಿತೀಯ ರ್‍ಯಾಂಕ್ ಪಡೆದರೂ ಅವರನ್ನು ಕಲ್ಯಾಣ ಕರ್ನಾಟಕ ಕೋಟಾದಲ್ಲೇ ಪರಿಗಣಿಸಲಾಗುತ್ತಿದೆ. ಇದರಿಂದ ಶೇ. 8ರ ಮೀಸಲಾತಿಯಲ್ಲಿ ಕರ್ನಾಟಕ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಇಲ್ಲಿನ ಜನಪ್ರತಿನಿ ಗಳು ಧ್ವನಿ ಎತ್ತುತ್ತಿಲ್ಲ. ಸಚಿವ ಸಂಪುಟದ ಉಪಸಮಿತಿಗೆ ಅಧ್ಯಕ್ಷರನ್ನಾಗಿ ಹೊರಗಿನವರನ್ನೇ ನೇಮಕ ಮಾಡಲಾಗುತ್ತಿದೆ. ಈ ಮೊದಲು ಎಚ್.ಕೆ. ಪಾಟೀಲ್ ಇದೀಗ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಇವರಿಗೆ ಈ ಭಾಗದ ಜನರ ನೋವುಗಳು ಅರ್ಥವಾಗುತ್ತಿಲ್ಲ ಎಂದವರು ತಿಳಿಸಿದರು. ಅಧಿಕಾರಿಗಳೂ ಸಹ ಕಲಂ ವಿರುದ್ಧವಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. 371 ಜೆ ಕಲಂನ ಮುಂಬಡ್ತಿ ನಿಯಮಗಳಿಗೆ ತಿದ್ದುಪಡಿಯಾಗಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ನೌಕರರಿಗೆ ಶೇ.8% ಬಡ್ತಿ ನೀಡಬೇಕು, ಅಭಿಮತ ಪತ್ರಗಳನ್ನು ಕೂಡದೇ ಇರುವವರನ್ನು ಈ ಕೂಡಲೇ ಉಳಿಕೆ ಮೂಲಕ ಸೇರಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಮುಖಂಡ ಕೆ. ಶ್ರೀನಿವಾಸರೆಡ್ಡಿ, ಟಿ. ರಾಜಮ್ಮ, ಉಗಮರಾಜ್, ಶಿವರಾಜ್ ಶಕಾಪೂರ ಇತರರಿದ್ದರು.