Advertisement
ಈ ಎಲ್ಲಾ ನಿಟ್ಟಿನಲ್ಲಿ ಪ್ರಕೃತಿಪ್ರಿಯರಲ್ಲಿ ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿ ಸಮೂಹದಲ್ಲಿ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಸಮಾನ ಮನಸ್ಕರು ರೂಪಿಸಿರುವ ಸಹ್ಯಾದ್ರಿ ಸಂಚಯ ಎಂಬ ಹೆಸರಿನ ಹಸಿರು ಪ್ರೇಮಿಗಳ ತಂಡವೊಂದು ಕಲಾವಿದ ಮತ್ತು ಪರಿಸರ ಹೋರಾಟಗಾರ ದಿನೇಶ್ ಹೊಳ್ಳ ಅವರ ದಕ್ಷ ಮುಂದಾಳತ್ವದಲ್ಲಿ ಹಲವಾರು ಧನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇವುಗಳಲ್ಲಿ ಒಂದು ಕಾಲೇಜು ಮಕ್ಕಳಿಗೆ ಪಶ್ಚಿಮ ಘಟ್ಟಗಳ ವಿವಿಧ ಭಾಗಗಳಿಗೆ ಅಧ್ಯಯನ ಚಾರಣವನ್ನು ಹಮ್ಮಿಕೊಳ್ಳುವುದು. ಈ ಕಾರ್ಯಕ್ರಮದ ಭಾಗವಾಗಿ ವಾರಾಂತ್ಯದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ತಂಡವನ್ನು ಅಧ್ಯಯನ ಚಾರಣಕ್ಕೆ ಕರೆದುಕೊಂಡು ಹೋಗುವ ಮತ್ತು ಆ ಮೂಲಕ ಪಶ್ಚಿಮಘಟ್ಟಗಳಲ್ಲಿನ ವಾಸ್ತವ ಸ್ಥಿತಿಯನ್ನು ಅವರಿಗೆ ಮನವರಿಕೆ ಮಾಡಿಕೊಡುವ ಕಾರ್ಯ ಸದ್ದಿಲ್ಲದೆ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆ.
ಮೊನ್ನೆ ಅಕ್ಟೋಬರ್ 28ರ ಭಾನುವಾರದಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಜುಕೇಷನ್ ಮತ್ತು ಟೀಮ್ ವಿವೇಕ ತಂಡದ ವಿದ್ಯಾರ್ಥಿಗಳು ಈ ಆದ್ಯಯನ ಚಾರಣದಲ್ಲಿ ಭಾಗವಹಿಸಿದ್ದರು. ಈ ಬಾರಿಯ ಚಾರಣದ ವಿಶೇಷವೆಂದರೆ, ಸುಮಾರು 70 ಜನ ಚಾರಣಿಗರು ಭಾಗವಹಿಸಿದ್ದ ಈ ಚಾರಣ ತಂಡದಲ್ಲಿ ವಿವೇಕಾನಂದ ಕಾಲೇಜಿನ ಸುಮಾರು 50ಕ್ಕೂ ಹೆಚ್ಚು ಬಿ.ಎಡ್. ವಿದ್ಯಾರ್ಥಿನಿಯರು ಭಾಗವಹಿಸಿದ್ದು. ಇವರಿಗೆ ಇಬ್ಬರು ಶಿಕ್ಷಕಿಯರೂ ಸಾಥ್ ನೀಡಿದ್ದರು. ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರೇ ಭಾಗವಹಿಸಿದ್ದು ಅವರಿಗಿರುವ ಪ್ರಕೃತಿ ಕಾಳಜಿಯನ್ನು ಪ್ರಚುರಪಡಿಸುವಂತಿತ್ತು.
