ಸಾಗರ: ಮತದಾನ ಮುಗಿದು ನಾಲ್ಕು ಮೂರು ದಿನಗಳಾದರೂ ಮತದಾರರ ಪಟ್ಟಿಯಲ್ಲಿ ಉಂಟಾದ ಗೊಂದಲದ ಸದ್ದು ನಿಂತಿಲ್ಲ. ಮತದಾನದ ದಿನ ಮತದಾರರ ಪಟ್ಟಿಯಲ್ಲಿನ ವ್ಯತ್ಯಯದಿಂದ ಅಲ್ಲಲ್ಲಿ ಮತದಾರರಿಗೆ ತೊಂದರೆಯಾದ ಸುದ್ದಿ ಕೇಳುತ್ತಲೇ ಇದೆ. ಜಿಲ್ಲೆಯಲ್ಲಿ ಶೇ. 100ರ ಮತದಾನ ಆಗಬೇಕೆಂದು ಬೃಹತ್ ಪ್ರಮಾಣದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ನಡೆಸಿದ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರ ಪ್ರಯತ್ನಗಳಿಗೆ ಮೆಚ್ಚುಗೆ ಸಿಗುತ್ತಿರುವ ಕಾಲದಲ್ಲಿಯೇ ಮತದಾರರ ಚೀಟಿ ಹಾಗೂ ಗುರುತಿನ ದಾಖಲೆ ಕುರಿತಂತೆ ಗೊಂದಲ ಉಂಟಾಗಿ ಮತದಾನಕ್ಕೆ ತೊಂದರೆಯಾದ ಘಟನೆಗಳು ತಾಲೂಕಿನಲ್ಲಿ ನಡೆದಿದ್ದು ತಡವಾಗಿ ಬಯಲಿಗೆ ಬರುತ್ತಿದೆ.
ಸಾಗರ ವಿಧಾನಸಭಾ ಕ್ಷೇತ್ರದ ಸೊರಬ ರಸ್ತೆಯ ಸಿದ್ದೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ನಂಬರ್ 50ರಲ್ಲಿನ ಚುನಾವಣಾ ಅಧಿಕಾರಿಗಳು ಚುನಾವಣಾ ಆಯೋಗ ನೀಡಿದ ಗುರುತಿನ ಚೀಟಿ ಹಾಗೂ ಆಯೋಗ ನೀಡಿದ ಎಪಿಕ್ ಕಾರ್ಡ್‌ಗಳನ್ನು ಮತದಾರ ಸಂದರ್ಭದಲ್ಲೂ ಎಪಿಕ್ ಕಾರ್ಡಿನಲ್ಲಿನ ಸಂಖ್ಯೆ ವ್ಯತ್ಯಾಸವಿದೆ ಎಂದು ಕಾರಣವೊಡ್ಡಿ ಮತದಾನಕ್ಕೆ ನಿರಾಕರಿಸಿದ ಘಟನೆ ನಡೆದಿತ್ತು. ಬೂತ್ ನಿರ್ವಾಹಕ ಅಧಿಕಾರಿಗಳು ಗುರುತಿನ ಚೀಟಿಯಲ್ಲಿನ ಮತದಾರರ ಎಪಿಕ್ ಸಂಖ್ಯೆ ಹಾಗೂ ಮತದಾರರ ಪಟ್ಟಿಯಲ್ಲಿದ್ದ ಸಂಖ್ಯೆ ವ್ಯತ್ಯಾಸವಿರುವ ಕಾರಣ ಗುರುತಿನ ದಾಖಲೆಯಾಗಿ ಪರಿಗಣಿಸಲಾಗದು. ಚುನಾವಣಾ ಆಯೋಗ ಸೂಚಿಸಿದ ಬೇರೆ ದಾಖಲೆ ತನ್ನಿ ಎಂದು ಮತದಾರರಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಣ್ಣ ಪ್ರಮಾಣದ ಮಾತಿನ ಚಕಮಕಿ ನಡೆದಿದೆ. ಹಲವರು ಮತದಾನ ಮಾಡದೆ ಮರಳಿದವರು ಮತ್ತೆ ಮತದಾನ ಕೇಂದ್ರಕ್ಕೆ ಬೇರೆ ದಾಖಲೆ ತೆಗೆದುಕೊಂಡು ಬಂದು ಮತದಾನ ಮಾಡುವ ಗೋಜಿಗೇ ಹೋಗಿಲ್ಲ.
