Advertisement

ಅಭಿಮಾನ-ಆತಂಕ ಕ್ರಿಯಾಶೀಲತೆಗೆ ಪ್ರಚೋದಕವಾಗಲಿ

04:47 PM Nov 23, 2019 | Team Udayavani |

ಸಾಗರ (ಗೋಪಾಲಕೃಷ್ಣ ಅಡಿಗ ವೇದಿಕೆ): ನಮ್ಮದು ಎಂಬುದರಲ್ಲಿ0 ಅಭಿಮಾನ ಹಾಗೂ ಆತಂಕ ಸಹಜವಾದುದು. ಆದರೆ ಇಂದು ಅನುಭವಿಸುವ ಆತಂಕ, ಅಭಿಮಾನಗಳು ನಮ್ಮ ಕ್ರಿಯಾಶೀಲತೆಗೆ ಪ್ರಚೋದನೆ ನೀಡುವಂತಿರಬೇಕು ಎಂದು ರಂಗಕರ್ಮಿ, ಚಿಂತಕ ನೀನಾಸಂನ ಕೆ.ವಿ. ಅಕ್ಷರ ಪ್ರತಿಪಾದಿಸಿದರು.

Advertisement

ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಗರದ ನಗರಸಭೆಯ ಗಾಂಧಿ  ಮೈದಾನದಲ್ಲಿ ಆಯೋಜಿಸಲಾಗಿರುವ ತಾಲೂಕು ಮಟ್ಟದ ಒಂಬತ್ತನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಶುಕ್ರವಾರ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನದಲ್ಲಿ ನಾಡು- ನುಡಿಗಳ ಇಕ್ಕಟ್ಟುಗಳ ಬಗ್ಗೆ ಪ್ರಸ್ತಾಪ ಮಾಡುವುದು ಪರಂಪರೆ. ಅದಕ್ಕೆ ಧಕ್ಕೆ ಬಾರದಂತೆ ಪರಿಷ್ಕರಿಸುವ ಕೆಲಸವನ್ನುಮಾಡಬಹುದಾಗಿದೆ . ಕ್ರಿಯಾಶೀಲವಾಗಿ ನಾವು ಕನ್ನಡದ ಜವಾಬ್ದಾರಿಗಳನ್ನು ಹೊತ್ತುಕೊಳ್ಳದಿದ್ದರೆ ಅಭಿಮಾನದ ಭಾವನೆಗಳಿಗೆ ಬೆಲೆ ಇರುವುದಿಲ್ಲ ಎಂದರು.

ತಮಿಳು ಬಿಟ್ಟರೆ ಕನ್ನಡಕ್ಕೆ ಹೆಚ್ಚು ಇತಿಹಾಸವಿದೆ. ದುರಂತವೆಂದರೆ ಇಂದು ಶಾಲೆಗಳಲ್ಲಿ ಶೇ. 10ರಷ್ಟು ಕೂಡ ಹಳೆಗನ್ನಡವನ್ನು ಕಲಿಸುತ್ತಿಲ್ಲ. ತಾಳಮದ್ದಲೆ, ಗಮಕ, ಯಕ್ಷಗಾನದಂತಹ ಕಲೆಯ ಮೂಲಕ ಹಳೆ ಕನ್ನಡ ಉಳಿಯುತ್ತಿದೆ. ಹಳೆಗನ್ನಡ ಕಲಿಯದೆ ಇಂದು ಕನ್ನಡ ಎಂಎ ಮಾಡಬಹುದಾದ ವ್ಯವಸ್ಥೆ ಇದೆ. ಸ್ವಾರಸ್ಯವೆಂದರೆ ಅಮೆರಿಕದಂತಹ ಪಾಶ್ಚಿಮಾತ್ಯರು ಹಳೆಗನ್ನಡದ ಅಧ್ಯಯನ ನಡೆಸುತ್ತಿದ್ದಾರೆ ಎಂದು ನೆನಪಿಸಿದರು.

