Advertisement

ಕಿರುಕುಳ ಸಹಿಸದೇ ಲೆಕ್ಕ ಅಧಿಕಾರಿ ರಾಜೀನಾಮೆ

03:50 AM Feb 10, 2017 | Team Udayavani |

ಬೆಂಗಳೂರು: ಲೆಕ್ಕಪರಿಶೋಧನೆ ಹೆಸರಲ್ಲಿ ಕೋಟ್ಯಂತರ ರೂಪಾಯಿ ದುಂದು ವೆಚ್ಚ ಆಗುತ್ತಿರುವುದನ್ನು ಗಮನಕ್ಕೆ ತಂದ ಲೆಕ್ಕಪರಿಶೋಧಕರೊಬ್ಬರು ಅಧಿಕಾರಿಗಳ ಕಿರುಕುಳ ತಾಳದೆ ರಾಜೀನಾಮೆ ನೀಡಿದ ಘಟನೆ ವರದಿಯಾಗಿದೆ.

Advertisement

ಸಮವರ್ತಿ ಲೆಕ್ಕಪರಿಶೋಧನೆ ಹೆಸರಲ್ಲಿ ಕೋಟ್ಯಂತರ ರೂ. ದುಂದು ವೆಚ್ಚ ಆಗುತ್ತಿರುವುದನ್ನು ಗಮನಿಸಿದ ನಿವೃತ್ತ ಲೆಕ್ಕಾಧಿಕಾರಿಯೂ ಆಗಿರುವ ಸದ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಅರ್ಥಿಕ ಸಲಹೆಗಾರರ ಶಾಖೆಯಲ್ಲಿ ಕಳೆದ 8 ತಿಂಗಳಿಂದ ಹೊರಗುತ್ತಿಗೆ ಲೆಕ್ಕ ಸಮಾಲೋಚಕರಾಗಿ ಸೇವೆ ಸಲ್ಲಿಸುತ್ತಿದ್ದ ಜಿ. ನಿಜಗುಣ ಮೂರ್ತಿ, ಮೇಲಧಿಕಾರಿಗಳ ಗಮನಕ್ಕೆ ತಂದರು. ಆಂತರಿಕ ಆರ್ಥಿಕ ಸಲಹೆಗಾರರಿಗೆ ಪತ್ರ ಬರೆದರು. ಅವರ ಪತ್ರದ ಆಧಾರದಲ್ಲಿ 13.86 ಕೋಟಿ ರೂ. ವ್ಯರ್ಥ ವೆಚ್ಚ ಆಗಿದೆ ಎಂದು ಆಂತರಿಕ ಆರ್ಥಿಕ ಸಲಹೆಗಾರರ, ಆಯುಕ್ತರಿಗೆ ಟಿಪ್ಪಣಿ ಬರೆದರು. ಆದರೂ ಯಾವುದೇ ಕ್ರಮ ಆಗಿಲ್ಲ. ಅಂತಿಮವಾಗಿ ಈ ವಿಚಾರವನ್ನು ನಿಜಗುಣ ಅವರು ಗ್ರಾಮೀಣಾಭಿವೃದ್ಧಿ ಸಚಿವರ ಗಮನಕ್ಕೂ ತಂದರು. ಈ ನಡುವೆ ನಿಜಗುಣ ಅವರಿಗೆ ಮೇಲಧಿಕಾರಿಗಳಿಂದ “ಅಸಹಕಾರ ಧೋರಣೆ’ ಆರಂಭವಾಯಿತು. ಬೇಸತ್ತ ನಿಜಗುಣ ಫೆ.3ರಂದು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ಹೊರನಡೆದಿದ್ದಾರೆ.

ಅಧಿಕಾರಿಗಳಿಗೆ ಪಾರದರ್ಶಕತೆ ಹೆಸರಿನಲ್ಲಿ “ಬಣ್ಣದ ಕಲ್ಪನೆ’ಗಳನ್ನು ತೇಲಿಬಿಟ್ಟು ಗ್ರಾಮೀಣಾಭಿವೃದ್ಧಿ ಇಲಾಖೆಯ ಉದ್ಯೋಗ ಖಾತರಿ ಸೇರಿ ವಿವಿಧ ಯೋಜನೆಗಳ “ಸ್ವತಂತ್ರ ಸಮವರ್ತಿ ಲೆಕ್ಕಪರಿಶೋಧನೆ’ಯ ಗುತ್ತಿಗೆ ಗಿಟ್ಟಿಸಿಕೊಂಡಿರುವ 14 ಖಾಸಗಿ ಲೆಕ್ಕಪರಿಶೋಧಕರ ಜಾಲ ಮೂರು ವರ್ಷದ ಅವಧಿಯಲ್ಲಿ 13.86 ಕೋಟಿ  ರೂ.ಗಳನ್ನು  “ಖಾತರಿ’ಪಡಿಸಿಕೊಂಡಿದೆ.

