Advertisement

ಫಾರ್ಮಾಸಿಸ್ಟ್‌ ಆಸ್ಪತ್ರೆಯ ಜೀವನಾಡಿ

03:56 PM Sep 26, 2019 | Naveen |

ಸಾಗರ: ವೈದ್ಯ ಮತ್ತು ಫಾರ್ಮಾಸಿಸ್ಟ್‌ ಆಸ್ಪತ್ರೆಯ ಜೀವನಾಡಿ ಇದ್ದಂತೆ. ವೈದ್ಯರು ರೋಗಿಗಳ ಜೀವ ಉಳಿಸುವ ಬಗ್ಗೆ ಹೋರಾಟ ಮಾಡುತ್ತಿದ್ದರೆ ಫಾರ್ಮಾಸಿಸ್ಟ್‌ ವೈದ್ಯರು ಹೇಳುವ ಔಷಧ, ಮಾತ್ರೆಗಳನ್ನು ರೋಗಿಗಳಿಗೆ ನೀಡುವ ಮೂಲಕ ವೈದ್ಯರಿಗೆ ಬೆನ್ನೆಲುಬಾಗಿ ನಿಲ್ಲುತ್ತಾನೆ ಎಂದು ಹಿರಿಯ ಸಾಹಿತಿ ಡಾ| ನಾ. ಡಿಸೋಜಾ ತಿಳಿಸಿದರು.

Advertisement

ನಗರದ ತಾಯಿ- ಮಗು ಆಸ್ಪತ್ರೆಯಲ್ಲಿ ಬುಧವಾರ ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಫಾರ್ಮಾಸಿಸ್ಟ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.

ವೈದ್ಯರು ಮತ್ತು ಫಾರ್ಮಾಸಿಸ್ಟ್‌ ಒಂದು ರೀತಿಯಲ್ಲಿ ಸಮಾನ ಜವಾಬ್ದಾರಿ ನಿರ್ವಹಿಸುತ್ತಾರೆ. ಇಬ್ಬರೂ ಆರೋಗ್ಯ ಕ್ಷೇತ್ರದಲ್ಲಿ ರೋಗಿಗಳ ಪ್ರಾಣ ರಕ್ಷಣೆಗೆ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ನಡೆಸುತ್ತಾ ಇರುತ್ತಾರೆ. ಕ್ರಿ.ಶ. 1750ರಲ್ಲಿ ಬಾಗ್ಧಾನ್‌ನಲ್ಲಿ ಗುಳಿಗೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದ ವ್ಯಕ್ತಿ ವಿಶ್ವದ ಮೊದಲ ಫಾರ್ಮಾಸಿಸ್ಟ್‌. ಇಂತಹ ಫಾರ್ಮಾಸಿಸ್ಟ್‌ ಸೇವೆಯನ್ನು ನೆನಪಿಸಿಕೊಳ್ಳುವ ದಿನಾಚರಣೆ ಅರ್ಥಪೂರ್ಣ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ| ಮುನಿ ವೆಂಕಟರಾಜು, ತಾಲೂಕಿನಲ್ಲಿ 23 ಜನ ಫಾರ್ಮಾಸಿಸ್ಟ್‌ ಅಗತ್ಯವಿದ್ದು, ಕೇವಲ 11 ಜನ ಮಾತ್ರ ಇದ್ದಾರೆ. ಫಾರ್ಮಾಸಿಸ್ಟ್‌ ಕೊರತೆ ಇರುವುದರಿಂದ ಕೆಲವೊಮ್ಮೆ ರೋಗಿಗಳಿಗೆ ಉತ್ತಮ ಸೇವೆ ನೀಡಲು ಹಿನ್ನಡೆ ಉಂಟಾಗುತ್ತಿದೆ. ಔಷಧ ಕೊಡುವ ಜೊತೆಗೆ ಸರ್ಕಾರಕ್ಕೆ ಸೂಕ್ತ ಮಾಹಿತಿ ನೀಡುವ ಜವಾಬ್ದಾರಿಯುತ ಕೆಲಸವನ್ನು ಫಾರ್ಮಾಸಿಸ್ಟ್‌ ಮಾಡುತ್ತಿದ್ದಾರೆ ಎಂದು ಹೇಳಿದರು.

ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಮ. ಸ. ನಂಜುಂಡಸ್ವಾಮಿ ಮಾತನಾಡಿ, ಬೇರೆ ಬೇರೆ ವೃತ್ತಿಯಲ್ಲಿ ಇರುವವರಿಗೆ ದಿನಾಚರಣೆ ಇದ್ದಂತೆ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೂ ಸಹ ಸರ್ಕಾರ ದಿನಾಚರಣೆ ನಡೆಸುವಂತೆ ಆಗಬೇಕು. ವಿಶ್ವ ಆರೋಗ್ಯ ದಿನಾಚರಣೆ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳನ್ನು ಗುರುತಿಸಿ, ಗೌರವಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

Advertisement

ಇದೇ ಸಂದರ್ಭದಲ್ಲಿ ಫಾರ್ಮಾಸಿಸ್ಟ್‌ಗಳಾದ ಎಚ್‌.ಡಿ.ಈಳೇಗರ್‌, ವೈ. ಮೋಹನ್‌, ಶಂಕರ್‌ ಹೊನ್ನಯ್ಯ, ಎಂ. ಸತೀಶ್‌, ರಾಜೀವ್‌, ನಿರ್ಮಲಬಾಯಿ, ರವಿ ಎ.ಎಸ್‌., ಬಾಸೋಬಿ, ಅಶ್ವಿ‌ನಿ, ಸ್ವಪ್ನಾ, ಪುಷ್ಪಾ ಪಿ.ಎಸ್‌., ಗೀತಾ, ಮಂಜುನಾಥ ಬಿ. ಅವರನ್ನು ಸನ್ಮಾನಿಸಲಾಯಿತು.

ಒಕ್ಕೂಟದ ತಾಲೂಕು ಅಧ್ಯಕ್ಷ ವೈ.ಮೋಹನ್‌ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತರಾಜ್‌, ಫಾರ್ಮಾಸಿಸ್ಟ್‌ ಅಸೋಸಿಯೇಶನ್‌ನ ಜಿಲ್ಲಾಧ್ಯಕ್ಷ ಪ್ರಭಾಕರ್‌, ವಿಜಯಕಾಂತ್‌ ಇದ್ದರು. ಸುವರ್ಣ ನಾಯ್ಕ ಪ್ರಾರ್ಥಿಸಿದರು. ಎ. ಸುರೇಶ್‌ ಸ್ವಾಗತಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾಬಾಯಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next