ಮಧ್ಯಮ ವರ್ಗ ಶಾಲೆಗಳ ತಾಂತ್ರಿಕ ಸೌಲಭ್ಯಗಳ ಬಗ್ಗೆ ಭ್ರಮೆಗೊಳಗಾಗಿದೆ. ನಮ್ಮ ಮನಸ್ಸು ಮತಾಂತರಗೊಂಡಿದೆ. ಶಾಲೆಗಳಿಗೆ ಕಟ್ಟಡ ಬೇಕಾಗಿಲ್ಲ. ಈಗಲೂ ಶಿಕ್ಷಕ ವರ್ಗ, ಪಠ್ಯ ಮಾದರಿ ಉತ್ತಮವಾಗಿಯೇ ಇದೆ. ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ಶೇ. 75ರ ಜವಾಬ್ದಾರಿ ನಮ್ಮದೇ ಆಗಿದೆ. ಕನ್ನಡದ ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದವರ ಫೋಟೋ ಹಾಕಿದರೆ ಕನ್ನಡಕ್ಕೆ ಯಾವ ಅನುಕೂಲವೂ ಆಗುವುದಿಲ್ಲ. ಇವತ್ತಿಗೂ ಸಾರ್ವಜನಿಕ, ಕಾಲೇಜು ಗ್ರಂಥಾಲಯಗಳಲ್ಲಿ ಜ್ಞಾನಪೀಠ ಪುರಸ್ಕೃತರ ಕೃತಿಗಳಿಲ್ಲ. ಇಂತಹ ವಿಪರ್ಯಾಸಗಳ ನಡುವೆ ನಾವಿದ್ದೇವೆ ಎಂದರು.

ಗ್ರಂಥಾಲಯಗಳ ಸರ್ವನಾಶ ಆಗುತ್ತಿರುವ ದಿನಗಳಿವು. ಓದುಗರಿದ್ದಾರೆ, ಪುಸ್ತಕಗಳ ಮುದ್ರಣವೂ ಇದೆ. ಆದರೆ 45 ವರ್ಷಗಳ ಹಿಂದೆ ಇದ್ದ ಸಕ್ಯುìಲೇಟಿಂಗ್‌ ಲೈಬ್ರರಿಗಳಿಲ್ಲ. ಲೈಬ್ರರಿಗಳು ಬೇಕು ಎಂಬ ಹಕ್ಕೊತ್ತಾಯ ಊರುಗಳಲ್ಲಿ ಆಗಬೇಕಾಗಿದೆ. ಪುಸ್ತಕಗಳ ವಿಚಾರದಲ್ಲಿ ಸರ್ಕಾರದಿಂದ ಅಧ್ವಾನದ ಕೆಲಸ ನಡೆದಿದೆ. ಸರ್ಕಾರ ನಡೆಸಿದ ಪುಸ್ತಕಗಳ ಸಗಟು ಖರೀದಿಯಾಗುತ್ತದೆ. ವಿತರಣೆ ನಡೆಯುತ್ತಿಲ್ಲ. ಕನ್ನಡ ಭವನದಲ್ಲಿ ಗೋಡೆ ಕಟ್ಟಬಹುದಾದಂತೆ ಪುಸ್ತಕಗಳ ಸಂಗ್ರಹವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಬಂಗಾಳಿ ಕೊಲ್ಕತ್ತಾಕ್ಕೆ ಸೀಮಿತವಾದಂತೆ, ಮರಾಠಿ ಪೂನಾಕ್ಕೆ, ತಮಿಳು ಚೆನ್ನೈಗೆ ಸೀಮಿತವಾದಂತೆ ಕನ್ನಡ ಕೇವಲ ಬೆಂಗಳೂರಿಗೆ ಕೇಂದ್ರಿತವಾಗಿಲ್ಲ. ಈ ಬಹುಕೇಂದ್ರಿತ ಕನ್ನಡ ಉಳಿಸಿಕೊಳ್ಳುವುದಕ್ಕಾಗಿ ಕಸಾಪ ಕಾರ್ಯಕ್ರಮಗಳ ಬಗ್ಗೆ ಕೆಲವು ಆಕ್ಷೇಪಗಳಿರಬಹುದು. ಕನ್ನಡ ಗಮಕ, ಪಾರಿಜಾತ, ಮಂಟೆಸ್ವಾಮಿ ಹಾಡುಗಾರಿಕೆಯಂತ ಅನೌಪಚಾರಿಕ ವಲಯದಲ್ಲಿಯೇ ಜೀವಂತವಾಗಿದೆ.

