Advertisement

ಮನೆಯಲ್ಲೇ ಯಕ್ಷ ನೃತ್ಯ: ವಿಡಿಯೋ ವೈರಲ್‌!

06:27 PM May 02, 2020 | Naveen |

ಸಾಗರ: ಲಾಕ್‌ಡೌನ್‌ ಸಂದರ್ಭದಲ್ಲಿ ಮನೆ ಬಿಟ್ಟು ಹೊರಡಲಾಗದ ಯಕ್ಷಗಾನ ಕಲಾವಿದೆಯರು ತಮ್ಮ ತಮ್ಮ ಮನೆಗಳಲ್ಲಿಯೇ ಹೊಸದೊಂದು ಯಕ್ಷ ಕೃತಿಯ ಪದ್ಯಕ್ಕೆ ಹೆಜ್ಜೆ ಹಾಕಿರುವುದನ್ನು ಶೂಟ್‌ ಮಾಡಿ, ಸಂಕಲನ ಮಾಡಿ ಯೂಟ್ಯೂಬ್‌ಗ ಬಿಡುಗಡೆ ಮಾಡಿರುವ ಸಾಹಸ ಅಪಾರ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

Advertisement

ಡಾ.ಆರ್‌.ಗಣೇಶ್‌ ರಚನೆಯ ವಿಜಯ ವಿಲಾಸ ಯುಗಳ ಯಕ್ಷಗಾನ ಕೃತಿಯಲ್ಲಿನ ಪದ್ಯವೊಂದರ ಪ್ರಸ್ತುತಿಯನ್ನು ಯಕ್ಷಗಾನ ಕ್ಷೇತ್ರದ ಕಲಾವಿದೆಯರು ಸಿದ್ಧಪಡಿಸಿ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಮಧುಮಾಸ ಹೆಣ್ಣಿನ ಹೆಜ್ಜೆಗೆ ವಸಂತನ ಗೆಜ್ಜೆ ಎಂಬ 9-25 ನಿಮಿಷಗಳ ಪ್ರಸ್ತುತಿ ಇದಾಗಿದೆ. ಸಾಗರ ತಾಲೂಕಿನ ಗೋಟಗಾರಿನ ಸೌಮ್ಯ ಅರುಣ್‌, ಶಿವಮೊಗ್ಗದ ನವ್ಯ ಭಟ್ಟ, ಅಕಾಡೆಮಿ ಮಾಜಿ ಸದಸ್ಯೆ ಅಶ್ವಿ‌ನಿ ಕೊಂಡದಕುಳಿ, ಪ್ರಮದಾ ಮಂಟಪ ಮತ್ತು ಮಾಧುರಿ ಮಂಟಪ ಯಕ್ಷ ನೃತ್ಯ ಮಾಡಿದ್ದಾರೆ.

ಲಾಕ್‌ಡೌನ್‌ ಸಂದರ್ಭ ಮನೆಯಲ್ಲಿ ಕುಳಿತ ಕಲಾವಿದೆಯರಿಗೆ ಏಕವ್ಯಕ್ತಿ ಪ್ರದರ್ಶನದ ಮಂಟಪ ಪ್ರಭಾಕರ ಉಪಾಧ್ಯಾಯ ಸ್ಫೂರ್ತಿಯಾಗಿದ್ದಾರೆ. ವಾಟ್ಸ್‌ಆ್ಯಪ್‌ ಮೂಲಕ ಕಲಾವಿದೆಯರನ್ನು ಪ್ರಮದಾ ಉಪಾಧ್ಯಾಯ ಸಂಪರ್ಕಿಸಿ ಸೂಚನೆ ನೀಡಿದ್ದಾರೆ. ಪದ್ಯದ ಪೂರ್ಣಪಾಠಕ್ಕೆ ಕಲಾವಿದೆಯರು ನೃತ್ಯ ಮಾಡಿದ್ದು, ಅದನ್ನು ಅವರವರ ಮನೆಯಲ್ಲಿಯೇ ಚಿತ್ರೀಕರಿಸಲಾಗಿದೆ. ಆನಂತರ ಪ್ರಮದಾ ಅವರು ಪ್ರಸ್ತುತಿಯ ಅಗತ್ಯಕ್ಕೆ ತಕ್ಕಂತೆ ಸಂಕಲನ ಮಾಡಿದ್ದಾರೆ.

ವಿದ್ವಾನ್‌ ಗಣಪತಿ ಭಟ್ಟ ಭಾಗವತಿಕೆ ಮತ್ತು ಎ.ಪಿ.ಪಾಠಕರ ಮದ್ದಳೆ ಹಿನ್ನೆಲೆಯಲ್ಲಿದೆ. ಬುಧವಾರ ಜಾಲತಾಣಗಳಲ್ಲಿ ಲಭ್ಯವಾಗಿದ್ದು, ಆಸಕ್ತರ ಗ್ರೂಪ್‌ಗ್ಳಲ್ಲಿ ಹರಿದಾಡುತ್ತಿದೆ. ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಸೃಜನಾತ್ಮಕ ಚಿಂತನೆಯನ್ನು ಲಾಕ್‌ಡೌನ್‌ ಕೂಡ ತಡೆಯಲಾರದು ಎಂದು ಯಕ್ಷಪ್ರೇಮಿ ಯೋಗೀಶ್‌ ಜಿ. ಅಭಿಮತ ವ್ಯಕ್ತಪಡಿಸಿದ್ದಾರೆ. ಯಕ್ಷ ವಿಡಿಯೋವನ್ನು ಇಲ್ಲಿ ವೀಕ್ಷಿಸಬಹುದು: https://youtu.be/xSql914_XKM

Advertisement

Udayavani is now on Telegram. Click here to join our channel and stay updated with the latest news.

Next