Advertisement

ಸಾಗರ: ಯಾತ್ರಿ ನಿವಾಸ್ ಲೋಕಾರ್ಪಣೆಗೆ ಈಗಲೂ ಕಾಲ ಕೂಡಿ ಬಂದಿಲ್ಲ!

03:14 PM Feb 15, 2022 | Suhan S |

ಸಾಗರ: ತಾಲೂಕಿನ ಕೆಳದಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಂಚಾಯ್ತಿ ಕಾರ‍್ಯಾಲಯದ ಹಿಂಭಾಗದಲ್ಲಿ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿದ ಯಾತ್ರಿ ನಿವಾಸ್ ಕಟ್ಟಡ ನಿರ್ಮಾಣ ಕಾರ‍್ಯ ಪೂರ್ಣವಾಗಿದ್ದರೂ ಪ್ರವಾಸಿಗರ ಬಳಕೆಗೆ ದೊರಕುತ್ತಿಲ್ಲ. ಐತಿಹಾಸಿಕ ಪ್ರಸಿದ್ಧ ಸ್ಥಳವಾದ ಕೆಳದಿಯಲ್ಲಿ ಯಾತ್ರಿ ನಿವಾಸ್ ನಿರ್ಮಾಣ ಹಲವು ಕಾರಣಗಳಿಂದ ಯೋಗ್ಯ ಕಾರ‍್ಯ. ಆದರೆ ಕಟ್ಟಡ ಲೋಕಾರ್ಪಣೆಯಾಗದ ಕಾರಣ ಸದ್ವಿನಿಯೋಗವಾಗುತ್ತಿಲ್ಲ.

Advertisement

ಶೌಚಾಲಯ ಮತ್ತು ಯಾತ್ರಿ ನಿವಾಸ್ ನಿರ್ಮಾಣ ಸಂಬಂಧ ಸರಕಾರದಿಂದ 2015 ರ ಮಾರ್ಚ್ 16 ರಂದು ಆದೇಶವಾಗಿದೆ. ಸರ್ಕಾರದ ಪ್ರವಾಸೋದ್ಯಮ ಇಲಾಖೆ 2018 ರಲ್ಲಿ ಈ ಕಟ್ಟಡದ ಕಾಮಗಾರಿ ಪ್ರಾರಂಭಿಸಿದೆ. 2021 ರಲ್ಲಿ ಕಾಮಗಾರಿ ಮುಗಿದಿದೆ. ಇಲಾಖೆಯ ಸುಮಾರು 50 ಲಕ್ಷ ರೂ. ಅನುದಾನದಲ್ಲಿ ಈ ಕಟ್ಟಡ, ಶೌಚಾಲಯ ನಿರ್ಮಾಣವಾಗಿದೆ. ಸುಸಜ್ಜಿತ ಕಟ್ಟಡ ಪ್ರವಾಸಿಗಳಿಗೆ ಬಳಕೆಗೆ ದೊರಕುತ್ತಿಲ್ಲ. ಸುತ್ತಲೂ ಕಾಡುಗಿಡಗಳು ಬೆಳೆದಿದ್ದು, ಸ್ಥಳೀಯ ಪಂಚಾಯ್ತಿ ಒಂದೆರಡು ಬಾರಿ ಸ್ವಚ್ಛತೆ ಕಾರ‍್ಯ ಮಾಡಿಕೊಟ್ಟಿದೆ.

ತಂಗುವ ಕೊಠಡಿಗಳು, ಶೌಚಾಲಯ ಸೌಲಭ್ಯ ರೂಪಿಸಲಾಗಿದೆ. ಆಕರ್ಷಕ ಹಿರೇ ಕೆರೆಯ ಮೋಹಕ ದೃಶ್ಯ ಕಾಣಸಿಗುವ ಸ್ಥಳದಲ್ಲಿ ಕಟ್ಟಡವಿದೆ. ಸಂಪರ್ಕ ರಸ್ತೆ ಆಗಬೇಕಿದೆ. ಸ.ನಂ. 172ರಲ್ಲಿನ 1 ಎಕರೆ ವ್ಯಾಪ್ತಿಯ ಜಾಗದ ಪಕ್ಕಾಪೋಡಿ ಆಗಬೇಕಾಗಿದೆ. ಕಟ್ಟಡಕ್ಕೆ ವಿದ್ಯುತ್ ಹಾಗೂ ನೀರಿನ ಸೌಕರ‍್ಯದ ವ್ಯವಸ್ಥೆ ಸಹ ಆಗಬೇಕಿದೆ.