ಇಂತಹ ವಲಯವನ್ನು ಜನಪದ ಕಲಾವಿದರು ಎಂಬ ಅಸ್ಪೃಶ್ಯತೆ ಮೂಲಕ ಗುರ್ತಿಸುತ್ತಿರುವುದರಲ್ಲಿಯೇ ಸಮಸ್ಯೆಯಿದೆ ಎಂದರು. ಕನ್ನಡದ ನೆರೆಹೊರೆಯ ಮರಾಠಿ, ತೆಲುಗು, ತಮಿಳು ಹಾಗೂ ಮಲೆಯಾಳಿಗಳ ಜೊತೆ ಕರುಳು ಬಳ್ಳಿಯ ಸಂಬಂಧ ಇದೆ. ಈ ರೀತಿಯ ಸಂಬಂಧವನ್ನು ಗಟ್ಟಿಗೊಳಿಸುವ ಬದಲು ಇತರ ಭಾಷೆಗಳನ್ನು ದ್ವೇಷಿಸುವ ಕೆಲಸ ನಡೆಯುತ್ತಿದೆ. ಕನ್ನಡದ ಹೋರಾಟ ಎಂದರೆ ಉಳಿದವರನ್ನು ದೂಷಿಸುವುದು ಎಂಬುದು ಫಲ ನೀಡದ ಕ್ರಮ ಎಂದು ಅಕ್ಷರ ವಿಶ್ಲೇಷಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್‌.ವಿ. ಹಿತಕರ ಜೈನ್‌ ಅಧ್ಯಕ್ಷತೆ ವಹಿಸಿದ್ದರು. ಚಂದನ ವಾಹಿನಿ ನಿವೃತ್ತ ಮಹಾ ನಿರ್ದೇಶಕ ಡಾ| ಮಹೇಶ್‌ ಜೋಷಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ತಾಪಂ ಅಧ್ಯಕ್ಷ ಬಿ.ಎಚ್‌. ಮಲ್ಲಿಕಾರ್ಜುನ ಹಕ್ರೆ, ಉಪಾಧ್ಯಕ್ಷ ಅಶೋಕ್‌ ಬರದವಳ್ಳಿ, ಸಾಹಿತಿ ಡಾ| ನಾ.ಡಿಸೋಜಾ, ವಿಲಿಯಂ, ಕಲಸೆ ಚಂದ್ರಪ್ಪ, ಎಚ್‌.ವಿ. ರಾಮಚಂದ್ರ ರಾವ್‌ ಇನ್ನಿತರರು ಇದ್ದರು.

ಸಾಗರ ಟೌನ್‌ ಮಹಿಳಾ ಸಮಾಜದ ಮಹಿಳೆಯರು ನಾಡಗೀತೆ ಹಾಡಿದರು. ಉಪಾಧ್ಯಕ್ಷ ತಿರುಮಲ ಮಾವಿನಕುಳಿ ಸ್ವಾಗತಿಸಿದರು. ಪರಿಷತ್‌ ಜಿಲ್ಲಾಧ್ಯಕ್ಷ ಡಿ.ಬಿ. ಶಂಕರಪ್ಪ ಆಶಯ ಮಾತನಾಡಿದರು. ಹಿತಕರ್‌ ವಂದಿಸಿದರು. ಎಂ. ರಾಘವೇಂದ್ರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next