ಈ ಬೂತ್‌ನಲ್ಲಿ ಒಟ್ಟು 904 ಮತಗಳಿದ್ದು, ಅದರಲ್ಲಿ 626 ಮತಗಳಷ್ಟೇ ಚಲಾವಣೆಯಾಗಿವೆ. ಕಾನೂನಿನ ಅಂಶಗಳಲ್ಲಿ ಚುನಾವಣಾ ಅಧಿಕಾರಿಗಳು ನೀಡಿದ ತಪ್ಪು ಮಾಹಿತಿಗಳಿಂದಾಗಿಯೇ ಮತದಾರರು ಕಿರುಕುಳಕ್ಕೊಳಗಾಗಿದ್ದು, ಶೇ. 69ರಷ್ಟೇ ಮತದಾನವಾಗಲು ಕಾರಣವಾಯಿತು ಎಂದು ಅಲ್ಲಿನ ಮತದಾರರು ದೂರಿದ್ದಾರೆ. ಈ ರೀತಿಯ ಗೊಂದಲ ತಾಲೂಕಿನ ವಿವಿಧ ಭಾಗಗಳಲ್ಲಿಯೂ ನಡೆದಿವೆ. ಚುನಾವಣಾ ಅಧಿಕಾರಿಗಳು ಎಪಿಕ್ ಕಾರ್ಡ್ ಹಳೆಯದು ಎಂಬ ಕಾರಣಕ್ಕೆ ಬೇರೆ ದಾಖಲೆಗೆ ಒತ್ತಾಯಿಸಿದ ಘಟನೆಗಳು ಸಂಭವಿಸಿವೆ. ಹಲವೆಡೆ ಬೂತ್‌ನ ಮುಖ್ಯ ನಿರ್ವಾಹಕ ಅಧಿಕಾರಿ ಅವರ ಸೂಚನೆ ಮೇರೆಗೆ ಹಳೆಯ ಚುನಾವಣಾ ಕಾರ್ಡ್‌ಗಳನ್ನು ಒಪ್ಪಿ ಮತದಾನಕ್ಕೆ ಅವಕಾಶ ಕೊಡಲಾಗಿದೆ.
ಚುನಾವಣಾ ಆಯೋಗ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಗಳನ್ನು ಮತದಾನಕ್ಕಿಂತ 24 ಗಂಟೆ ಮೊದಲೇ ಪ್ರತಿಯೊಬ್ಬ ಮತದಾರರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದೆ. ಅದಕ್ಕಾಗಿಯೇ ಬ್ಲಾಕ್ ಲೆವೆಲ್ ಅಧಿಕಾರಿ ಬಿಎಲ್ಒ ಅವರನ್ನು ನೇಮಿಸಿದೆ. ಬಿಎಲ್ಒಗಳ ಕಾರ್ಯದ ಬಗ್ಗೆ ಆಕ್ಷೇಪಗಳಿವೆ. ಅವರು ಈ ವೋಟರ್ ಸ್ಲಿಪ್‌ಗ್ಳನ್ನು ಕೂಡ ಸಮರ್ಪಕವಾಗಿ ವಿತರಿಸಿಲ್ಲ ಎಂದು ಹೇಳಲಾಗಿದೆ. ಕಳೆದ ವರ್ಷಗಳಲ್ಲಿ ಈ ಮತದಾರರ ಚೀಟಿಯನ್ನು ಮಾತ್ರ ತೆಗೆದುಕೊಂಡು ಹೋದರೂ ಮತದಾನಕ್ಕೆ ಅವಕಾಶ ಕೊಡಬಹುದು ಎಂಬ ಮಾತಿದ್ದರೆ, ಈ ಬಾರಿ ಮತದಾನಕ್ಕೆ ಇದರ ಜೊತೆ ಇನ್ನೊಂದು ದಾಖಲೆ ಕಡ್ಡಾಯ ಎನ್ನಲಾಗಿತ್ತು. ಅದೇ ಮತದಾರರ ಚೀಟಿಯಲ್ಲಿ ಮತಗಟ್ಟೆಯಲ್ಲಿ ಮತದಾರರನ್ನು ಗುರುತಿಸುವ ಕಾರಣಕ್ಕಾಗಿ ಈ ಚೀಟಿಯನ್ನು ಒಪ್ಪಿಕೊಳ್ಳುವುದಿಲ್ಲ. ಮತದಾರರ ಎಪಿಕ್ ಕಾರ್ಡ್ ಅಥವಾ ಇತರ 11 ದಾಖಲೆಗಳನ್ನು ಮತದಾನದ ಸಂದರ್ಭದಲ್ಲಿ ಹಾಜರುಪಡಿಸಬೇಕು ಎಂದು ಮತದಾರರ ಗುರುತಿನ ಚೀಟಿಯಲ್ಲಿಯೇ ಸೂಚಿಸಲಾಗಿತ್ತು. ಸಿದ್ದೇಶ್ವರ ಶಾಲೆಯ ಬೂತ್ ನಂ. 50ರ ನಿರಾಕರಣೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುವ ಅಲ್ಲಿನ ಮತದಾರ ಬಿ.ಎಸ್. ಅಶೋಕ್, ನಾನು ವೋಟರ್ ಸ್ಲಿಪ್‌ನ್ನು ತೆಗೆದುಕೊಂಡು ಹೋಗಿದ್ದೇನೆ. ಈ ಸಂದರ್ಭದಲ್ಲಿ ಈ ಹಿಂದೆ ನನಗೆ ನೀಡಲಾದ ಎಪಿಕ್ ಕಾರ್ಡ್ ತೆಗೆದುಕೊಂಡು ಹೋಗಿದ್ದೇನೆ. ನಾನು ಹೆಸರು, ವಿಳಾಸ ಬದಲಿಸಿ ಹೊಸ ಎಪಿಕ್ ಕಾರ್ಡ್ ಪಡೆದಿಲ್ಲ. ಹೊಸದಾಗಿ ಬಂದಿದ್ದರೆ ಆ ಕಾರ್ಡ್‌ನ್ನು ಚುನಾವಣಾ ಆಯೋಗ ಬಿಎಲ್ಒ ಮೂಲಕ ತಲುಪಿಸಬೇಕಿತ್ತು. ಮತದಾರರ ಸ್ಲಿಪ್ ಹೊಂದಿದವರು ತಮ್ಮ ಗುರುತಿಗೆ ಹಳೆಯ ಎಪಿಕ್ ಕಾರ್ಡ್ ನೀಡಿದರೂ ಚುನಾವಣಾ ಅಧಿಕಾರಿಗಳು ಅದನ್ನು ನಿರಾಕರಿಸಲು ಕಾರಣಗಳಿಲ್ಲ ಎಂದು ತಿಳಿಸುತ್ತಾರೆ. ತಾಲೂಕಿನ ಬಹುಸಂಖ್ಯಾತರಲ್ಲಿ 1995ರಲ್ಲಿ ಚುನಾವಣಾ ಆಯೋಗ ನೀಡಿದ ಗುರುತಿನ ಚೀಟಿಗಳೇ ಇವೆ. ಇವುಗಳಲ್ಲಿರುವ ಎಪಿಕ್ ಸಂಖ್ಯೆಗೂ ಈಗ ಮತದಾರರ ಪಟ್ಟಿಯಲ್ಲಿರುವ ಎಪಿಕ್ ಸಂಖ್ಯೆಗೂ ತಾಳೆಯಾಗುತ್ತಿಲ್ಲ. ಈ ಎಲ್ಲ ಹಳೆಯ ಮತದಾರರಿಗೆ ವ್ಯವಸ್ಥಿತವಾಗಿ ಹೊಸ ಎಪಿಕ್ ಕಾರ್ಡ್ ವಿತರಿಸುವ ಕೆಲಸವನ್ನು ಮತ್ತೂಂದು ಚುನಾವಣೆ ಬರುವುದರೊಳಗೆ ಚುನಾವಣಾ ಆಯೋಗ ಪೂರೈಸಬೇಕು. ಇಲ್ಲದಿದ್ದರೆ ಮತದಾನದ ಸಮಯದಲ್ಲಿ ಅಧಿಕಾರಿಗಳ ನಿರಾಕರಣೆ ಸಮಸ್ಯೆ ಒಡ್ಡಬಹುದು ಎಂದು ಅಣಲೆಕೊಪ್ಪದ ನಿವಾಸಿ ರಾಮಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ವೋಟರ್ ಸ್ಲಿಪ್ ಜೊತೆ ಗುರುತಿಸುವ ಕಾರಣಕ್ಕೆ ಹಳೆಯ ಚುನಾವಣಾ ಗುರುತಿನ ಚೀಟಿಯನ್ನು ನೀಡಿದರೂ ಮತದಾನ ಕೇಂದ್ರದ ಅಧಿಕಾರಿಗಳು ನಿರಾಕರಣೆ ಮಾಡಬಾರದು. ಈ ರೀತಿಯ ಸನ್ನಿವೇಶಗಳನ್ನು ಪರಿಗಣಿಸಿ ಆದಷ್ಟು ಕ್ಷಿಪ್ರವಾಗಿ ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಉಪ ಚುನಾವಣೆ ಅಥವಾ ಸಾಗರದಲ್ಲಿಯೇ ಮುಂದೆ ನಡೆಯಲಿರುವ ನಗರಸಭೆ ಚುನಾವಣೆಯ ಸಂದರ್ಭದಲ್ಲಿ ಮತ್ತೆ ಗೊಂದಲಗಳಾಗಿ ಮತದಾರ ಕಿರುಕುಳಕ್ಕೊಳಗಾಗುವ ಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.