Advertisement

ಬೇಕಾಬಿಟ್ಟಿ ಹಕ್ಕುಪತ್ರ ವಿತರಣೆ-ಆರೋಪ

12:13 PM Jul 13, 2019 | Team Udayavani |

ಸಾಗರ: ಕಂದಾಯ ಇಲಾಖೆಯಿಂದ ನೀಡಲಾಗುತ್ತಿರುವ 94ಸಿ ಹಕ್ಕುಪತ್ರಗಳ ಕುರಿತ ಫಲಾನುಭವಿಗಳ ಪಟ್ಟಿಯನ್ನು ಗ್ರಾಪಂ ಗಮನಕ್ಕೆ ತರಲಾಗುತ್ತಿಲ್ಲ. ಇಲಾಖೆಯಲ್ಲಿರುವ ಕೆಲವು ಅಧಿಕಾರಿಗಳು ಹಾಗೂ ನೌಕರರು ಭೂ ಮಾಫಿಯಾ ಜೊತೆ ಶಾಮೀಲಾಗಿ ಬೇಕಾಬಿಟ್ಟಿಯಾಗಿ ಹಕ್ಕುಪತ್ರವನ್ನು ನೀಡುತ್ತಿದ್ದಾರೆ.ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ್‌ ತಾಪಂ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.

Advertisement

ಶುಕ್ರವಾರ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ವರ್ಷ ತಾಲೂಕಿನ ಕೆಲವು ಸರ್ಕಾರಿ ಶಾಲೆಗಳಿಗೆ ಭೂ ಮಂಜೂರಾತಿ ಮಾಡಲು ಸರ್ಕಾರದಿಂದ ಶಿಪಾರಸು ಆಗಿದ್ದರೂ ಕಂದಾಯ ಇಲಾಖೆಯ ಅಧಿಕಾರಿಗಳು ಈವರೆಗೆ ಮಂಜೂರಾದ ಶಾಲೆಗಳಿಗೆ ಭೂಮಿಯನ್ನು ನೀಡಲಿಲ್ಲ. ಈ ವರ್ಷವಾದರೂ ಭೂಮಿ ನೀಡಲಿ ಎಂದು ಆಗ್ರಹಿಸಿದರು.

ಕೆಲವು ತಿಂಗಳ ಹಿಂದೆ ಶರಾವತಿ ಹಿನ್ನೀರು ಪ್ರದೇಶದಲ್ಲಿ ಸರ್ಕಾರಿ ಅಕೇಶಿಯಾ ನೆಡುತೋಪುಗಳನ್ನು ಕಠಾವು ಮಾಡಿ ಅದರಲ್ಲಿ ಬಂದ ಹಣವನ್ನು ಎಂಪಿಎಂ ನೌಕರರ ಸಂಬಳಕ್ಕಾಗಿ ವಿನಿಯೋಗಿಸಬೇಕು ಎಂದು ಹೇಳಲಾಗಿತ್ತು.

ಆದರೆ ಕಠಾವು ಹೆಸರಿನಲ್ಲಿ ಕೋಟ್ಯಂತರ ರೂ.ಗಳ ಭ್ರಷ್ಟಾಚಾರವನ್ನು ಎಂಪಿಎಂ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಅಕೇಶಿಯಾ ಕಠಾವು ಮಾಡುವ ಪರವಾನಗಿ ನಕಲು ಮಾಡಿ ಬೇರೆ ಪ್ರದೇಶದ ಮರಗಳ ಮಾರಣಹೋಮ ಮಾಡಿದ್ದಾರೆ. ಈ ರೀತಿ ಅನಧಿಕೃತವಾಗಿ ಮರಗಳನ್ನು ಸಾಗಿಸುತ್ತಿದ್ದಾಗ ವಾಹನ ಸಮೇತ ಸಿಕ್ಕಿಹಾಕಿಕೊಂಡಿದ್ದಾರೆ.

ಆದರೆ ಅರಣ್ಯ ಇಲಾಖೆ ಓರ್ವ ಅಧಿಕಾರಿಯನ್ನು ಮಾತ್ರ ಸಸ್ಪೆಂಡ್‌ ಮಾಡಿ ಕೈತೊಳೆದುಕೊಂಡಿದೆ. ಈ ಕೋಟ್ಯಂತರ ರೂ. ಹಗರಣದಲ್ಲಿ ಅನೇಕ ಅಧಿಕಾರಿಗಳು ಶಾಮೀಲಾಗಿರುÊ ಶಂಕೆ ಇದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಿ ಎಲ್ಲರಿಗೆ ಶಿಕ್ಷೆಯಾಗಬೇಕು ಎಂದು ಸದಸ್ಯೆ ಸುವರ್ಣ ಟೀಕಪ್ಪ, ಅಶೋಕ್‌ ಬರದವಳ್ಳಿ. ದೇವೇಂದ್ರಪ್ಪ. ಜ್ಯೋತಿ ಇನ್ನಿತರ ಸದಸ್ಯರು ಆಗ್ರಹಿಸಿದರು.

Advertisement

ಇದಕ್ಕೆ ಅಧ್ಯಕ್ಷ ಹಕ್ರೆ ಪ್ರತಿಕ್ರಿಯಿಸಿ, ಈಗಾಗಲೇ ತಾಪಂ ವತಿಯಿಂದ ಹಗರಣದಲ್ಲಿ ಭಾಗಿಯಾದ ಎಂಪಿಎಂ ಅಧಿಕಾರಿಗಳಿಗೆ ಶಿಕ್ಷೆ ನೀಡಬೇಕು ಮತ್ತು ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ಸಭೆಯಲ್ಲೂ ಇನ್ನೊಮ್ಮೆ ಅಂತಹ ನಿರ್ಣಯ ಸ್ವೀಕರಿಸಲಾಗುವುದು ಎಂದರು.

ಇತ್ತೀಚೆಗೆ ಅರಳಗೋಡು ಬಾರಂಗಿ ಹೋಬಳಿಯ ವ್ಯಾಪ್ತಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸ್ಥಳೀಯ ತಾಪಂ ಸದಸ್ಯರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕದೆ ಸದಸ್ಯರಿಗೆ ಅವಮಾನ ಮಾಡಿದ್ದಾರೆ. ಇದೇ ರೀತಿಯಲ್ಲಿ ತಾಲೂಕಿನಲ್ಲಿ ನಡೆಯುವ ಕೆಲವು ಸರ್ಕಾರಿ ಕಾರ್ಯಕ್ರಮದಲ್ಲಿ ನಮ್ಮನ್ನು ಪರಿಗಣಿಸುತ್ತಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಹೆಸರನ್ನು ಸೂಚಿಸುತ್ತಿಲ್ಲ. ಈ ರೀತಿ ಕಾರ್ಯಕ್ರಮ ಮಾಡುವ ಇಲಾಖೆಗಳ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಬೇಕು ಎಂದು ಬಹುತೇಕ ಸದಸ್ಯರು ಆಗ್ರಹಿಸಿದರು.

ಹಕ್ರೆ ಉತ್ತರಿಸಿ, ಈ ಹಿಂದೆ ಸರ್ಕಾರಿ ಕಾರ್ಯಕ್ರಮದಲ್ಲಿ ಸದಸ್ಯರ ಪರಿಗಣಿಸದೆ ಇರುವ ಇಲಾಖೆಯ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಹೀಗಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ತಾಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ ಸ್ವಾಮಿ ಹಾಗೂ ವಿವಿಧ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next