Advertisement

ಸಾಯಿ ಪ್ರಣೀತ್‌ ಭಾರತಕ್ಕೆ ಸಿಕ್ಕ ಮತ್ತೂಬ್ಬ ಬ್ಯಾಡ್ಮಿಂಟನ್‌ ಪ್ರತಿಭೆ

12:25 PM Apr 22, 2017 | |

“ಪ್ರತಿ ದಿನ ಅಭ್ಯಾಸ ನಡೆಸುವ ಆಟಗಾರನ ವಿರುದ್ಧ ಹೋರಾಟ ನಡೆಸುವುದು ಕಷ್ಟ. ಆದರೂ ಇವತ್ತು ನಾನು ನೀಡಿರುವ ಪ್ರದರ್ಶನ ತೃಪ್ತಿ ತಂದಿದೆ’ ಈ ಮಾತನ್ನು ಹೇಳಿದ್ದು, ಸಿಂಗಾಪುರ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತದವರೇ ಆದ ಕೆ.ಶ್ರೀಕಾಂತ್‌ ವಿರುದ್ಧ ಗೆದ್ದು ವಿಜಯ ಪತಾಕೆ ಹಾರಿಸಿದ ಬಿ.ಸಾಯಿ ಪ್ರಣೀತ್‌. ಹೌದು, ಈವತ್ತು ಬ್ಯಾಡ್ಮಿಂಟನ್‌ ಕ್ರೀಡೆಯಲ್ಲಿ ಭಾರತ ವಿಶ್ವ ಮಟ್ಟದಲ್ಲಿ ಎಷ್ಟೊಂದು ಪ್ರಬಲವಾಗಿ ಬೆಳೆಯುತ್ತಿದೆ ಅನ್ನುವುದನ್ನು ಸಾಬೀತು ಪಡಿಸುತ್ತದೆ. 

Advertisement

ವಿಶ್ವ ಮಟ್ಟದ ಸೂಪರ್‌ ಸೀರೀಸ್‌ ಕೂಟದ ಫೈನಲ್‌ನಲ್ಲಿ ಇಬ್ಬರು ಭಾರತೀಯರು ಹೋರಾಡುತ್ತಾರೆ ಎಂದರೆ ಇಂದು ಭಾರತೀಯ ಆಟಗಾರರು ಚೀನಾ, ಜಪಾನ್‌, ಕೊರಿಯಾ, ಇಂಡೋನೇಷ್ಯಾ…ಸೇರಿದಂತೆ ಹಲವು ರಾಷ್ಟ್ರಗಳಿಗೆ ಸವಾಲಾಗಿ ಬೆಳೆದಿದ್ದಾರೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಈ ಮುನ್ನ ಬ್ಯಾಡ್ಮಿಂಟನ್‌ ಅಂದರೆ ಮುಗಿಯಿತು ಅದು ಚೀನಿಯರ ಭದ್ರ 
ಕೋಟೆ ಎಂದೇ ಖ್ಯಾತವಾಗಿತ್ತು. ಆದರೆ ಈಗಾಗಲೇ ಈ ಕೋಟೆಗೆ ಭಾರತೀಯರು ಪ್ರವೇಶ ಪಡೆದಿದ್ದಾರೆ. ಸದ್ಯ ಭಾರತದಲ್ಲಿ ಪ್ರಬಲವಾಗಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಆಟಗಾರರಲ್ಲಿ ಸೈನಾ ನೆಹ್ವಾಲ್‌, ಪಿ.ವಿ.ಸಿಂಧು, ಕೆ.ಶ್ರೀಕಾಂತ್‌, ಪಿ.ಕಶ್ಯಪ್‌, ಗುರುಸಾಯಿದತ್‌….ಈ ಸಾಲಿಗೆ ಹೊಸ ಸೇರ್ಪಡೆ ಸಾಯಿ ಪ್ರಣೀತ್‌.

