Advertisement
ಶ್ರೀ ಕ್ಷೇತ್ರ ಧರ್ಮಸ್ಥಳದ ಅಧೀನದಲ್ಲಿರುವ ಉಪ್ಪಿನಂಗಡಿ ಗ್ರಾಮದ ಕದಿಕ್ಕಾರು ಬೀಡಿನಿಂದ ದೇವಾಲಯಕ್ಕೆ ಮಂಗಳವಾರ ರಾತ್ರಿ ವಿವಿಧ ಬಿರುದಾವಳಿಯೊಂದಿಗೆ ಪಲ್ಲಕಿಯಲ್ಲಿ ದೈವಗಳ ಭಂಡಾರ ಆಗಮಿಸಿತು. ಬಳಿಕ ಸತ್ಯದ ಮಜಲಿನಲ್ಲಿ ರಾಜನ್ ದೈವ ಕಲ್ಕುಡ, ಕಲ್ಲುರ್ಟಿ, ಶಿರಾಡಿ ದೈವಗಳ ನೇಮ ನಡೆಯಿತು. ಉಪ್ಪಿನಂಗಡಿ ದೇವಾಲಯದ ಜಾತ್ರಾ ಸರಣಿಯಲ್ಲಿ ದೊಂಪದ ಬಲಿ ಕೊನೆಯ ಕಾರ್ಯಕ್ರಮವಾಗಿದೆ.
ಯಾವುದೇ ಗ್ರಾಮದಲ್ಲಿ ದೊಂಪದ ಬಲಿ ನೇಮ ಅಲ್ಲಿನ ಗದ್ದೆ ಅಥವಾ ಬಯಲಿನಲ್ಲಿ ನಡೆಯುತ್ತದೆ. ತಾತ್ಕಾಲಿಕ ಚಪ್ಪರದಡಿ ದೈವಗಳ ಭಂಡಾರ ಇರಿಸಲಾಗುತ್ತದೆ. ದೊಂಪದ ಬಲಿ ಸಂದರ್ಭ 15 ಅಡಿ ಉದ್ದದ ಮಾರಿಸೂಟೆಯನ್ನು ಹೊತ್ತಿಸಲಾಗುತ್ತದೆ. ಬಿದಿರು, ತೆಂಗಿನ ಮಡಲು, ತೆಂಗಿನ ಸಿಪ್ಪೆ ಇತ್ಯಾದಿಗಳನ್ನು ಸೇರಿಸಿ ಮಾರಿಸೂಟೆಯನ್ನು ತಯಾರಿಸಲಾಗುತ್ತದೆ. ದನ್ನು ಎರಡು ಬಿದಿರುಗಳ ಸಹಾಯದಿಂದ ಬಯಲಿನಲ್ಲಿ ನಿಲ್ಲಿಸಲಾಗುತ್ತದೆ. ದೊಂಪದ ಬಲಿ ಆರಂಭದಿಂದ ಅಂತ್ಯದವರೆಗೆ ಮಾರಿಸೂಟೆ ಬೆಳಗುತ್ತಲೇ ಇರಬೇಕು. ದೊಂಪದ ಬಲಿ ನೇಮದಲ್ಲಿ ಮೊದಲು ಎದ್ದು ನಿಲ್ಲುವ ದೈವದ ಗಗ್ಗರ ಬೂಳ್ಯ ಸ್ವೀಕಾರದ ಬಳಿಕ ಮಾರಿಸೂಟೆಗೆ ಅಗ್ನಿಸ್ಪರ್ಶ ಮಾಡಲಾಗುತ್ತದೆ.