ಶಹಾಬಾದ: ರಾಯಚೂರಿನ ನವೋದಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಸಾವಿನ ತನಿಖೆ ತೀವ್ರಗೊಳಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ವಿದ್ಯಾರ್ಥಿನಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್‌ಎಸ್ ಸಂಘಟನೆಗಳ ಕಾರ್ಯಕರ್ತರು ಶನಿವಾರ ನಗರದ ನೆಹರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಎಐಡಿವೈಒ ಸ್ಥಳೀಯ ಅಧ್ಯಕ್ಷ ಜಗನ್ನಾಥ ಎಸ್.ಎಚ್ ಮಾತನಾಡಿ, ಘಟನೆ ದೃಶ್ಯಾವಳಿ ಕಂಡರೆ ಇದೊಂದು ವ್ಯವಸ್ಥಿತ ಮತ್ತು ಯೋಜಿತ ಕೃತ್ಯವೆಂದು ಸಂಶಯ ಮೂಡುತ್ತಿವೆ. ಅರೆಬರೆ ಸುಟ್ಟ ದೇಹ, ಕತ್ತಿಗೆ ನೇಣು ಬಿಗಿದ ಪರಿ ಕ್ರೌರ್ಯದ ಕರಾಳತೆ ತೋರುತ್ತದೆ. ಈ ಹಿನ್ನೆಲೆಯಲ್ಲಿ ಮೃತ ವಿದ್ಯಾರ್ಥಿನಿಯ ಅನುಮಾನಸ್ಪದ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ತನಿಖೆಗೆ ವಿಳಂಬವಾದಲ್ಲಿ ಅಪರಾಧಿಗಳು ನುಣುಚಿಕೊಳ್ಳುವ ಮತ್ತು ಸಾಕ್ಷ್ಯಾಧಾರಗಳ ನಾಶಕ್ಕೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಆದ್ದರಿಂದ ತನಿಖೆ ಚುರುಕುಗೊಳಿಸಿ, ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಎಐಎಂಎಸ್‌ಎಸ್ ಜಿಲ್ಲಾ ಅಧ್ಯಕ್ಷ ಗುಂಡಮ್ಮ ಎಸ್.ಮಡಿವಾಳ ಮಾತನಾಡಿ, ಮಹಿಳೆಯರು ದುಡಿಯುವಂತ ಸ್ಥಳಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ದೌರ್ಜನ್ಯ ತಡೆ ಸಮಿತಿ ರಚಿಸಬೇಕು. ಅವುಗಳು ಕ್ರಿಯಾಶೀಲ ಆಗಿರುವಂತೆ ನೋಡಿಕೊಳ್ಳುವ ಕಾನೂನು ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.
ಎಐಡಿಎಸ್‌ಒ ಕಾರ್ಯದರ್ಶಿ ರಮೇಶ ದೇವಕರ, ಎಸ್‌ಯುಸಿಐ (ಸಿ) ಸ್ಥಳೀಯ ಕಾರ್ಯದರ್ಶಿ ಗಣಪತರಾವ್ ಕೆ. ಮಾನೆ, ಉಪಾಧ್ಯಕ್ಷ ತುಳಜರಾಮ ಎನ್.ಕೆ., ರಾಜೇಂದ್ರ ಅತನೂರ, ಮಹಾದೇವಿ ಮಾನೆ, ಅಂಬಿಕಾ ಆರ್. ಮಹಾದೇವಿ ಅತನೂರ, ಕೀರ್ತಿ ಎಸ್.ಎಂ. ನೀಲಕಂಠ ಹುಲಿ, ತಿಮ್ಮಯ್ಯ ಮಾನೆ, ಸುಕನ್ಯಾ ಹರಸೂರ, ಕಿರಣ, ರಘು ಮಾನೆ, ತೇಜಸ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.