ಬೆಳಿಗ್ಗೆ ಸುಮಾರು 9 ಗಂಟೆಗೆ ಪ್ರಾರಂಭವಾದ ಈ ಅಧ್ಯಯನ ಚಾರಣ ಸಂಜೆ 6ಗಂಟೆಗೆ ಮುಕ್ತಾಯಗೊಂಡಿತು. ಈ ಅವಧಿಯಲ್ಲಿ ಹೊಳ್ಳರ ನೇತೃತ್ವದ ತಂಡದ ಸದಸ್ಯರು ನಮ್ಮನ್ನು ಪಶ್ಚಿಮಘಟ್ಟದ ಚಾರ್ಮಾಡಿ ಭಾಗದಲ್ಲಿರುವ 2 ಪ್ರಮುಖ ಬೆಟ್ಟಗಳು ಹಾಗೂ ಈ ಭಾಗದ ಕಾಡಿನ ಒಳಗಿರುವ ಪುಟ್ಟ ಹಳ್ಳಿಯೊಂದರ ಪರಿಚಯವನ್ನೂ ಮಾಡಿಕೊಟ್ಟರು. ಈ ಚಾರಣದುದ್ದಕ್ಕೂ ನನ್ನ ಗಮನ ಸೆಳೆದ ಅಂಶವೆಂದರೆ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯರ ಉತ್ಸಾಹ.
ಸಾಮಾನ್ಯವಾಗಿ ಇಂತಹ ಕಠಿಣ ಚಾರಣ ಸಂದರ್ಭದಲ್ಲಿ ಪ್ರಾರಂಭದಲ್ಲಿದ್ದ ಹುರುಪು ಕೊನೆಯವರೆಗೂ ಇರುವುದಿಲ್ಲ. ಆದರೆ ಇದಕ್ಕೆಲ್ಲಾ ಅಪವಾದವೆಂಬಂತೆ ವಿದ್ಯಾರ್ಥಿನಿಯರ ತಂಡವು ಸಂಪೂರ್ಣ ಉತ್ಸಾಹದಿಂದ ತೊಡಗಿಕೊಂಡರು ಮಾತ್ರವಲ್ಲದೆ ಈ ಭಾಗದಲ್ಲಿ ಬರುವ ಶೋಲಾ ಅರಣ್ಯ, ನೀರಿನ ಹರಿವಿನ ಪ್ರದೇಶ, ಸುತ್ತಮುತ್ತಲಿನ ಬೆಟ್ಟಗಳ ಕುರಿತಾದ ವಿವರಗಳನ್ನು ದಿನೇಶ್ ಹೊಳ್ಳರ ಮೂಲಕ ಪಡೆದುಕೊಳ್ಳುತ್ತಲೇ ಇದ್ದರು. ಊರ ಸಮೀಪದಲ್ಲೇ ಇದ್ದರೂ ತಮ್ಮ ಅರಿವಿನಿಂದ ದೂರವಾಗಿದ್ದ ಪಶ್ಚಿಮ ಘಟ್ಟ ಭಾಗದ ವಾಸ್ತವ ಸ್ಥಿತಿಯನ್ನು ಕಂಡು ಮರುಕಪಟ್ಟರು. ಮಾತ್ರವಲ್ಲದೇ ಮುಂದೆ ತಾವು ಶಿಕ್ಷಕಿಯರಾದ ಬಳಿಕ ತಮ್ಮ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಯನ್ನು ಮಾಡಿಕೊಡುವ ಮತ್ತು ನಮ್ಮ ಪಾಲಿಗೆ ಅತ್ಯಂತ ಮಹತ್ವದ್ದಾಗಿರುವ ಈ ಗಿರಿಪ್ರದೇಶಗಳ ಮಹತ್ವವನ್ನು ಮಾಡಿಕೊಡುವ ಸಂಕಲ್ಪವನ್ನೂ ಮಾಡಿದರು.