ಸ್ನೇಹಿತನ ವಿರುದ್ಧವೇ ಹೋರಾಟ
ಸಿಂಗಾಪುರ ಓಪನ್‌ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ಯಾರೇ ಗೆದ್ದರೂ ಪ್ರಶಸ್ತಿ ಭಾರತಕ್ಕೆ ಅನ್ನುವುದು ಖಚಿತವಾಗಿತ್ತು. ಯಾಕೆಂದರೆ ಅಲ್ಲಿ ಕಣದಲ್ಲಿದ್ದವರು ಭಾರತದವರೇ ಆದ ಸಾಯಿ ಪ್ರಣೀತ್‌ ಮತ್ತು ಕೆ.ಶ್ರೀಕಾಂತ್‌ ಆಗಿದ್ದರು. ದಿನವೂ ಬೆಳಗ್ಗೆ ಇಬ್ಬರೂ ಒಂದೇ ಅಂಕಣದಲ್ಲಿ ಅಭ್ಯಾಸ ನಡೆಸುವವರು. ಹೀಗಾಗಿ ಇಬ್ಬರ ಮುಖಾಮುಖೀ ಸ್ನೇಹದ ಕಾಳಗವಾಗಿ ಕಂಡುಬಂತು. 

ಸಾಯಿ ಪ್ರಣೀತ್‌ಗೆ ಹೋಲಿಸಿದರೆ ಕೆ.ಶ್ರೀಕಾಂತ್‌ ಅನುಭವಿ ಆಟಗಾರ. ಇಬ್ಬರ ವಯಸ್ಸು ಒಂದೇ ಆಗಿದ್ದರೂ ಕೂಡ ಶ್ರೀಕಾಂತ್‌ಗೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದ ಅನುಭವ ಇತ್ತು. ಆತ ವಿಶ್ವ ಮಟ್ಟದ ಖ್ಯಾತ ಆಟಗಾರರನ್ನು ಬಗ್ಗುಬಡಿದಿದ್ದರು. ಆದರೂ ಈ ಕಾಳಗದಲ್ಲಿ ಪ್ರಣೀತ್‌ ಭರ್ಜರಿ ಪ್ರದರ್ಶನ ನೀಡುವ ಮೂಲಕ ಸ್ನೇಹಿತ ಶ್ರೀಕಾಂತ್‌ಗೆ ಸೋಲುಣಿಸಿ ಪ್ರಶಸ್ತಿ ಪಡೆದರು.

Advertisement

2010ರಲ್ಲಿಯೇ ಬೆಳಕಿಗೆ ಬಂದ ಪ್ರತಿಭೆ
ಸಾಯಿ ಪ್ರಣೀತ್‌ ಬ್ಯಾಡ್ಮಿಂಟನ್‌ ಕ್ರೀಡೆಯಲ್ಲಿ ಮೊದಲ ಬಾರಿಗೆ ವಿಶ್ವ ಮಟ್ಟದಲ್ಲಿ ಸಂಚಲನ ಮೂಡಿಸಿದ್ದು, 2010 ರಲ್ಲಿ. ಅಂದು ಸಾಯಿ ಪ್ರಣೀತ್‌ಗೆ 16 ವರ್ಷವಾಗಿತ್ತು. ವಿಶ್ವ ಜೂನಿಯರ್‌ ಚಾಂಪಿಯನ್‌ಶಿಪ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದ್ದ. ಇಲ್ಲಿ ಕೂಡ ಚೀನಾ, ಇಂಡೋನೇಷ್ಯಾ, ಸಿಂಗಾಪುರ, ಜರ್ಮನಿ, ಜಪಾನ್‌, ಸ್ಪೇನ್‌, ಇಂಗ್ಲೆಂಡ್‌….ಹಲವು ರಾಷ್ಟ್ರಗಳ ಪ್ರತಿಭಾನ್ವಿತ ಯುವ ಆಟಗಾರರು ಪಾಲ್ಗೊಂಡಿದ್ದರು. ಆದರೆ ದಿಟ್ಟ ತನದಿಂದ ಹೋರಾಟ ನಡೆಸಿದ ಸಾಯಿ ಪ್ರಣೀತ್‌ ಕಂಚಿನ ಪದಕ ಪಡೆದರು. ಅಲ್ಲಿಂದ ಸಾಯಿ ಪ್ರಣೀತ್‌ ಬ್ಯಾಡ್ಮಿಂಟನ್‌ನಲ್ಲಿ ಒಂದೊಂದೇ ಹೆಜ್ಜೆಯನ್ನು ಇಡುತ್ತ ಮುಂದೆ ಸಾಗಿದ್ದಾರೆ.

