Advertisement

ಎಸ್‌ಎಸ್‌ಎಲ್ಸಿ ಫಲಿತಾಂಶ ಕಡಿಮೆ ಬಂದ್ರೆ ಕ್ರಮ: ಹಕ್ರೆ

04:57 PM Jun 14, 2019 | Naveen |

ಸಾಗರ: ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಾಲೂಕು ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೊದಲನೇ ಸ್ಥಾನ ಪಡೆಯಬೇಕು. ಮುಂದಿನ ದಿನಗಳಲ್ಲಿ ಶೇ. 70ಕ್ಕಿಂತ ಕಡಿಮೆ ಫಲಿತಾಂಶ ದಾಖಲಾಗುವ ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಸಂಬಳ ಕಡಿತ ಮತ್ತು ಇಂಕ್ರಿಮೆಂಟ್ ಕಡಿತ ಮಾಡುವಂತೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ತಾಪಂನಿಂದ ಪತ್ರ ಬರೆಯಲಾಗುತ್ತದೆ. ಉತ್ತಮ ಫಲಿತಾಂಶಕ್ಕಾಗಿ ನಾವು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ತಾಪಂ ಅಧ್ಯಕ್ಷ ಬಿ.ಎಚ್. ಮಲ್ಲಿಕಾರ್ಜುನ ಹಕ್ರೆ ಎಚ್ಚರಿಸಿದರು.

Advertisement

ನಗರದ ತಾಪಂ ಸಾಮರ್ಥ್ಯ ಸೌಧದಲ್ಲಿ ಗುರುವಾರ ಅಧಿಕಾರಿಗಳ ಮುಂದುವರಿದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಅಗತ್ಯ ಸಭೆಗಳಲ್ಲಿ ಮುಖ್ಯ ಶಿಕ್ಷಕರಿಗೆ ಎಚ್ಚರಿಕೆ ನೀಡುತ್ತಿದ್ದರೂ ಸೂಕ್ತ ನಿಗಾ ವಹಿಸುತ್ತಿಲ್ಲ. ಈ ವರ್ಷ ಶೈಕ್ಷಣಿಕ ವರ್ಷಾರಂಭದಿಂದಲೇ ಶಾಲಾ ಮುಖ್ಯಸ್ಥರು ಸೂಕ್ತ ಗಮನ ಹರಿಸಬೇಕು. ಖಾಸಗಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುತ್ತದೆ. ಆದರೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಿಮಗೆ ಅಗತ್ಯ ಸೌಲಭ್ಯ ಸರ್ಕಾರ ನೀಡಿದ್ದಾಗ್ಯೂ ಫಲಿತಾಂಶ ಕಡಿಮೆ ಬರಲು ನಿಮ್ಮ ಸೋಮಾರಿತನದ ನಡವಳಿಕೆಯೇ ಕಾರಣವಾಗಿದೆ. ಉತ್ತಮ ಫಲಿತಾಂಶ ತರಲು ತಾಲೂಕಿನ 37 ಸರ್ಕಾರಿ ಪ್ರೌಢಶಾಲೆಗೆ ತಾಲೂಕು ಮಟ್ಟದ ಅಧಿಕಾರಿಯೊಬ್ಬರನ್ನು ನೋಡೆಲ್ ಅಧಿಕಾರಿಯಾಗಿ ನೇಮಕ ಮಾಡಲಾಗುತ್ತದೆ. ಪ್ರತಿ ತಿಂಗಳು ನೋಡೆಲ್ ಅಧಿಕಾರಿಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗುಣಮಟ್ಟದ ಫಲಿತಾಂಶ ತರುವ ನಿಟ್ಟಿನಲ್ಲಿ ಸಭೆ ನಡೆಸಲಾಗುತ್ತದೆ. ಎರಡು ತಿಂಗಳಿಗೊಮ್ಮೆ ತಾಪಂ ಕಾರ್ಯ ನಿರ್ವಾಹಣಾಧಿಕಾರಿಗಳು ನೋಡೆಲ್ ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡುತ್ತಾರೆ ಎಂದರು.

ಕೆಲವು ಖಾಸಗಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತರಿಗೆ ಪ್ರವೇಶಾತಿ ನೀಡುತ್ತಿಲ್ಲ ಎನ್ನುವ ದೂರು ಸಾರ್ವಜನಿಕ ವಲಯದಲ್ಲಿದೆ. ಸರ್ಕಾರ ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ತಂದಿದ್ದರೂ ಇಂತಹ ಲೋಪ ನಮ್ಮ ತಾಲೂಕಿನಲ್ಲಿ ನಡೆಯುತ್ತಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಗತ್ಯ ಮಾಹಿತಿ ಸಂಗ್ರಹಿಸಿ ವರದಿ ನೀಡಬೇಕು. ಅಂತಹ ಶಾಲೆಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸಂಬಂಧಪಟ್ಟ ಇಲಾಖೆಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ, ತಾಪಂ ಕಾರ್ಯನಿರ್ವಹಣಾಧಿಕಾರಿ ಮಂಜುನಾಥಸ್ವಾಮಿ, ನೋಡೆಲ್ ಅಧಿಕಾರಿ ಪ್ರಶಾಂತ್‌, ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಕೆ.ಆರ್‌. ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next