Related Articles
ಕಡಿದಾದ ಬೆಟ್ಟ ಹತ್ತಿದರು… ಹಳ್ಳಿ ಜನರೊಂದಿಗೆ ಆತ್ಮೀಯವಾಗಿ ಬೆರೆತರು
ಈ ಬಾರಿ ಚಾರಣಕ್ಕೆ ಆರಿಸಿಕೊಂಡಿದ್ದ ಎರಡು ಬೆಟ್ಟಗಳಲ್ಲಿ ಒಂದು ಗಾತ್ರದಲ್ಲಿ ಸ್ವಲ್ಪ ಸಣ್ಣದಾಗಿದ್ದರೂ ಅಲ್ಲಿಗೆ ತೆರಳುವ ದಾರಿ ಮಾತ್ರ ತುಸು ಕಠಿಣವಾಗಿತ್ತು. ಆದರೆ ಇನ್ನೊಂದು ಬೆಟ್ಟ ಮಾತ್ರ ತುಂಬಾ ದೊಡ್ಡದಾಗಿತ್ತು. ಆ ಬೆಟ್ಟಕ್ಕೆ ಸಾಗುವ ದಾರಿಯಂತೂ ತೀರಾ ಕಡಿದಾಗಿತ್ತು. ಇದೂ ಸಾಲದೆಂಬಂತೆ ಆ ದಿನ ಮಲೆ ಗಾಳಿಯ ಆರ್ಭಟವೂ ಜೋರಾಗಿತ್ತು. ಆದರೆ ಈ ಎಲ್ಲಾ ಸವಾಲುಗಳು ವಿದ್ಯಾರ್ಥಿನಿಯರ ಪಾಲಿಗೆ ಮತ್ತು ಇತರೇ ಚಾರಣಿಗರಿಗೆ ಸವಾಲಾಗಲೇ ಇಲ್ಲ. ದಿನಂಪ್ರತಿ ಮನೆಯಿಂದ ಕಾಲೇಜಿಗೆ ತೆರಳಿ ತರಗತಿಯಲ್ಲಿ ಪಾಠ ಕೇಳುತ್ತಿದ್ದವರು ಅಂದು ಮಾತ್ರ ಪ್ರಕೃತಿಯ ಮಡಿಲಿನಲ್ಲಿ ಬಯಲು ಪಾಠಕ್ಕೆ ಕಿವಿಯಾದರು. ನಡು ಮಧ್ಯಾಹ್ನದ ಹೊತ್ತು ಆ ದೊಡ್ಡ ಬೆಟ್ಟದ ಬೆನ್ನೇರಿದ ಎಲ್ಲರ ಮೊಗದಲ್ಲಿ ಎವರೆಸ್ಟ್ ಶಿಖರ ಏರಿದ ಸಂತೋಷವಿತ್ತು. ಆ ಕ್ಷಣ ಅಲ್ಲಿದ್ದವರೆಲ್ಲಾ ಅದುವರೆಗಿನ ಸುಸ್ತನ್ನು ಮರೆತವರಂತೆ ಪಶ್ಚಿಮ ಘಟ್ಟದ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಸಿಕೊಂಡರು. ಹೊಳ್ಳರು ನೀಡುತ್ತಿದ್ದ ವಿವರಣೆಗಳಿಗೆ ಕುತೂಹಲದ ಕಿವಿಯಾದರು.
Advertisement
ಬಳಿಕ ನಿಧಾನವಾಗಿ ಬೆಟ್ಟವನ್ನು ಇಳಿಯಲಾರಂಭಿಸಿದ ತಂಡವು ಬೆಟ್ಟದ ತಪ್ಪಲಿನ ನೆರಳಿನ ಜಾಗದಲ್ಲಿ ತಾವು ಕಟ್ಟಿತಂದಿದ್ದ ಊಟವನ್ನು ಸೇವಿಸಿ ಮತ್ತೆ ಸ್ವಲ್ಪ ದೂರದಲ್ಲಿದ್ದ ಕಾಡ ನಡುವಿನ ಹಳ್ಳಿಗೆ ನಡಿಗೆ ಪ್ರಾರಂಭಿಸಿದರು. ಅಲ್ಲಲ್ಲಿ ಸಿಗುತ್ತಿದ್ದ ಇಂಬುಳಗಳ ಕಾಟ, ಕೈ-ಕಾಲು, ಮೈಗಳಿಗೆ ತಡವಿತ್ತಿದ್ದ ಗಿಡ-ಗಂಟಿಗಳನ್ನು ಸರಿಸುತ್ತಾ ಕಾಡ ಮಧ್ಯದಲ್ಲಿ ದಾರಿ ಮಾಡಿಕೊಂಡು ಒಬ್ಬರಿಗೊಬ್ಬರು ಆಸರೆಯಾಗುತ್ತಾ ಸಾಗಿಬರುವ ದೃಶ್ಯ ಸಾಮಾನ್ಯವಾಗಿತ್ತು. ಯಾರದರೊಬ್ಬರು ಸುಸ್ತಾಗಿ ಕುಳಿತರೆ ಒಂದಷ್ಟು ಜನ ವಿದ್ಯಾರ್ಥಿನಿಯರು ಅವರ ಜೊತೆಗಿದ್ದು ಅವರನ್ನು ಹುರಿದುಂಬಿಸುತ್ತಿದ್ದರು. ಒಟ್ಟಿನಲ್ಲಿ ಕಾಡ ನಡಿಗೆ ಹೆಣ್ಣುಮಕ್ಕಳಿಗೆ ಅಸಾಧ್ಯವೆಂಬ ತಪ್ಪು ಕಲ್ಪನೆಯನ್ನು ಇವರೆಲ್ಲಾ ಹುಸಿಗೊಳಿಸಿದರು.
