Advertisement

Sagara ಕಳ್ಳತನ ಪ್ರಕರಣ ಹೆಚ್ಚುತ್ತಿದ್ದರೂ ಕೈಕಟ್ಟಿ ಕುಳಿತ ಪೊಲೀಸರು; ಗ್ರಾಮಸ್ಥರ ಪ್ರತಿಭಟನೆ

04:57 PM Dec 11, 2023 | Team Udayavani |

ಸಾಗರ: ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿಂದಲೂ ನಡೆಯುತ್ತಿರುವ ಕಳ್ಳತನ ಪ್ರಕರಣಗಳಲ್ಲಿ ಸೂಕ್ತ ಕ್ರಮಕ್ಕೆ ಪೊಲೀಸರು ಮುಂದಾಗುತ್ತಿಲ್ಲ ಎಂದು ಆರೋಪಿಸಿ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಸ್ಥರು ಡಿವೈಎಸ್‌ಪಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಎಡಜಿಗಳೇಮನೆ ಗ್ರಾಮದ ಸುಮಾರು ೫೦ಕ್ಕೂ ಹೆಚ್ಚಿನ ಗ್ರಾಮಸ್ಥರ ತಂಡದ ನೇತೃತ್ವ ವಹಿಸಿ ಮಾತನಾಡಿದ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಸಾಗರ ನಗರದಿಂದ ಕೆಲವೇ ಕಿಲೋಮೀಟರ್ ಅಂತರದಲ್ಲಿರುವ ಇಜೆ ಮನೆಯಲ್ಲಿ ಒಂದು ತಿಂಗಳಿಂದ ನಿರಂತರವಾಗಿ ಸರಣಿ ಕಳ್ಳತನ ನಡೆಯುತ್ತಿದೆ. ಅಲ್ಲದೆ ಹಾಡುಹಗಲೇ ಕೆಲವು ಮನೆಯಲ್ಲಿ ಕಳ್ಳತನ ನಡೆಸುತ್ತಿದ್ದಾರೆ. ಆದರೆ ಈವರೆಗೆ ಕಳ್ಳರನ್ನು ಪೋಲೀಸರು ಹಿಡಿಯಲಿಲ್ಲ ಏಕೆ ಎಂದು ಪ್ರಶ್ನಿಸಿದರು.

ಕೆಲವು ದಿನಗಳ ಹಿಂದೆ ಶ್ಯಾಂ ಗುಡಿಗಾರ್ ಅವರ ಮನೆಯ ಹಿಂದುಗಡೆ ಬಾಗಿಲ ಹತ್ತಿರ ಹೊಂಚು ಹಾಕಿ ಕುಳಿತಿದ್ದವರನ್ನು ಸಾಕ್ಷಿ ಸಮೇತವಾಗಿ ಊರಿನ ಗ್ರಾಮಸ್ಥರು ಹಿಡಿದರು. ಅಲ್ಲದೆ ವಾಹನವನ್ನು ಜೀವದ ಹಂಗು ತೊರೆದು ಅಡ್ಡಗಟ್ಟಿ ಹಿಡಿದು ಪೋಲೀಸರಿಗೆ ಒಪ್ಪಿಸಿದರೂ ಸಹ ಕೇವಲ ಒಂದೇ ದಿನದಲ್ಲಿ ಮೂವರನ್ನು ಬಿಟ್ಟು ಕಳಿಸಿದ್ದರ ಹಿನ್ನಲೆ ಏನು? ಯಾವ ಒತ್ತಡದಲ್ಲಿ ಗ್ರಾಮಸ್ಥರು ಹಿಡಿದು ಕೊಟ್ಟವರ ಮೇಲೆ ದುರ್ಬಲ ಕೇಸ್ ಹಾಕಿ ವಾಪಾಸು ಕಳಿಸಿದ್ದು ಈ ಬಗ್ಗೆ ಪೋಲೀಸ್ ಅಧಿಕಾರಿಗಳು ಗ್ರಾಮಸ್ಥರಿಗೆ ಉತ್ತರವನ್ನು ನೀಡಬೇಕು ಎಂದು ಆಗ್ರಹಿಸಿದರು.

ಸಾಗರದ ಸುತ್ತಮುತ್ತ ಅನೇಕ ಕಳ್ಳತನ ಪ್ರಕರಣ ನಡೆಯುತ್ತಿದೆ. ಪುಂಡು ಪೋಕರಿಗಳು ರಸ್ತೆಯ ಮೇಲೆ ರಾತ್ರಿ ಸಮಯದಲ್ಲಿ ಮದ್ಯ ಸೇವಿಸುವುದು ಬಾಟಲಿ ಒಡೆಯುವುದನ್ನು ಮಾಡುತ್ತಾರೆ. ರಾತ್ರಿ ಸಮಯದಲ್ಲಿ ಹೆಣ್ಣು ಮಕ್ಕಳು ಓಡಾಡುವುದಕ್ಕೇ ಆಗದ ಭಯದ ವಾತಾವರಣ ನಿರ್ಮಾಣವಾಗಿದೆ. ಹೀಗೆ ಪೋಲೀಸ್ ವೈಫಲ್ಯದ ಬಗ್ಗೆ ನಾಗರಿಕರು ಆಡಳಿತ ಪಕ್ಷದ ಕಾರ್ಯಕರ್ತರಾದ ನಮ್ಮನ್ನು ಕೇಳುತ್ತಾರೆ. ಈ ಬಗ್ಗೆ ಪೋಲೀಸ್ ಅಧಿಕಾರಿಗಳಾದ ನೀವು ಉತ್ತರವನ್ನು ನೀಡಿ ಎಂದು ಹಕ್ಕೋತ್ತಾಯ ಮಾಡಿದರು.

