Advertisement

ಕಾಗೋಡು ಚಳವಳಿಯ ಮಹತ್ವ ಅಪಾರ

03:44 PM Aug 26, 2019 | Team Udayavani |

ಸಾಗರ: ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ 1829 ರಲ್ಲಿ ನಡೆದ ಕಂದಾಯ ಮತ್ತು ಕರ ನಿರಾಕರಣೆ ಆಂದೋಲನ ಕಾಗೋಡು ಚಳವಳಿಗೆ ಪ್ರೇರಣೆಯಾಗಿದೆ ಎಂದು ಚಿಂತಕ, ಪ್ರಗತಿಪರ ಕೃಷಿಕ ದೇವೇಂದ್ರ ಬೆಳೆಯೂರು ಅಭಿಪ್ರಾಯಪಟ್ಟರು.

Advertisement

ನಗರದ ಹೊರವಲಯದ ವರದಹಳ್ಳಿ ರಸ್ತೆಯಲ್ಲಿರುವ ರಾಧಾಕೃಷ್ಣ ಪಬ್ಲಿಕ್‌ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಏರ್ಪಡಿಸಿದ್ದ ಕೆ.ಜಿ. ಒಡೆಯರ್‌ ದತ್ತಿ ಕಾರ್ಯಕ್ರಮದಲ್ಲಿ ರಾಜಕೀಯ- ಸಾಹಿತ್ಯ ಮತ್ತು ರೈತ ಚಳವಳಿ ಕುರಿತು ಉಪನ್ಯಾಸ ನೀಡಿದ ಅವರು, ಸಾಮೂಹಿಕ ಪ್ರಯತ್ನ ಚಳವಳಿ ಎನಿಸಿಕೊಳ್ಳುತ್ತದೆ ಎಂದರು.

ಸ್ವಾತಂತ್ರ್ಯ ಹೋರಾಟದ ಭಾಗವಾಗಿ ನಡೆದ ಕಂದಾಯ ಮತ್ತು ಕರ ನಿರಾಕರಣೆ ಚಳವಳಿಯಲ್ಲಿ ಕಂದಾಯ ಕಟ್ಟದ ರೈತರ ಜಮೀನನ್ನು ಹರಾಜು ಹಾಕಲಾಯಿತು. ಆದರೆ ಹರಾಜು ಹಿಡಿಯಲು ಯಾರೂ ಮುಂದೆ ಬರುವುದಿಲ್ಲ. ಪಕ್ಕದ ಸಿದ್ದಾಪುರ ತಾಲೂಕಿನಲ್ಲಿ ದೊಡ್ಡ ಚಳವಳಿಯಾಗಿ ಇದು ರೂಪುಗೊಂಡಿತ್ತು. ಮಹಿಳೆಯರು, ಬಾಣಂತಿಯರು, 12 ಬಾಲಕರು ಜೈಲಿಗೆ ಹೋದರು. ಈ ಭಾಗದಲ್ಲಿ ನಡೆದ ಚಳವಳಿಯಲ್ಲಿ ಭಾಗವಹಿಸಿದ ಮಹಿಳೆಯರ ಸಾಮರ್ಥ್ಯ ನಿಜಕ್ಕೂ ಪ್ರಶಂಸನೀಯ. ನಮ್ಮ ಸಮೀಪದಲ್ಲೇ ನಡೆದ ದೊಡ್ಡ ಚಳವಳಿ ಇದು. ಇದು ಸ್ವಾತಂತ್ರ್ಯ ಚಳವಳಿ ಮಾತ್ರವಾಗಿರಲಿಲ್ಲ, ರೈತ ಚಳವಳಿಯೂ ಆಗಿತ್ತು. ವಿದ್ಯಾರ್ಥಿಗಳು ಇಂಥ ಚಳವಳಿಯ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಸಾವಿರಾರು ಎಕರೆ ಜಮೀನು ಹೊಂದಿದ್ದ ಕೆ.ಜಿ. ಒಡೆಯರ್‌ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲವನ್ನೂ ತ್ಯಾಗ ಮಾಡಿ ನಾಲ್ಕು ವರ್ಷ ಜೈಲಿಗೆ ಹೋದರು. ಗಾಂಧಿಧೀಜಿಯವರ ಪ್ರಭಾವ ಅವರ ಮೇಲೆ ಉಂಟಾಗಿತ್ತು. ಹಾಗಾಗಿ ರೈತರಿಗಾಗಿ ತಮ್ಮ ಜಮೀನು ಕೊಟ್ಟರು. ಕಾಗೋಡು ಹೋರಾಟ ಸಂದರ್ಭದಲ್ಲಿ ಲೋಹಿಯಾ, ಗೋಪಾಲಗೌಡರು ಬರುತ್ತಾರೆ. ರಕ್ತಕ್ರಾಂತಿಯಾಗದೆ ಕಾಗೋಡು ಚಳವಳಿ ನಡೆದಿದೆ. ಆದರೆ ಈಗಲೂ ಚಿಕ್ಕಮಗಳೂರು ಭಾಗದಲ್ಲಿ ಸಾವಿರಾರು ಎಕರೆ ಭೂಮಿ ಹೊಂದಿದವರಿದ್ದಾರೆ. ಆಗ ಜಾರಿಗೆ ತಂದ ಭೂ ಸುಧಾರಣೆ ಕಾನೂನು ಕಾಫಿ ಪ್ಲಾಂಟೇಷನ್‌ ಹೊರತಾಗಿ ಮಾಡಿರುವುದು ಆಕ್ಷೇಪಾರ್ಹ ಎಂದರು.

