ನವದೆಹಲಿ : ಸ್ಲೊವೇನಿಯಾದಲ್ಲಿ ವಿದೇಶಿ ಪ್ರವಾಸದ ವೇಳೆ ರಾಷ್ಟ್ರೀಯ ಮಟ್ಟದ ಸೈಕ್ಲಿಸ್ಟ್ ಳೊಂದಿಗೆ ಅನುಚಿತ ವರ್ತನೆ ನಡೆಸಿದ ಆರೋಪದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಸೈಕ್ಲಿಂಗ್ ತರಬೇತುದಾರ ಆರ್.ಕೆ. ಶರ್ಮಾ ಅವರ ಒಪ್ಪಂದವನ್ನು ಕೊನೆಗೊಳಿಸಿದೆ.
ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ ವಿದೇಶಿ ಪ್ರವಾಸದ ಸಂದರ್ಭದಲ್ಲಿ ಅನುಚಿತ ವರ್ತನೆ ತೋರಿದ ತರಬೇತುದಾರನ ವಿರುದ್ಧ ಸೈಕ್ಲಿಸ್ಟ್ ನೀಡಿದ ದೂರಿನ ಪ್ರಕರಣವನ್ನು ಆಲಿಸಲು ತನಿಖಾ ಸಮಿತಿಯನ್ನು ರಚಿಸಲಾಗಿದೆ.
ಸಮಿತಿಯು ಬುಧವಾರ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದು, ಮೇಲ್ನೋಟಕ್ಕೆ ಪ್ರಕರಣವು ಸ್ಥಾಪಿತವಾಗಿದ್ದು, ಕ್ರೀಡಾಪಟುವಿನ ಆರೋಪಗಳು ನಿಜವೆಂದು ಕಂಡುಬಂದಿದೆ.
ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಶಿಫಾರಸಿನ ಮೇರೆಗೆ ನೇಮಕಗೊಂಡ ಕೋಚ್ ಭಾರತೀಯ ಕ್ರೀಡಾ ಪ್ರಾಧಿಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ವರದಿಯನ್ನು ಅನುಸರಿಸಿ,ತಕ್ಷಣವೇ ಜಾರಿಗೆ ಬರುವಂತೆ ಕೋಚ್‌ನ ಸಂಪರ್ಕವನ್ನು ಕೊನೆಗೊಳಿಸಿದೆ.ಸಮಿತಿಯು ಪ್ರಕರಣದ ವಿಸ್ತೃತ ತನಿಖೆಯನ್ನು ಮುಂದುವರೆಸಿ ಅಂತಿಮ ವರದಿಯನ್ನು ಸಲ್ಲಿಸಲಿದೆ.
‘ನನ್ನೊಂದಿಗೆ ಮಲಗಲು ಮತ್ತು ಅವರ ಹೆಂಡತಿಯಂತೆ ವರ್ತಿಸಲು ನನ್ನನ್ನು ಕೇಳಿದರು ಎಂದು ಸೈಕ್ಲಿಸ್ಟ್ ದೂರು ನೀಡಿದ್ದು, ಕೋಣೆಗೆ ತನ್ನನ್ನು ಬಲವಂತವಾಗಿ ಕರೆದೊಯ್ದರು,ತರಬೇತಿ ನಂತರ ಮಸಾಜ್ ಮಾಡಲು, ಅವರೊಂದಿಗೆ ಮಲಗಲು ಕೇಳಿದರು ಎಂದು ಆರೋಪಿಸಿ ದೂರನ್ನು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಇಮೇಲ್ ಮಾಡಲಾಗಿದೆ. ಆಪಾದಿತ ಘಟನೆಗಳು ಮೇ ತಿಂಗಳ ಆರಂಭದಲ್ಲಿ ಸ್ಲೊವೇನಿಯಾದಲ್ಲಿ ರಾಷ್ಟ್ರೀಯ ತಂಡದ ಶಿಬಿರದಲ್ಲಿ ನಡೆದಿವೆ.