ಪೋಲೀಸ್ ಅಧೀಕ್ಷಕ ಗೋಪಾಲಕೃಷ್ಣ ನಾಯಕ್ ಸ್ಪಷ್ಟನೆ:
ಗ್ರಾಮಸ್ಥರು ಹಿಡಿದುಕೊಟ್ಟವರ ಮೇಲೆ ಎಫ್‌ಐಆರ್ ಹಾಕಲಾಗಿದೆ. ಈ ಬಗ್ಗೆ ವಿಚಾರಣೆಯು ನಡೆಯುತ್ತಿದೆ. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸ್ ತಂಡವನ್ನು ರಚನೆ ಮಾಡಲಾಗಿದೆ. ಆದಷ್ಟು ಬೇಗ ಕಳ್ಳರನ್ನು ಹಿಡಿಯುತ್ತೇವೆ. ಇನ್ನು ಮುಂದೆ ನಗರದ ಹೊರವಲಯಗಳಲ್ಲಿ ರಾತ್ರಿ ಸಮಯದಲ್ಲಿ ಪೋಲೀಸ್ ಬೀಟ್ ನಡೆಯುತ್ತದೆ. ಯಾರೇ ರಸ್ತೆ ಬದಿಯಲ್ಲಿ ಮದ್ಯ ಸೇವಿಸುವುದು, ಇನ್ನಿತರ ಅಪರಾಧ ಮಾಡುತ್ತಿದ್ದರೆ ಕೂಡಲೇ ಅವರ ಮೇಲೆ ಕೇಸ್ ಹಾಕಲಾಗುವುದು. ಅಲ್ಲದೆ ಸಾರ್ವಜನಿಕರು ನಿಮ್ಮ ಮನೆಯ ಸುತ್ತಮುತ್ತ ಹಾಗೂ ಎಲ್ಲಿಯೇ ಆದರೂ ಅನುಮಾನಾಸ್ಪದವಾಗಿ ತಿರುಗುವ ಹಾಗೂ ಜ್ಯೆಲಿಗೆ ಹೋಗಿ ಈಗ ಮತ್ತೆ ಅಪರಾಧ ಮಾಡುತ್ತಿದ್ದರೆ ಅಂತವರ ಬಗ್ಗೆ ನಮಗೆ ಮಾಹಿತಿ ನೀಡಿ ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿಡಲಾಗುವುದು. ಎಡಜಿಗಳೇಮನೆ ವ್ಯಾಪ್ತಿಯಲ್ಲಿ ಪೋಲೀಸ್ ಕಣ್ಗಾವಲು ಹಾಕಲಾಗುವುದು. ಕಳ್ಳರನ್ನು ಶೀಘ್ರದಲ್ಲಿಯೇ ಬಂಧಿಸುತ್ತೇವೆ ಎಂದು ಭರವಸೆಯನ್ನು ನೀಡಿದರು.

Advertisement

ಈ ಸಂದರ್ಭದಲ್ಲಿ ಎಂ.ಜಿ.ಕೃಷ್ಣಮೂರ್ತಿ, ಗಗನ್ ಆಚಾರ್ಯ, ಗ್ರಾಪಂ ಸದಸ್ಯ ರವಿ ಸೆಟ್ಟಿಸರ, ಎಸ್.ಪಿ.ಲಕ್ಷ್ಮೀನಾರಾಯಣ, ಉದಯ ಕರ್ಕಿಕೊಪ್ಪ, ಮಹೇಶ, ಪ್ರವೀಣ್ ಸೆಟ್ಟಿಸರ, ಮಧುರಾ ಬೆಂಕಟವಳ್ಳಿ, ಪ್ರೇಮ, ಲೀಲಾವತಿ, ಚೈತ್ರ ಮಾವಿನಕುಳಿ ಇನ್ನಿತರ ಗ್ರಾಮಸ್ಥರು ಹಾಜರಿದ್ದರು.

ಇದನ್ನೂ ಓದಿ: MP CM ; ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಡಾ. ಮೋಹನ್ ಯಾದವ್ ಆಯ್ಕೆ

Advertisement

Udayavani is now on Telegram. Click here to join our channel and stay updated with the latest news.

Next