Advertisement

ಮಳೆಗಾಲದಲ್ಲೂ ಟ್ಯಾಂಕರ್‌ ನೀರು!

12:03 PM Jul 31, 2019 | Naveen |

ಸಾಗರ: ತಾಲೂಕಿನಾದ್ಯಂತ ಮಳೆ ಎಡೆ ಬಿಡದೆ ಸುರಿಯುತ್ತಿದೆ. ಲಿಂಗನಮಕ್ಕಿ ಜಲಾಶಯದ ಸಾಕಷ್ಟು ನೀರಿದೆ. ನಗರದ ಈ ಹಿಂದಿನ ಕುಡಿಯುವ ನೀರಿನ ಮೂಲವಾಗಿದ್ದ ಬಸವನ ಹೊಳೆ ಆಣೆಕಟ್ಟೆಯಲ್ಲೂ ನೀರಿನ ಸಂಗ್ರಹವಿದೆ. ಆದರೂ ನಗರದ ಹಲವು ವಾರ್ಡ್‌ಗಳಲ್ಲಿ ಜನರಿಗೆ ಟ್ಯಾಂಕರ್‌ ಮೂಲಕ ನೀರು ಕೊಡುವ ಪರಿಸ್ಥಿತಿ ಮೂರ್‍ನಾಲ್ಕು ದಿನಗಳಿಂದ ನಿರ್ಮಾಣವಾಗಿದೆ. ಮಂಗಳವಾರ ವಿನೋಬಾ ನಗರದ ವಾರ್ಡ್‌ ಸದಸ್ಯ ತಮ್ಮ ವಾರ್ಡ್‌ನ ನಾಗರಿಕರಿಗಾಗಿ ಟ್ಯಾಂಕರ್‌ ನೀರು ತರಿಸಿ ಸಮಸ್ಯೆಯ ತಾತ್ಕಾಲಿಕ ಪರಿಹಾರಕ್ಕೆ ಮುಂದಾಗಿದ್ದಾರೆ.

Advertisement

ನಗರದ ನೆಹರೂ ಮೈದಾನ ಹಾಗೂ ಸಂತೆ ಮೈದಾನದಲ್ಲಿನ 10 ಲಕ್ಷ ಲೀ. ಸಾಮರ್ಥ್ಯದ ಬೃಹತ್‌ ನೀರು ಸಂಗ್ರಹಗಾರ ಬರಿದಾಗಿ ವಾರಗಳಾಗುತ್ತಿದೆ. ಮಂಗಳವಾರವೂ ಅದನ್ನು ತುಂಬಿಸುವ ಕೆಲಸ ಯಶಸ್ವಿಯಾಗಿಲ್ಲ. ಆದ್ದರಿಂದ ವಿನೋಬಾನಗರ, ಜೊಸೆಫ್‌ ನಗರ, ನೆಹರೂ ಮುಂತಾದ ಪ್ರದೇಶದ ಮನೆಗಳಿಗೆ ನಗರಸಭೆ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಕಾರ್ಗಲ್ ಸಮೀಪದ ಅಂಬುಗಳಲೆ ಬಳಿಯಿಂದ ಶರಾವತಿ ನೀರು ಸರಬರಾಜು ಮಾಡುವ ಬೃಹತ್‌ ಯೋಜನೆ ಕಾರ್ಯರೂಪಕ್ಕೆ ಬಂದರೂ ಸಾಗರದ ನಿವಾಸಿಗಳಿಗೆ ನೀರಿನ ಸಮಸ್ಯೆ ತಪ್ಪಿಲ್ಲ.

ಶರಾವತಿ ಹಿನ್ನೀರಿನಿಂದ ನೀರು ಸರಬರಾಜು ಮಾಡುವ ಯೋಜನೆ ಪ್ರಾರಂಭವಾದಾಗಿನಿಂದಲೂ ಒಂದಿಲ್ಲೊಂದು ತಾಂತ್ರಿಕ ದೋಷ ಬಾಧಿಸುತ್ತಿದೆ. ಪ್ರಾರಂಭದಲ್ಲಿ ಪಂಪ್‌ ಹಾಳಾಗುತ್ತಿತ್ತು. ಈಗ ಅಂಬುಗಳಲೆಯ ಬಳಿ ಟ್ರಾನ್ಸ್‌ಫಾರ್ಮರ್‌ ಸಮಸ್ಯೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಕಾರಣದಿಂದ ಸಾಗರದ 2 ಬೃಹತ್‌ ಟ್ಯಾಂಕ್‌ಗಳಿಗೆ ನೀರು ಸರಬರಾಜು ಇಲ್ಲ. ಅವುಗಳಿಂದ ನೀರು ಒದಗಿಸುವ ನಗರದ ಬಹುತೇಕ ಪ್ರದೇಶಗಳಿಗೆ ನೀರು ಸರಬರಾಜು ಇಲ್ಲದೇ ಆರು ದಿನಗಳಾಗಿವೆ.

