ಸಾಗರ: ನಮ್ಮ ಪೀಠಾರೋಹಣದ ಮೊದಲ ಆಶೀರ್ವಚನ ಸಂದರ್ಭದಲ್ಲಿಯೇ ವೇದವಿದ್ಯಾಪೀಠದ ಆಸೆಯನ್ನು ಪ್ರಕಟಿಸಿದ್ದೆವು. ಅದು ಪೂರ್ವ ನಿಗದಿಯಾಗಿ ಹೇಳಿದ್ದಲ್ಲ. ಆಡಿಸಿದಂತದ್ದು. ಆ ಮಾತು ಹೇಳಿ 20 ವರ್ಷ ಸಂದಿದೆ. ಕಾಲ ಮಿಂಚಿ ಹೋಗಬಾರದು. ಇನ್ನು ವಿಳಂಬವಿಲ್ಲದೆ ಮುಂದಿನ ವರ್ಷದ ಏಪ್ರಿಲ್ನ ಅಕ್ಷಯ ತದಿಗೆಯ ದಿನ ವಿವಿಯ ಆರಂಭ ಖಚಿತ ಎಂದು ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿಗಳು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ರಾಘವೇಶ್ವರ ಸಭಾಭವನದಲ್ಲಿ ಭಾನುವಾರ ನಡೆದ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಪ್ರಸ್ತುತಿ ದರ್ಶನ ಕಾರ್ಯಕ್ರಮದಲ್ಲಿ ರಾಮಚಂದ್ರಾಪುರ, ಸಾಗರ ಹಾಗೂ ಸಿದ್ದಾಪುರಗಳ ಮೂರು ಮಂಡಲಗಳ ಪ್ರಾಂತ್ಯ ಸಭೆಯಲ್ಲಿ ಮಾತನಾಡಿದ ಅವರು, ಗುರು ಗುರುವಾಗುವುದಿಲ್ಲ. ವಿದ್ಯಾರ್ಥಿಗಳಿಗೆ ನೆಲೆಯಾಗುವವರೇ ಗುರು ಎಂಬ ಅರ್ಥ ಇದೆ. ಇಂದು ಗುರು ಎಂದರೆ ಒಳ್ಳೆಯ ವ್ಯಾಪಾರಿ ಎಂಬ ವ್ಯಾಖ್ಯಾನ ಇದ್ದರೂ ಜ್ಞಾನವನ್ನು ಕೊಡುವವರೇ ನಿಜವಾದ ಗುರುಗಳು ಎಂದರು.
ವಿವಿಯನ್ನು ಮಾಡಲು ಕೂಡಿಟ್ಟ ಶ್ರೀಮಂತಿಕೆ ನಮ್ಮಲ್ಲಿಲ್ಲ. ಮಠದ ಹಲವು ಭಕ್ತರಲ್ಲಿರುವಷ್ಟು ಸಂಪತ್ತೂ ನಮಗಿಲ್ಲ. ಆದರೆ ಕೂಡಿಡುವುದು ನಮ್ಮ ಉದ್ದೇಶವಲ್ಲ. ಸಾಮಾಜಿಕ ಕಾರ್ಯಗಳಿಗೆ ನಮ್ಮಲ್ಲಿ ಸಂಗ್ರಹವಾಗುವ ಹಣವನ್ನು ಬಳಸುತ್ತೇವೆ. ಅಶೋಕೆ ನಮ್ಮ ಮಠದ ಮೂಲಸ್ಥಾನ. ಶ್ರೀ ಶಂಕರರು ಮೂರು ಬಾರಿ ಬಂದ ಪುಣ್ಯಭೂಮಿ. ನಾಲ್ಕನೇ ಬಾರಿಗೆ ವಿಶ್ವವಿದ್ಯಾಪೀಠದ ಮೂಲಕ ಶಂಕರರು ಶಾಶ್ವತವಾಗಿ ನೆಲೆಸಲು ಬರುತ್ತಿದ್ದಾರೆ ಎಂದು ಬಣ್ಣಿಸಿದರು.
ಭವ್ಯ ಗುರುಪರಂಪರೆ ನಮಗೆ ನಮ್ಮತನವನ್ನು ಕೊಟ್ಟಿದೆ. ಅದು ಜ್ಞಾನಪರಂಪರೆಯನ್ನು ಕಟ್ಟಿಕೊಟ್ಟಿದೆ. ಇದನ್ನು ಮುಂದುವರಿಸುವ ಪ್ರಯತ್ನವೇ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸ್ಥಾಪನೆ. ಶಂಕರ, ಶ್ರೀರಾಮರೇ ನಮ್ಮ ಆಸ್ತಿ. ರಾಮನ ನೆನಪಲ್ಲಿ ಸೇವಾರ್ಥ ಹಾಗೂ ಶಂಕರರ ಸ್ಮರಣೆಯಲ್ಲಿ ಜ್ಞಾನಾರ್ಥ ಕಾರ್ಯಗಳೇ ಶ್ರೀಮಠದ ಪರಂಪರೆ ಎಂದು ವಿವರಿಸಿದರು.
ಡಾ| ಗಜಾನನ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿ, 10ನೇ ಶತಮಾನದವರೆಗೆ ಭಾರತಕ್ಕೆ ವಿಶ್ವಗುರು ಎಂಬ ಭಾವ ಪಾಶ್ಚಿಮಾತ್ಯರಲ್ಲಿತ್ತು. ಆದರೆ ಪರಿಸ್ಥಿತಿ ಬದಲಾಗಿ ಬೌದ್ಧಿಕವಾಗಿ ದೇಶ ಸೋರುವ ಮನೆಯ ಸ್ಥಿತಿಯಲ್ಲಿದ್ದು, ಇಂತಹ ಮನೆಗೆ ಮೇಲ್ಛಾವಣಿ ಹಾಕುವಂತೆ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ ಆಗಬೇಕು ಎಂದು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ನಗರದ ಅಗ್ರಹಾರದಲ್ಲಿರುವ ಶ್ರೀ ರಾಘವೇಶ್ವರ ಭವನದ ನಾಮಫಲಕ ಅನಾವರಣ ಮಾಡಲಾಯಿತು. ರಾಘವೇಶ್ವರ ಸಭಾ ಭವನ ಸಮಿತಿಯ ವತಿಯಿಂದ ಗುರುಭಿಕ್ಷಾ ಪಾದುಕಾ ಪೂಜಾ ಸೇವೆ ನೆರವೇರಿತು. ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಬೇರ್ಕಡವು, ನಿಯೋಜಿತ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ, ವಿವಿ ಪೀಠ ವ್ಯವಸ್ಥಾಪಕ ಸಮಿತಿ ಗೌರವಾಧ್ಯಕ್ಷ ದೇವಶ್ರವ ಶರ್ಮಾ, ಅಧ್ಯಕ್ಷ ಡಾ| ವೈ.ವಿ. ಕೃಷ್ಣಮೂರ್ತಿ, ಗುರುಮೂರ್ತಿ, ಮುರುಳಿ ಗೀಜಗಾರು ಮತ್ತಿತರರು ಇದ್ದರು. ಹರನಾಥ್‌ರಾವ್ ಸಭಾಪೂಜೆ ನೆರವೇರಿಸಿದರು. ರಮೇಶ್ ಗುಂಡೂಮನೆ ನಿರೂಪಿಸಿದರು.