Advertisement

ಛತ್ರದಲ್ಲಿ ಮದುವೆ ಎಂದರೆ ಹಾರಿಗೆ ಗ್ರಾಮಸ್ಥರಿಗೆ ಭಯ!

05:48 PM May 25, 2019 | Naveen |

ಸಾಗರ: ತಾಲೂಕಿನ ಕುದರೂರು ಗ್ರಾಪಂ ವ್ಯಾಪ್ತಿಯ ಹಾರಿಗೆ ಗ್ರಾಮದಲ್ಲಿರುವ ಸಭಾಭವನದಲ್ಲಿ ಸಭೆ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು ನಡೆದರೆ ಆಸುಪಾಸಿನ ನಿವಾಸಿಗಳು ಭಯಭೀತರಾಗುವ ಸ್ಥಿತಿ ನಿರ್ಮಾಣವಾಗಿದೆ. ಸಮಾರಂಭ ಮುಗಿದ ಎರಡು ಮೂರು ದಿನ ಈ ಭಾಗದ ಜನ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ. ಪ್ಲಾಸ್ಟಿಕ್‌, ಕಸ, ಬಿಸಾಕಿದ ಆಹಾರ ಮುಂತಾದವುಗಳನ್ನು ತಿಂದು, ಸ್ಥಳೀಯರು ಸಾಕಿದ ಜಾನುವಾರುಗಳ ಆರೋಗ್ಯ ಹಾಳಾಗುತ್ತಲಿದ್ದು, ಅಂತಹ ತ್ಯಾಜ್ಯ ಸೇವಿಸಿದ ಆಕಳೊಂದು ಗುರುವಾರ ಮೃತಪಟ್ಟಿದೆ.

Advertisement

ಗ್ರಾಮದ ನೇಮಿನಾಥ ದಿಗಂಬರ ಜೈನ ಬಸದಿಯ ಪಕ್ಕದಲ್ಲಿ ಖಾಸಗಿ ಆಡಳಿತಕ್ಕೆ ಸೇರಿದ ಸಭಾಭವನ ಸುಲಭ ಲಭ್ಯ, ಸಾಕಷ್ಟು ಸೌಲಭ್ಯಗಳಿರುವ ವ್ಯವಸ್ಥೆ. ಸೀಸನ್‌ನಲ್ಲಿ 10-15 ಮದುವೆ ಕಾರ್ಯಗಳು ಇಲ್ಲಿ ನಡೆಯುತ್ತವೆ. ಆದರೆ ತ್ಯಾಜ್ಯ ವಿಲೇವಾರಿಗೆ ಯಾವುದೇ ಸೂಕ್ತ ವ್ಯವಸ್ಥೆಗಳಿಲ್ಲದ ಹಿನ್ನೆಲೆಯಲ್ಲಿ ಸಮುದಾಯ ಭವನದ ಸಮೀಪದ ಖಾಲಿ ಜಾಗದಲ್ಲಿ ಕಸ, ಪ್ಲಾಸ್ಟಿಕ್‌, ಹೆಚ್ಚುವರಿ ಆಹಾರ ಮುಂತಾದವುಗಳನ್ನು ಬಿಸಾಕಲಾಗುತ್ತದೆ. ಇವು ವಾರ ಕಳೆದರೂ ವಿಲೇವಾರಿಯಾಗದೆ ಆತಂಕದ ಸ್ಥಿತಿ ಉಂಟು ಮಾಡುತ್ತವೆ. ಆಸುಪಾಸಿನ ಸುಮಾರು ಹತ್ತಿಪ್ಪತ್ತು ಮನೆಗಳ ಜಾನುವಾರುಗಳು ಈ ತ್ಯಾಜ್ಯವನ್ನು ಸೇವಿಸಿ, ಅನಾರೋಗ್ಯ ಪೀಡಿತರಾಗುತ್ತಿರುವ ಘಟನೆ ಪದೇ ಪದೇ ನಡೆಯುತ್ತಿದೆ. ಸಾವಿರಾರು ರೂ. ವರೆಗೆ ಜಾನುವಾರುಗಳ ಔಷಧಕ್ಕೆ ಸ್ಥಳೀಯರು ವೆಚ್ಚ ಮಾಡುವ ಸ್ಥಿತಿ ಇದೆ. ಸೂಕ್ತ ಚಿಕಿತ್ಸೆ ನೀಡಿದರೂ ಫಲಿಸದೆ ಜಾನುವಾರುಗಳು ಸಾಯುತ್ತಿವೆ. ತ್ಯಾಜ್ಯ ವಿಲೇವಾರಿ ಸಮಸ್ಯೆ ಕುರಿತು ಸ್ಥಳೀಯ ಗ್ರಾಪಂಗೆ ಗ್ರಾಮವಾಸಿಗಳು ದೂರು ನೀಡಿದ್ದಾರೆ.

ಸಭಾಭವನದ ಸುತ್ತಲೂ ರಾಶಿ ಬಿದ್ದಿರುವ ತ್ಯಾಜ್ಯ ಗಬ್ಬು ವಾಸನೆಗೆ ಕಾರಣವಾಗುತ್ತದೆ. ಅಲ್ಲದೇ ಜಾನುವಾರುಗಳ ಸಾವಿಗೂ ಕಾರಣವಾಗುತ್ತಿದೆ. ನನ್ನ ಆಕಳೊಂದು ಗುರುವಾರ ಕಸ, ತ್ಯಾಜ್ಯ ತಿಂದು ಸತ್ತುಹೋಗಿದೆ. ಗ್ರಾಪಂಗೆ ದೂರು ನೀಡಿದ್ದೇನೆ.
ಬಸವರಾಜ, ಹಾರಿಗೆ

ತ್ಯಾಜ್ಯದ ರಾಶಿಯಿಂದ ಸ್ಥಳೀಯರಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಹಾಗೂ ಜಾನುವಾರುಗಳು ಸಾಯುತ್ತಿರುವ ಬಗ್ಗೆ ಮಾಹಿತಿ ಇದೆ. ತ್ಯಾಜ್ಯ ವಿಲೇವಾರಿ ಸಕಾಲದಲ್ಲಿ ಆಗುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸಭಾಭವನದ ಆಡಳಿತ ಮಂಡಳಿಗೆ ಸೂಚನೆ ನೀಡಲಾಗುವುದು.
ವಿಶ್ವನಾಥ ಫಟಗಾರ,
ಪಿಡಿಒ, ಕುದರೂರು ಗ್ರಾಪಂ

Advertisement

Udayavani is now on Telegram. Click here to join our channel and stay updated with the latest news.

Next