ಸಂಬಂಧಿಸಿದ ಮಂಗಳೂರಿನ ತಂತ್ರಜ್ಞರ ಮೂಲಕ ಟ್ರಾನ್ಸ್‌ಫಾರ್ಮರ್‌ ವ್ಯವಸ್ಥೆಯನ್ನು ನಗರಸಭೆ ಅಧಿಕಾರಿಗಳು ಮಾಡಿದ್ದಾರೆ. ಆನಂತರ ಸ್ವಿಚ್ ಬೋರ್ಡ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಈ ಕುರಿತು ತಜ್ಞರು ಸ್ಥಳಕ್ಕೆ ಭೇಟಿ ನೀಡುವುದನ್ನು, ಸಂಬಂಧಿಸಿದ ಬಿಡಿಭಾಗ ಅಳವಡಿಸಿ, ದುರಸ್ತಿ ಮಾಡುವುದನ್ನು ನಗರಾಡಳಿತ ಕಾಯುತ್ತಿದೆ. ಅನಿವಾರ್ಯವಾಗಿ ಸ್ಥಳೀಯ ಬೋರ್‌ವೆಲ್ಗಳಿಂದ ನೀರು ತೆಗೆದು ವಿವಿಧ ವಾರ್ಡ್‌ಗಳಿಗೆ ನಲ್ಲಿ ನೀರು ಕೊಡಲಾಗುತ್ತಿದೆ. ಈ ಸಂದರ್ಭದಲ್ಲಿ ನೀರಿನ ಶುದ್ಧೀಕರಣ ಪ್ರಕ್ರಿಯೆ ನಡೆಯುತ್ತಿದೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಈ ಹಿಂದೆ ಸಾಗರ ಪಟ್ಟಣಕ್ಕೆ ನೀರು ಪೂರೈಸುತ್ತಿದ್ದ ಬಸವನ ಹೊಳೆಯಿಂದ ನೆಹರೂ ನಗರದ ಎರಡು ಬೃಹತ್‌ ಟ್ಯಾಂಕ್‌ಗಳಿಗೆ ಇದ್ದ ಸಂಪರ್ಕ ತಪ್ಪಿಸಲಾಗಿದೆ. ಎಸ್‌.ಎನ್‌. ನಗರದ ಬೃಹತ್‌ ಟ್ಯಾಂಕ್‌ಗೆ ಬಸವನ ಹೊಳೆ ಸಂಪರ್ಕ ಇನ್ನೂ ಕಾದಿಟ್ಟುಕೊಂಡ ಹಿನ್ನೆಲೆಯಲ್ಲಿ ಆ ಭಾಗದ ಜನರಿಗೆ ಸಮಸ್ಯೆ ಬಾಧಿಸುತ್ತಿಲ್ಲ.

Advertisement

ಬೋರ್‌ವೆಲ್ ಸ್ವಿಚ್‌ನಲ್ಲಿ ಸಮಸ್ಯೆ:
ಆಯಾ ಭಾಗದ ನಿವಾಸಿಗಳಿಗೆ ನೀರು ಸರಬರಾಜು ಸಂಬಂಧ ಸ್ಥಳೀಯ ಕೊಳವೆ ಬಾವಿಗಳಿವೆ. ಆದರೆ ವಿನೋಬಾ ನಗರದ ನೂತನ ಬಸ್‌ ನಿಲ್ದಾಣ ಕಾಮಗಾರಿ ನಡೆಯುವ ಜಾಗದಲ್ಲಿನ ಬೋರ್‌ವೆಲ್ ಸ್ವಿಚ್ ಹಾಳಾಗಿ ಬಹಳ ಸಮಯವಾಗಿದೆ. ಬಸ್‌ ನಿಲ್ದಾಣ ಕಾಮಗಾರಿ ಸೇರಿದಂತೆ ಸ್ಥಳೀಯ ಕೆಲ ಕಾರ್ಯಗಳಿಗೆ ಅನುಕೂಲವಾಗಲೆಂದು ಈ ಸ್ವಿಚ್ಬೋರ್ಡ್‌ನ ಬಾಗಿಲು ಸದಾ ತೆಗೆದು ಇಡಲಾಗುತ್ತಿತ್ತು. ಸೂಕ್ತ ಬೀಗದ ರಕ್ಷಣೆ ಇಲ್ಲದ ಕಾರಣ ಕಂಡ ಕಂಡವರು ಸ್ವಿಚ್ಛ ಹಾಕಿ ಬೋರ್ಡ್‌ ಹಾಳಾಗಿದೆ ಎನ್ನಲಾಗುತ್ತದೆ. ಅಂತೂ ಸ್ಥಳೀಯ ವಾರ್ಡ್‌ ಪ್ರತಿನಿಧಿ ರವಿ ಉಡುಪ, ಗಣೇಶ ಪ್ರಸಾದರ ಮೇಲ್ವಿಚಾರಣೆಯಲ್ಲಿ ಸೋಮವಾರ ಸ್ವಿಚ್ ಬೋರ್ಡ್‌ ದುರಸ್ತಿ ಮಾಡಿದ್ದಾರೆ. ವಿನೋಬಾ ನಗದರ ಕೆಲ ಭಾಗಕ್ಕೆ ಸೋಮವಾರ ಮಧ್ಯಾಹ್ನದ ನಂತರ ನೀರು ಸರಬರಾಜು ಸಾಧ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next