ಹಳ್ಳಿ ಮನೆಯಲ್ಲಿ ಪೇಟೆ ಮಕ್ಕಳ ಕಲರವ…
ಚಾರ್ಮಾಡಿ ಭಾಗದಲ್ಲಿ ಬೆಟ್ಟಸಾಲುಗಳಿಗೆ ಹೊಂದಿಕೊಂಡಂತೆ ಕಾಡಿನ ನಡುವೆ ಇರುವ ಆ ಬೆರಳಿಣಿಕೆಯ ಮನೆಗಳಲ್ಲಿ ಜನವಸತಿಯನ್ನು ಕಂಡ ವಿದ್ಯಾರ್ಥಿನಿಯರಿಗೆ ಅಚ್ಚರಿಯೋ ಅಚ್ಚರಿ. ಇನ್ನು ಇವರ ಮನೆಯಂಗಳಕ್ಕೇ ಆನೆ ಸಹಿತ ವಿವಿಧ ಕಾಡುಪ್ರಾಣಿಗಳು ನಿತ್ಯ ಅತಿಥಿಗಳೆಂಬ ಮಾತು ಕೇಳಿಯಂತೂ ಇವರೆಲ್ಲರ ಹುಬ್ಬುಗಳು ಮೇಲೇರಿದ್ದವು. ಆ ಮನೆಯಲ್ಲಿದ್ದ ಹಿರಿ-ಕಿರಿಯ ಜೀವಗಳನ್ನು ಆತ್ಮೀಯವಾಗಿ ಮಾತನಾಡಿಸಿ ಅವರ ಅನುಭವಗಳನ್ನು ಇವರ ಮನಸ್ಸಿನಲ್ಲಿ ದಾಖಲಿಸಿಕೊಂಡರು. ಅಲ್ಲಿಂದ ಹೊರಟುಬರುವ ಸಂದರ್ಭದಲ್ಲಿ ತಮ್ಮ ಕೈಲಾದ ಸಹಾಯವನ್ನೂ ಆ ಮನೆಯವರಿಗೆ ಮಾಡಿದ್ದು ಭಾವೀ ಶಿಕ್ಷಕಿಯರ ಮತ್ತು ಚಾರಣ ತಂಡದ ಉಳಿದ ಸದಸ್ಯರ ಮಾನವೀಯತೆಗೆ ಹಿಡಿದ ಕನ್ನಡಿಯಾಗಿತ್ತು.
ಮತ್ತೆ ಕಡಿದಾದ ದಾರಿಯನ್ನು ಇಳಿದು ಮುಖ್ಯರಸ್ತೆಗೆ ಬಂದು ತಮ್ಮ ವಾಹನವನ್ನೇರಿದಾಗ ಅವರೆಲ್ಲರ ಮುಖದಲ್ಲಿ ಏನನ್ನೋ ಸಾಧಿಸಿದ ಸಂತೋಷವಿತ್ತು. ಅವರ ಮನಸ್ಸಿನಲ್ಲಿ ಪ್ರಕೃತಿಯ ಚಿತ್ರವೇ ತುಂಬಿತ್ತು. ಆ ಒಂದು ದಿನವನ್ನು ಸಾರ್ಥಕ ರೀತಿಯಲ್ಲಿ ಕಳೆದ ಹೆಮ್ಮೆಯಿತ್ತು ಮಾತ್ರವಲ್ಲದೇ ತಾವು ಕಂಡ ನೈಜ ಸ್ಥಿತಿಯನ್ನು ತಮ್ಮ ಸಹಪಾಠಿಗಳಲ್ಲಿ, ಮನೆಮಂದಿಯಲ್ಲಿ ಹಂಚಿಕೊಳ್ಳುವ ತವಕವಿತ್ತು. ಈ ವಿಶಿಷ್ಟ ಅನುಭವಕ್ಕೆ ಕಾರಣರಾದ ಸಹ್ಯಾದ್ರಿ ಸಂಚಯ ತಂಡದ ಸದಸ್ಯರ ಶ್ರಮಕ್ಕೊಂದು ಕೃತಜ್ಞತಾ ಭಾವವೂ ಇತ್ತು.