Advertisement

ಕೃಷಿಯಲ್ಲಿ ಆಧುನಿಕತೆ ಅಗತ್ಯ

04:33 PM Mar 07, 2020 | Naveen |

ಸಾಗರ: ಆಧುನಿಕತೆ ಎಂಬುದು ಎಲ್ಲ ಕ್ಷೇತ್ರಗಳಲ್ಲಿ ಶಾಪವಲ್ಲ. ಅದಕ್ಕೆ ಅದರದೇ ಆದ ಅನುಕೂಲಗಳೂ ಇವೆ. ರೈತರೂ ಸಹ ಆಧುನಿಕತೆಗೆ ಹೊಂದಿಕೊಳ್ಳಲು ಕೃಷಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಪುತ್ತೂರಿನ ಗೇರು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ| ಎಂ.ಜಿ. ನಾಯಕ್‌ ಪ್ರತಿಪಾದಿಸಿದರು.

Advertisement

ತಾಲೂಕಿನ ನೀಚಡಿಯಲ್ಲಿ ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ನೀಚಡಿ ಟ್ರಸ್ಟ್‌, ಕೊಚ್ಚಿನ್‌ನ ಗೇರು ಮತ್ತು ಕೋಕೋ ನಿರ್ದೇಶನಾಲಯಗಳ ಸಹಯೋಗದಲ್ಲಿ ಶುಕ್ರವಾರ ಆರಂಭವಾದ 2 ದಿನಗಳ ಗೇರುಕೃಷಿ ಮತ್ತು ಸಂಸ್ಕರಣಾ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ 3 ವರ್ಷಗಳಿಂದ ಗೇರು ತಳಿಗಳಲ್ಲಿ ವ್ಯಾಪಕ ಅಭಿವೃದ್ಧಿ ಮಾಡಲಾಗಿದೆ. ಅದಕ್ಕೆ ಪೂರಕವಾಗಿ ಬೇಸಾಯ ಪದ್ಧತಿಯಲ್ಲಿ ಕೂಡ ಸಾಕಷ್ಟು ಬದಲಾವಣೆಗಳಾಗಿವೆ. ರೈತರ ಶ್ರಮದ ಬೆಳೆಗಳಿಗೆ ಸಂಪೂರ್ಣ
ಲಾಭ ಸಿಗಬೇಕು. ಈ ನಿಟ್ಟಿನಲ್ಲಿ ರೈತರು ಸಂಘಟನಾತ್ಮಕವಾಗಿ ಚಟುವಟಿಕೆಯಲ್ಲಿರಬೇಕು ಎಂದು ಹೇಳಿದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅಖೀಲ ಭಾರತ ಗೇರು ಬೆಳೆಗಾರರ ಸಂಘ ಕಾರ್ಯದರ್ಶಿ ದೇವಿಪ್ರಸಾದ್‌ ಕಲ್ಲಾಜೆ, ರೈತರು ಬೆಳೆದ ಬೆಳೆಗಳನ್ನು ಸಂಸ್ಕರಣೆ ಮತ್ತು ಮಾರುಕಟ್ಟೆ ಮಾಡುವುದನ್ನು ಅರಿತರೆ ಯಶಸ್ವಿಯಾಗಿ ರೈತಾಪಿ ಕ್ಷೇತ್ರದಲ್ಲಿ ಮುಂದುವರಿಯಬಹುದು. ತೋಟಗಾರಿಕೆಗೆ ಸರ್ಕಾರ ಅನೇಕ ಸಹಾಯಧನಗಳನ್ನು ನೀಡುತ್ತಿದ್ದು ಅದನ್ನು ಪಡೆದುಕೊಳ್ಳಲು ರೈತರಿಗೆ ಸೂಕ್ತ ಮಾಹಿತಿಗಳು ಇಂತಹ ಕಾರ್ಯಾಗಾರಗಳಿಂದ ಸಾಧ್ಯವಾಗುತ್ತದೆ. ವಿವಿಧ ಭಾಗದ ರೈತರ ಹಾಗೂ ವಿಜ್ಞಾನಿಗಳ ನಡುವೆ ಉತ್ತಮ ಬಾಂಧವ್ಯ ಸಾಧ್ಯವಾಗುತ್ತದೆ ಎಂದರು.

ನಮ್ಮ ಜಮೀನಿನಲ್ಲಿ ಬೆಳೆದ ಹಣ್ಣು ಮತ್ತು ಗೋಡಂಬಿಗಳನ್ನು ಸಂಸ್ಕರಣೆ ಮಾಡುವ ವಿಧಾನವನ್ನು ನಾವು ತಿಳಿದುಕೊಂಡಿರಬೇಕು. ಕಾರ್ಖಾನೆಗಳು ಮತ್ತು ರೈತರ ನಡುವೆ ಅಂತರ ಇದೆ. ಅಂತರವನ್ನು ಕಡಿಮೆ ಮಾಡಲು ರೈತರು ಸಂಘಟಿತರಾಗಬೇಕು. ರೈತರು ಬೆಳೆದ ಉತ್ಪನ್ನಗಳಿಗೆ ಬೆಂಬಲ ಬೆಲೆಗಳು ಸಿಗಬೇಕು ಎಂದು ಹೇಳಿದರು.

ಗೇರು ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ| ಮೋಹನ್‌ ತಲಕಾಲಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನ ನೀಚಡಿ, ಉಳ್ಳೂರು, ತ್ಯಾಗರ್ತಿ, ಹೊಸಂತೆ, ನಂದೀತಳೆ ಗ್ರಾಮಗಳಲ್ಲಿ ವ್ಯವಸ್ಥಿತ ಗೇರು ಕೃಷಿಯ ಅತೀಸಾಂದ್ರದ ಪದ್ಧತಿಯ ಗೇರು ಬೇಸಾಯವನ್ನು ನಮ್ಮ ಕೇಂದ್ರದ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿದ್ದು ಎರಡೇ ವರ್ಷದಲ್ಲಿ ಅತಿ ಹೆಚ್ಚು ಇಳುವರಿ ಗೇರು ಕೃಷಿಯಲ್ಲಿ ಕಂಡುಬಂದಿದೆ.

Advertisement

ಇದರಲ್ಲಿ ಗಿಡ ನೆಟ್ಟು 8 ತಿಂಗಳಿಗೆ ಬೆಳೆ ಬಂದಿರುವುದು ಇಲ್ಲಿನ ಕೃಷಿಕರಲ್ಲಿ ಅಚ್ಚರಿ ಮೂಡಿಸಿದೆ ಎಂದು ಹೇಳಿದರು. ತರಬೇತಿಯಲ್ಲಿ ಗೇರು ತಳಿಗಳು ಮತ್ತು ತೋಟದ ನಿರ್ವಹಣೆ ಪೋಷಕಾಂಶಗಳ ನಿರ್ವಹಣೆ, ಗೇರಿನಲ್ಲಿ ಕೀಟ ಹಾಗೂ ರೋಗನಿರ್ವಹಣೆ ಕುರಿತಾಗಿ ಉಪನ್ಯಾಸ ನೀಡಲಾಯಿತು. ನೀಚಡಿ ಟ್ರಸ್ಟ್‌ನ ಅಧ್ಯಕ್ಷ ಶ್ರೀನಾಥ್‌ ನಾಡಿಗ್‌, ಹಿರಿಯ ಗೇರು ಕೃಷಿಕರಾದ ಚಂದ್ರಶೇಖರ್‌ ತುಮರಿ, ಶುಂಠಿ ಮಂಜುನಾಥ್‌,ಸುಬ್ರಹ್ಮಣ್ಯ ನೀಚಡಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next