Advertisement

ಭವಿಷ್ಯದ ನೆಮ್ಮದಿಗಾಗಿ ಸಾಯಿಬಾಬಾ ಆದರ್ಶ ಪಾಲಿಸಿ

09:10 PM Oct 05, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಜಗತ್‌ ಕಲ್ಯಾಣ ಬಯಸಿದ್ದ ಭಗವಾನ್‌ ಶ್ರೀ ಸತ್ಯಸಾಯಿ ಬಾಬಾರವರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಿದರೆ ನೆಮ್ಮದಿಯ ನಾಳೆಯ ದಿನಗಳನ್ನು ಭರವಸೆಯಿಂದ ನಿರೀಕ್ಷಿಸಬಹುದು ಎಂದು ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ತಿಳಿಸಿದರು.

Advertisement

ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದ ಹೃದಯ ಮಂದಿರದ ಯಾಗಮಂಟಪದಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವದ ಏಳನೇ ದಿನವಾದ ಶನಿವಾರ ಕಾಳರಾತ್ರಿ ಮಾತೆಯ ಆರಾಧನೆ, ದುರ್ಗಾಪೂಜೆ, ಮಹಾರುದ್ರಯಾಗಗಳ ಪುಣ್ಯ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿ ನೆರೆದಿದ್ದ ಸಾಯಿಬಾಬಾ ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರತಿನಿಧಿಗಳು ಕೈಜೋಡಿಸಲಿ: ಶ್ರೀ ಸತ್ಯಸಾಯಿ ಸಂಸ್ಥೆಯು ಮಾನವ ಸೇವೆಯನ್ನೇ ಮಾಧವ ಸೇವೆಯನ್ನಾಗಿ ಮಾಡಿಕೊಂಡು ಅನೇಕ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳನ್ನು ಭಕ್ತಿಭಾವದಿಂದ ಮಾಡುತ್ತಿದೆ. ಪ್ರಜೆಗಳ ಜೊತೆಗೆ ಪ್ರಜಾಪ್ರತಿನಿಧಿಗಳು ಕೈಜೋಡಿಸಿದಾಗ ಯಾವುದೇ ಉದ್ದೇಶಿತ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಲು ಸಾಧ್ಯವಾಗುತ್ತದೆ ಎಂದರು.

ಸತ್ಯಸಾಯಿ ಸಂಸ್ಥೆ ಸಹಕಾರ: ತಾನು ಪ್ರತಿನಿಧಿಸುತ್ತಿರುವ ರಾಜ್ಯವು ದಕ್ಷಿಣ ಭಾರತದಲ್ಲಿ ಚಿಕ್ಕ ರಾಜ್ಯವಾಗಿದೆ. ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ದಾರಿ ಹುಡುಕುವಾಗ ಭರವಸೆಯ ಬೆಳಕಾಗಿ ದೊರಕಿದ್ದು ಭಗವಾನ್‌ ಶ್ರೀ ಸತ್ಯಸಾಯಿ ಸಂಸ್ಥೆ. ಅದರ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿ ತನ್ನ ರಾಜ್ಯವು ಮುನ್ನಡೆಯಲು ಸಾಧ್ಯವಾಗಿದೆ ಎಂದರು.

ನಮ್ಮ ರಾಜ್ಯದ ಜನತೆ ಶಿಕ್ಷಣ ಸಂಸ್ಥೆಗಳನ್ನು ಬಯಸಿತು. ಅದನ್ನು ಬಾಬಾರವರ ಸಂಸ್ಥೆಯು ಉದಾರವಾಗಿ ನೀಡಿ ಸರ್ವವೂ ಉಚಿತವಾಗಿ ದೊರೆಯುವಂತೆ ಮಾಡಿದೆ. ಇದರಿಂದ ಈ ಸಂಸ್ಥೆಗೆ ಪುದುಚೇರಿ ಜನತೆ ಸದಾ ಅಭಾರಿಯಾಗಿದ್ದಾರೆ ಎಂದರು.

Advertisement

ಯಜ್ಞಾಧಿಪತ್ಯವನ್ನು ವಹಿಸಿದ್ದ ಸದ್ಗುರು ಮಧುಸೂದನ ಸಾಯಿ ಮಾತನಾಡಿ, ಅನ್ನ, ಅಕ್ಷರ, ಆರೋಗ್ಯ, ಆಯುಷ್ಯಗಳನ್ನು ಪರಿಪಾಲಿಸುವ ಲೋಕಮಾತೆಯರೇ ದುರ್ಗಾ, ಲಕ್ಷಿ¾à, ಸರಸ್ವತಿಯರು. ಈ ಮಾತೆಯರನ್ನು ಯಾಗ ಸಂದರ್ಭದಲ್ಲಿ ಸ್ಮರಿಸುವುದರಿಂದ ಪಂಚೇಂದ್ರಿಯಗಳು ಕಾರ್ಯಶೀಲವಾಗಿರುತ್ತವೆ.

