ಸಾಗರ: ಗಂಗಾವತಿ ತಾಲೂಕಿನ ಆನೆಗೊಂದಿ ತುಂಗಾಭದ್ರ ನಡುಗುಡ್ಡೆಯಲ್ಲಿರುವ ನವ ಬೃಂದಾವನದಲ್ಲಿ ವ್ಯಾಸರಾಜರ ವೃಂದಾವನವನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿ, ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಶುಕ್ರವಾರ ಮಾಧ್ವ ಸಂಘದ ವತಿಯಿಂದ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿದ್ದ ವ್ಯಾಸರಾಜರು ತಮ್ಮ ತಪಶಕ್ತಿಯಿಂದ ಅನೇಕ ಬಾರಿ ವಿಜಯ ನಗರ ಸಾಮ್ರಾಜ್ಯವನ್ನು ರಕ್ಷಣೆ ಮಾಡಿದ ಮಹಾ ತತ್ವಜ್ಞಾನಿಗಳಾಗಿದ್ದಾರೆ. ವಿಜಯನಗರದಲ್ಲಿ ನಡೆದ ಅನೇಕ ಯುದ್ಧಗಳ ಸಂದರ್ಭದಲ್ಲಿ ಸಹ ವೃಂದಾವನಕ್ಕೆ ಯಾವುದೇ ಹಾನಿ ಆಗಿರಲಿಲ್ಲ. ಮಧ್ವ ಸಂಪ್ರದಾಯದ ಗುರುಗಳಾಗಿದ್ದ ವ್ಯಾಸರಾಜರು ಅನೇಕ ಶಾಸ್ತ್ರಗ್ರಂಥಗಳನ್ನು ರಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ವ್ಯಾಸರಾಜರು ಹಿಂದೂ ಧರ್ಮದ ರಕ್ಷಣೆಗಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸ್ವತಃ ದೇವರನಾಮಗಳನ್ನು ರಚಿಸಿರುವುದಲ್ಲದೆ ಕನಕದಾಸರು ಮತ್ತು ಪುರಂದರ ದಾಸರು ದೇವರನಾಮಗಳನ್ನು ರಚನೆ ಮಾಡಲು ವ್ಯಾಸರಾಜರು ಪ್ರೇರಣೆಯಾಗಿದ್ದಾರೆ ಎಂದು ತಿಳಿಸಲಾಗಿದೆ.
ಸಾಗರದ ಕೆರೆಕೋಡಿ ಆಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ರಾಷ್ಟ್ರಾದ್ಯಂತ ವ್ಯಾಸರಾಜರು ದೇಶಾದ್ಯಂತ 700ಕ್ಕೂ ಅಧಿಕ ದೇವಾಲಯಗಳನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಂತಹ ಮಹಾನ್ ಯೋಗಿಗಳ ವೃಂದಾವನವನ್ನು ದುಷ್ಕರ್ಮಿಗಳು ನಾಶ ಮಾಡಿರುವುದು ಇಡೀ ಮಾಧ್ವ ಸಮುದಾಯಕ್ಕೆ ಘಾಸಿಯುಂಟು ಮಾಡಿದೆ ಎಂದು ತಿಳಿಸಲಾಗಿದೆ.
ಇತ್ತೀಚೆಗೆ ಹಂಪಿಯಲ್ಲಿ ಅನೇಕ ಕಂಬಗಳನ್ನು ಉರುಳಿಸಿ ಹಾಕಿರುವ ಘಟನೆ ನಡೆದಿರುವಾಗಲೇ ಇದೀಗ ವ್ಯಾಸರಾಜರ ವೃಂದಾವನ ಧ್ವಂಸಗೊಳಿಸಲಾಗಿದೆ. ಸರ್ಕಾರ ತಕ್ಷಣ ವೃಂದಾವನವನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ.
ಡಾ| ಗುರುರಾಜ ಕಲ್ಲಾಪುರ, ವೈ.ಮೋಹನ್, ಕೆ.ಆರ್. ರಾಜಗೋಪಾಲ್, ಸತ್ಯಶೀಲ, ಆನಂದ್ ಕಲ್ಯಾಣಿ, ರೇವತಿ ಹತ್ವಾರ್, ಮಂಜುಳಾ ಬದರಿನಾಥ್, ವೆಂಕಟೇಶ್ ಕಟ್ಟಿ, ಕೆ.ಆರ್. ಗಣೇಶಪ್ರಸಾದ್, ಐ.ವಿ. ಹೆಗಡೆ, ಚೂಡಾಮಣಿ ರಾಮಚಂದ್ರ, ಕೋಮಲ್ ರಾಘವೇಂದ್ರ, ಮಹೇಶ್ ಹೆಗಡೆ, ರವೀಶಕುಮಾರ್ ಇದ್ದರು.