Advertisement

ಮರೆಯಾಗುತ್ತಿದೆ ಪುಂಡಿ ನಾರಿನ ಹಗ್ಗದ ಬಳಕೆ

05:39 PM Oct 27, 2019 | Naveen |

ಸಾಗರ: ಮಲೆನಾಡಿನ ಗ್ರಾಮಾಂತರದ ಕೃಷಿ ಸಂಸ್ಕೃತಿ ಸಸ್ಯ ಮೂಲದ ಪುಂಡಿನಾರಿನ ಮಹತ್ವ ಅರಿತಿರುವುದರಿಂದಲೇ ದೀಪಾವಳಿ ಸಂದರ್ಭದ ಗೋಪೂಜೆ, ಬಲೀಂದ್ರ ಪೂಜೆಗೆ ಪುಂಡಿ ನಾರಿನ, ಕೋಲಿನ ಬಳಕೆ ನೆಲಮೂಲ ಸಂಸ್ಕೃತಿಯ ಧ್ಯೋತಕವಾಗಿದೆ. ಸ್ಥಳೀಯವಾಗಿ ಸಿಗುವ ಉಗ್ಗಣ್ಣೆ ಕಾಯಿ, ಗೋಟಡಿಕೆ, ಅಂಬಡೆ ಎಲೆಗಳನ್ನು ಬಳಸಿ ಗೋವಿಗೆ ನಡೆಸುವ ಅಲಂಕಾರಕ್ಕೂ ಪುಂಡಿ ನಾರು ಬಳಕೆಯಾಗುತ್ತಿದ್ದುದು ಹಿಂದಿನಿಂದಲೂ ನಡೆದು ಬಂದಿದೆ.

Advertisement

ಕಬ್ಬಿನ ಗದ್ದೆಯಲ್ಲಿ ಪುಂಡಿ ಬೀಜ ಹಾಕಿ ಸಸ್ಯವನ್ನು ಬೆಳೆಸಲಾಗುತ್ತದೆ. 6-7 ಅಡಿ ಎತ್ತರ ಬೆಳೆದ ಸಸ್ಯವನ್ನು ಕಠಾವು ಮಾಡಿ ವಾರಗಳ ಕಾಲ ನೀರಿನಲ್ಲಿ ನೆನೆಸಿಡಲಾಗುತ್ತದೆ. ನಂತರ ಕೆಲವು ದಿನಗಳ ಕಾಲ ಬಿಸಿಲಿಗೆ ಒಣಗಿಸಲಾಗುತ್ತದೆ. ಆನಂತರ ಕ್ರಮದಲ್ಲಿ ತಿರುಪಿ ಪುಂಡಿ ನಾರಿನಿಂದ ಕಣ್ಣಿ, ದಂಡೆ ಮಾಡಲಾಗುತ್ತದೆ.

ನಾರನ್ನು ಹೊಸೆಯುವ ಕೌಶಲ ವಿಶೇಷವಾದುದು. ದೀಪಾವಳಿ ಸಂದರ್ಭದಲ್ಲಿ
ಗೋವುಗಳಿಗೆ ಪುಂಡಿ ನಾರಿನಿಂದ ತಯಾರಾದ ಕಣ್ಣಿ ಬಳಸಿ ಪೂಜಿಸಲಾಗುತ್ತದೆ. ಪುಂಡಿನಾರಿನಿಂದ 3 ಬುಲೆx ದಂಡೆ ಸಹ ತಯಾರಿಸಿ ಗೋವುಗಳ ಕೊರಳಿಗೆ ಕಟ್ಟಲಾಗುತ್ತದೆ. ಪುಂಡಿ ನಾರಿನಿಂದ ಹೊಸೆದ ದಾರ ಪ್ಲಾಸ್ಟಿಕ್‌ ಹಗ್ಗಕ್ಕೂ ಹೆಚ್ಚು ಬಲಯುತವಾಗಿರುತ್ತದೆ. ಮುಖ್ಯವಾಗಿ, ಹಾಳಾದುದು ಭೂಮಿಯಲ್ಲಿ ಕೊಳೆತು ಹೋಗಿ ಪರಿಸರದ ಜೊತೆ ಸೇರ್ಪಡೆಯಾಗುವಂತದು.

ಪ್ಲಾಸ್ಟಿಕ್‌ ಭರಾಟೆಯ ನಡುವೆಯೂ ಮಲೆನಾಡಿನ ಹಿರಿಯರು ವಾರ್ಷಿಕವಾಗಿ ಪುಂಡಿನಾರಿನ ಹಗ್ಗ ಬಳಸುವ ಕ್ರಮ ಪಾಲಿಸಿಕೊಂಡು ಬಂದಿದ್ದಾರೆ. ಶ್ರಮಿಕ ವರ್ಗ ತಯಾರಿಸಿದ ಪುಂಡಿನಾರಿನ ಕಣ್ಣಿ, ದಂಡೆ ಬಳಸಿ ಗೋಪೂಜೆ ಮಾಡುವ ಪದ್ಧತಿ ಇನ್ನೂ ಚಾಲ್ತಿಯಲ್ಲಿರುವುದು ವಿಶೇಷ.

ಬಲಿಂದ್ರನ ಪೂಜೆ ಸಂದರ್ಭದಲ್ಲಿ ಪುಂಡಿನಾರಿನ ಕೋಲು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ದೀಪ ಬೆಳಗಲು ಪುಂಡಿನಾರಿನಿಂದ ತಯಾರಾದ ಬೂರೆ ಕೋಲು ಬಳಕೆಯಾಗುತ್ತದೆ. ದೀಪಾವಳಿ ಹಬ್ಬದ ಕೊನೆಯ ದಿನ ಹಬ್ಬ ಕಳಿಸುವ ಆಚರಣೆಯಲ್ಲಿ ಸಹ ಪುಂಡಿಕೋಲನ್ನು ಬಳಸಿ ಪೂಜೆ ಮಾಡಲಾಗುತ್ತದೆ.

Advertisement

ಪುಂಡಿ ಸಸ್ಯದ ಎಲೆಯನ್ನು ಪಲ್ಯ ಮಾಡಿಕೊಂಡು ರೊಟ್ಟಿಯ ಜೊತೆ ಸವಿದಾಗ ಬಹಳ ರುಚಿಕರ ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ. ತಾಲೂಕಿನ ಕೆಳದಿ ಸೇರಿದಂತೆ ಅನೇಕ ಗ್ರಾಮೀಣ ಭಾಗಗಳಲ್ಲಿ ಹಿರಿಯರು ಪುಂಡಿ ನಾರಿನ ಕಣ್ಣಿ, ದಂಡೆ, ಕೋಲು ಸಿದ್ಧಪಡಿಸುತ್ತಿದ್ದಾರೆ. ಪದ್ಧತಿಯ ಪ್ರಕಾರ ದೀಪಾವಳಿ ಸಂದರ್ಭ ಸಸ್ಯ ಮೂಲದ ವಸ್ತುಗಳನ್ನು ಗೌರವಾದರಗಳಿಂದ ಬಳಸುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದ ಮನೆಗಳಲ್ಲಿ ಕೊಟ್ಟಿಗೆಗಳೇ ಮಾಯವಾಗುತ್ತಿರುವ ಈ ಕಾಲದಲ್ಲಿ ಈ ಪ್ರಕೃತಿಯಿಂದ ಬಂದ ಸಂಪ್ರದಾಯಗಳೂ ಕೂಡ ಮಾಯವಾಗುವ ದಿನಗಳು ದೂರವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next