ಮೊದಲ ಸೂಪರ್‌ ಸೀರೀಸ್‌
ಸಿಂಗಾಪುರ ಓಪನ್‌ ಸಾಯಿ ಪ್ರಣೀತ್‌ಗೆ ಮೊದಲ ಸೂಪರ್‌ ಸೀರೀಸ್‌ ಪ್ರಶಸ್ತಿಯಾಗಿದೆ. 2016ರಲ್ಲಿ ನಡೆದ ಕೆನಡಾ ಓಪನ್‌ ಪಂದ್ಯದಲ್ಲಿ ದಕ್ಷಣ ಕೊರಿಯಾದ ಲೀ ಹ್ಯುನ್‌ ಇಲ್‌ ವಿರುದ್ಧ ನೇರ ಸೆಟ್‌ನಲ್ಲಿಯೇ ಜಯಸಾಧಿಸಿ ಪ್ರಶಸ್ತಿ ಪಡೆದಿದ್ದರು. ಇತ್ತೀಚೆಗೆ ನಡೆದ ಸೈಯದ್‌ ಮೋದಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದವರೆ ಆದ ಸಮೀರ್‌ ವರ್ಮಾ ವಿರುದ್ಧ ಸೋತು ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತರಾಗಿದ್ದರು. ಆದರೆ ಜೀವನದಲ್ಲಿ ಒಂದೂ ಸೂಪರ್‌ ಸೀರೀಸ್‌ ಪ್ರಶಸ್ತಿ ಪಂದಿರಲಿಲ್ಲ. ಅದು ಸಿಂಗಾಪುರ್‌ ಓಪನ್‌ ಮೂಲಕ ಆ ಕಿರೀಟ ಸಿಕ್ಕಿದೆ.

ಬ್ಯಾಡ್ಮಿಂಟನ್‌ನಲ್ಲಿ ಭಾರತ ಈಗ ಬಲಿಷ್ಠ
ತುಂಬಾ ಹಿಂದಿನಿಂದ ಕೇಳಿಬರುತ್ತಿದ್ದ ಬ್ಯಾಡ್ಮಿಂಟನ್‌ ತಾರೆಯರ ಹೆಸರು ಅಂದರೆ ಪ್ರಕಾಶ್‌ ಪಡುಕೋಣೆ, ಪಿ.ಗೋಪಿಚಂದ್‌…ಹೀಗೆ ಬೆರಳೆಣಿಕೆಯಷ್ಟು ಆಟಗಾರರ ಹೆಸರು. ಆದರೆ ಈಗ ಕಾಲ ಬದಲಾಗಿದೆ. 2012 ಲಂಡನ್‌ ಒಲಿಂಪಿಕ್ಸ್‌ ನಲ್ಲಿ  ಸೈನಾ ನೆಹ್ವಾಲ್‌ ಕಂಚಿನ ಪದಕ ಗೆದ್ದ ಮೇಲೆ ಭಾರತದಲ್ಲಿ ಬ್ಯಾಡ್ಮಿಂಟನ್‌ ಹೆಚ್ಚಿನ ಜನಪ್ರಿಯತೆ ಪಡೆದಿದೆ. ಹಲವಾರು ಯುವ ಪ್ರತಿಭೆಗಳು ಬೆಳಕಿಗೆ ಬಂದಿವೆ. ರಿಯೋ ಒಲಿಂಪಿಕ್ಸ್‌ನಲ್ಲಿ ಪಿ.ವಿ.ಸಿಂಧು ಬೆಳ್ಳಿ ಪದಕ ಗೆದ್ದು ಭಾರತದ ಕೀರ್ತಿ ಹೆಚ್ಚಿಸಿದ್ದಾರೆ. ಆದರೆ ಬ್ಯಾಡ್ಮಿಂಟನ್‌ ಪುರುಷರ ವಿಭಾಗದಲ್ಲಿ ಭಾರತಕ್ಕೆ ಒಲಿಂಪಿಕ್ಸ್‌ ಪದಕ ಬಂದಿಲ್ಲ. ಬಹುಶಃ ಈ ಕೊರಗು 2020 ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ನಲ್ಲಿ ಅಂತ್ಯವಾಗಬಹುದು. ಕೆ.ಶ್ರೀಕಾಂತ್‌, ಸಾಯಿ ಪ್ರಣೀತ್‌, ಗುರುಸಾಯಿ ದತ್‌ ಭಾರತದ ಯುವ ಬ್ಯಾಡ್ಮಿಂಟನ್‌ ಪ್ರತಿಭೆಗಳಾಗಿದ್ದು, ಒಲಿಂಪಿಕ್ಸ್‌ ಪದಕ ಗೆಲ್ಲುವ ಆಸೆ ಚಿಗುರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next