ಇದೇ ರೀತಿ ಎಡಜಿಗಳೇಮನೆ ಗ್ರಾಪಂ ವ್ಯಾಪ್ತಿಯ ಮುಖ್ಯ ರಸ್ತೆಯ ಪಕ್ಕದಲ್ಲಿ ಸಹ ಇಲಾಖೆಯ ಯಾತ್ರಿ ನಿವಾಸ್ ಕಟ್ಟಡ 5 ವರ್ಷಗಳ ಕಾಲ ಲೋಕಾರ್ಪಣೆ ಭಾಗ್ಯ ಕಂಡಿರಲಿಲ್ಲ. ಅಂತಿಮವಾಗಿ ಶಾಸಕ ಎಚ್.ಹಾಲಪ್ಪ ಹರತಾಳು, ಅಧಿಕಾರಿಗಳು  ವರದಹಳ್ಳಿಯ ಶ್ರೀಧರ ಮಹಾಮಂಡಲದ ಪರಸ್ಪರ ಸಮಾಲೋಚನೆಯ ಪರಿಣಾಮದಿಂದ ಲೋಕಾರ್ಪಣೆಯಾಗಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಈ ಕಟ್ಟಡದಲ್ಲಿ ಪ್ರವಾಸಿಗರಿಗೆ ವಸತಿ ಸೌಲಭ್ಯ ಇಂದಿನ ತಾರೀಖಿನ ತನಕ ಲಭ್ಯವಾಗಿಲ್ಲ.

ಪ್ರವಾಸಿಗರ ಸಂಖ್ಯೆ ಹೆಚ್ಚಳವಿರುವ ಹಿನ್ನೆಲೆಯಲ್ಲಿ  ಯಾತ್ರಿನಿವಾಸ್ ಸೌಲಭ್ಯ ಬಹಳ ಪ್ರಯೋಜನಕಾರಿ.  ಇಲಾಖೆ ಆಡಳಿತಾತ್ಮಕ ಕಾರ‍್ಯಗಳನ್ನು ಶೀಘ್ರ ಪೂರೈಸಿ, ನಿರ್ವಹಣೆಯ ಹೊಣೆಗಾರಿಕೆ ತೀರ್ಮಾನಿಸಬೇಕಾಗಿದೆ. ಪ್ರವಾಸಿಗರಿಗೆ ಸುಸಜ್ಜಿತದ ಕಟ್ಟಡ ಸೌಲಭ್ಯ ದೊರಕುವಂತೆ ಅನುಕೂಲ ಮಾಡಿಕೊಡಬೇಕಿದೆ.

Advertisement

ಕೆಳದಿಯಲ್ಲಿನ ಇಲಾಖೆ ನಿರ್ಮಿಸಿರುವ ಯಾತ್ರಿ ನಿವಾಸ್ ನಿರ್ವಹಣೆ ಸಂಬಂಧ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಗ್ರಾಪಂಗೆ ವಹಿಸಿಕೊಡುವ ಆದೇಶ ಕೋರಿ, ನಿರ್ದೇಶಕರಿಗೆ ಪತ್ರ ಸಲ್ಲಿಸಿದೆ. ಸೂಚನೆ ಬಂದ ತಕ್ಷಣ ಉದ್ಘಾಟನೆ, ಹಸ್ತಾಂತರ ಮುಂತಾದವುಗಳ ಸಂಬಂಧ ಕ್ರಮ ತೆಗೆದುಕೊಳ್ಳಲಾಗುವುದು.– ರಾಮಕೃಷ್ಣ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ,ಶಿವಮೊಗ್ಗ

ಅಧಿಕಾರಿ, ಜನಪ್ರತಿನಿಗಳ ವಿಳಂಬ ಧೋರಣೆಯಿಂದಾಗಿ ಸುಸಜ್ಜಿತ ಕಟ್ಟಡ ಪಾಳು ಬಿದ್ದಿದೆ. ಸುತ್ತಲು ಕಾಡುಗಿಡಗಳು ಬೆಳೆದಿವೆ. ಉದ್ಘಾಟನೆ ಭಾಗ್ಯವಿಲ್ಲ; ಅನುದಾನ ವೆಚ್ಚ ವ್ಯರ್ಥವಾಗಿದೆ. ಶೀಘ್ರ ಉದ್ಘಾಟನೆ ಮಾಡಿ, ಸಾರ್ವಜನಿಕ ಬಳಕೆಗೆ ಅವಕಾಶ ಕಲ್ಪಿಸಬೇಕು.– ಈ .ರಮೇಶ ಕೆಳದಿ, ಅಧ್ಯಕ್ಷರು, ಪ್ರಗತಿಪರ ಯುವ ಒಕ್ಕೂಟ

Advertisement

Udayavani is now on Telegram. Click here to join our channel and stay updated with the latest news.

Next