ರೈತರ ಒಳಿತಿಗಾಗಿ ನಂಜುಂಡಸ್ವಾಮಿ, ಸುಂದರೇಶ್‌ ರೈತಸಂಘ ಕಟ್ಟಿದರು. ಸರ್ಕಾರದ ನೀತಿ ವಿರುದ್ಧ ರೈತ ಚಳವಳಿ ರೂಪಿಸಿದರು. ಆದರೆ ರೈತರ ಹೋರಾಟ ಇಂದು ಸರ್ಕಾರಕ್ಕೆ ಕೇಳುತ್ತಿಲ್ಲ. ನಾಲ್ಕನೇ ದರ್ಜೆ ನೌಕರ ಪಡೆಯುವ ಸಂಬಳದಷ್ಟು ಆದಾಯವನ್ನು 50 ಎಕರೆ ಗದ್ದೆ ಇಟ್ಟುಕೊಂಡ ರೈತನಿಗೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು. ದತ್ತಿ ನೀಡಿದ ಜಗದೀಶ ಒಡೆಯರ್‌ ಮಾತನಾಡಿ, ಉತ್ತಮ ರಾಜಕಾರಣಿಯಾಗಬೇಕೆಂದರೆ ಒಳ್ಳೆಯ ಓದು ಇರಬೇಕು. ರಾಜಕೀಯಕ್ಕೆ ಸಾಹಿತ್ಯದ ನಂಟಿರಬೇಕು. ಸಾಹಿತ್ಯದ ಸ್ಪರ್ಶದಿಂದ ಅನುಭವ ದಟ್ಟವಾಗುತ್ತದೆ. ಎರಡು ಬಾರಿ ಸಂಸದರಾಗಿದ್ದರೂ ಒಡೆಯರ್‌ ಮನೆ ಕಟ್ಟಲು ಸಾಲ ಮಾಡಿದ್ದರು. ಇಂದಿನ ರಾಜಕಾರಣಿಗಳಿಗೆ ಅವರು ಮಾದರಿಯಾಗಿದ್ದಾರೆ. ಗೇಣಿ ಕಾಯ್ದೆ ಬಂದಾಗ ಅವರು ರೈತರಿಂದ ಜಮೀನು ಕಸಿದುಕೊಳ್ಳಲಿಲ್ಲ. ಬದಲಿಗೆ ಅವರೇ ಸುತ್ತಲಿನ ಏಳು ಹಳ್ಳಿಗಳ ರೈತರಿಗೆ ಜಮೀನು ಹಂಚಿದರು ಎಂದರು.

Advertisement

ಕಸಾಪ ಜಿಲ್ಲಾ ಉಪಾಧ್ಯಕ್ಷ ತಿರುಮಲ ಮಾವಿನಕುಳಿ ಮಾತನಾಡಿದರು. ಪರಿಷತ್ತಿನ ಅಧ್ಯಕ್ಷ ಎಸ್‌.ವಿ. ಹಿತಕರ ಜೈನ್‌ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ವಿ. ಕೃಷ್ಣಮೂರ್ತಿ, ಪ್ರಾಚಾರ್ಯ ಗೋಪಾಲ್ ಜಿ., ಶಿಕ್ಷಕ ರವೀಂದ್ರ ಇದ್ದರು. ಪರಿಷತ್ತಿನ ಕಾರ್ಯದರ್ಶಿ ಮೇಜರ್‌ ಎಂ. ನಾಗರಾಜ್‌ ಸ್ವಾಗತಿಸಿದರು. ಶಿಕ್ಷಕಿ ಹೇಮಾವತಿ ವಂದಿಸಿದರು. ಗಣಪತಿ ಶಿರಳಗಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next