ಇಲಾಖೆಯ ಯೋಜನೆಗಳ “ಶಾಸನಬದ್ಧ ಲೆಕ್ಕಪರಿಶೋಧನೆ’ಯನ್ನು ಮಾತ್ರ ಖಾಸಗಿ ಲೆಕ್ಕಪರಿಶೋಧಕರಿಂದ ಮಾಡಿಸಬಹುದು. ಇದು ಬಹಳ ಹಿಂದಿನಿಂದ ನಡೆದು ಬಂದ ಪದ್ದತಿ. ಆದರೆ, 2014ರಲ್ಲಿ “ಸ್ವತಂತ್ರ ಸಮವರ್ತಿ ಲೆಕ್ಕಪರಿಶೋಧನೆ’ ಪದ್ಧತಿ ಜಾರಿಗೆ ತರುವಲ್ಲಿ ಯಶಸ್ವಿಯಾದ ಕೆಲ ಖಾಸಗಿ ಲೆಕ್ಕಪರಿಶೋಧಕರು, ಅಧಿಕಾರಿಗಳ “ನೆರವಿನಿಂದ’ ಕಾಯ್ದೆ-ನಿಯಮಗಳಲ್ಲಿ ಅವಕಾಶವೇ ಇಲ್ಲದ ಪರ್ಯಾಯ ವ್ಯವಸ್ಥೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆ ಜಾರಿಗೆ ತಂದ ಈ ಸಮವರ್ತಿ ಲೆಕ್ಕಪರಿಶೋಧನೆ ವ್ಯವಸ್ಥೆಗೆ ಯಾವುದೇ ಸರ್ಕಾರಿ ಆದೇಶವಿಲ್ಲ. 

ಗ್ರಾಮೀಣಾಭಿವೃದ್ಧಿ ಸಚಿವರ ಅನುಮೋದನೆಯೂ ಇಲ್ಲ. ಆರ್ಥಿಕ ಇಲಾಖೆಯ ಸಹಮತಿ ಇಲ್ಲ. ಸಚಿವ ಸಂಪುಟದ ಒಪ್ಪಿಗೆ ಇಲ್ಲ ಎನ್ನಲಾಗಿದೆ.

Advertisement

ಅದರಂತೆ, 2014-15 ರಿಂದ 2016-17ನೇ ಸಾಲಿನಲ್ಲಿ ಮೂರು ವರ್ಷಗಳ ಅವಧಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಉದ್ಯೋಗ ಖಾತರಿ ಸೇರಿ ಇತರ ಯೋಜನೆಗಳ “ಸ್ವತಂತ್ರ ಸಮವರ್ತಿ ಲೆಕ್ಕಪರಿಶೋಧನೆಗೆ’ 29 ಜಿಲ್ಲೆಗಳಲ್ಲಿ ಖಾಸಗಿ ಲೆಕ್ಕಪರಿಶೋಧಕರನ್ನು ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆ ಏಳು ಖಾಸಗಿ ಲೆಕ್ಕಪರಿಶೋಧಕರು 22 ಜಿಲ್ಲೆಗಳ ಲೆಕ್ಕಪರಿಶೋಧನಾ ಕಾರ್ಯಾದೇಶ ಪಡೆದುಕೊಂಡಿದ್ದರೆ, ಉಳಿದ 7 ಲೆಕ್ಕಪರಿಶೋಧಕರು ಬಾಕಿ ಏಳು ಜಿಲ್ಲೆಗಳ ಕಾರ್ಯಾದೇಶ ಪಡೆದುಕೊಂಡಿದ್ದಾರೆ. ಇದಕ್ಕಾಗಿ ಪ್ರತಿ ವರ್ಷ 4.62 ಕೋಟಿ ರೂ.ಗಳಂತೆ ಮೂರು ವರ್ಷದ ಅವಧಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ 13.86 ಕೋಟಿ ರೂ. ವೆಚ್ಚ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next