ಆದ್ದರಿಂದ ಆಚರಣೆಯ ಮಹತ್ವವನ್ನರಿತು ಮನನ ಮಾಡುತ್ತಾ ಜೀವನದಲ್ಲಿ ಪಾಲಿಸಿದರೆ ಎಲ್ಲಾ ಲೋಕದಲ್ಲಿರುವ ಎಲ್ಲಾ ಜೀವಿಗಳಿಗೂ ಒಳಿತಾಗಲಿ ಎಂದು ನಾವು ಪ್ರಾರ್ಥಿಸುವ ಸಾರ್ವತ್ರಿಕ ಪ್ರಾರ್ಥನೆಗೆ ಅರ್ಥ ಬರುತ್ತದೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯ ಗುಲ್ಬರ್ಗಾದ ಕುಲಾಧಿಪತಿ ಬಿ.ಎನ್‌.ನರಸಿಂಹಮೂರ್ತಿ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ತುಮಕೂರು ಗ್ರಾಮಾಂತರ ಮಾಜಿ ಶಾಸಕ ಸುರೇಶ್‌ಗೌಡ ಸೇರಿದಂತೆ ಸತ್ಯಸಾಯಿ ಲೋಕಸೇವಾ ಟ್ರಸ್ಟ್‌ನ ಬಿ.ನಾರಾಯಣರಾವ್‌, ಸಂಜೀವ ಕರಾಯಶೆಟ್ಟಿ, ಗೋವಿಂದರೆಡ್ಡಿ, ಎ.ಆರ್‌.ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮಹಾರುದ್ರಯಾಗ ಆರಂಭ: ಸತ್ಯಸಾಯಿ ಗ್ರಾಮದ ಹೃದಯ ಮಂದಿರದಲ್ಲಿ ದಸರಾ ಮಹೋತ್ಸವ ಪ್ರಯುಕ್ತ ವಿಶಾಲವಾದ ಹೃದಯ ಮಂದಿರದ ಯಾಗ ಮಂಟಪದಲ್ಲಿ ಶನಿವಾರದಿಂದ ಲೋಕ ಕಲ್ಯಾಣಾರ್ಥವಾಗಿ ಮಹಾರುದ್ರಯಾಗವು ಪ್ರಾರಂಭವಾಗಿದೆ. ಜೊತೆಗೆ ನವದುರ್ಗಾರಾಧನೆ, ಸರಸ್ವತಿ ಮತ್ತು ಮೇಧಾ ದಕ್ಷಿಣಾಮೂರ್ತಿ ಹೋಮ ನೆರವೇರಿದವು.

ಲೋಕ ಕಲ್ಯಾಣಾರ್ಥವಾಗಿ ಸಾರ್ವತ್ರಿಕ ಪ್ರಾರ್ಥನೆ ಸಲ್ಲಿಸಿ ದುರ್ಗಾ ಮಾತೆಯ ಏಳನೇ ಅವತಾರ ಮಾತೆಯ ಕಾಲರಾತ್ರಿಗೆ ಅಷ್ಟಾವಧಾನ ಸೇವೆ ಸಲ್ಲಿಸಲಾಯಿತು. ಶೃಂಗೇರಿಯ ಆಗಮಿಕರ ಜೊತೆಗೆ ಸ್ಥಳೀಯ ಅರ್ಚಕರು ಕೈಜೋಡಿಸಿ ಯಾಗಕಾರ್ಯವು ಸುಸೂತ್ರವಾಗಿ ನೆರವೇರುವಂತೆ ಸಹಕರಿಸಿದರು.

ಬಂಗಾಳದಿಂದ ಶಿವ-ಪಾರ್ವತಿ, ಗಣೇಶ: ಶನಿವಾರದಿಂದ ಮಹಾರುದ್ರ ಯಜ್ಞ ನೂರಾರು ವೇದ ಪಂಡಿತರು, ಆಗಮಿಕರಿಂದ ಶ್ರದ್ಧಾಭಕ್ತಿಯಿಂದ ಆರಂಭಗೊಂಡಿದ್ದು, ಇದಕ್ಕಾಗಿಯೇ ಬಂಗಾಳದಿಂದ ಶಿವ-ಪಾರ್ವತಿ, ಗಣೇಶ ಹಾಗೂ ಕಾರ್ತಿಕೇಯರ ವಿಗ್ರಹಗಳನ್ನು ತಂದು ಪೂಜಿಸಲಾಗಿದೆ. ದೇಶ, ವಿದೇಶಗಳಿಂದ ಸಾಯಿಬಾಬಾ ಭಕ್ತರು ಪಾಲ್ಗೊಂಡು ನವದುರ್ಗೆಯ ಆರಾಧನೆಯಲ್ಲಿ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next