Advertisement

ಗಾರ್ಗಿ ಸೃಷ್ಟೀಂದ್ರ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ

04:26 PM Jul 20, 2019 | Naveen |

ಸಾಗರ: ನಗರದ ಬ್ರಾಸಂ ಸಭಾಭವನದಲ್ಲಿ ಜು. 25ರಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯಲಿರುವ 5ನೇ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ನಗರದ ನಿರ್ಮಲಾ ಬಾಲಿಕಾ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿನಿ ಗಾರ್ಗಿ ಸೃಷ್ಟೀಂದ್ರ ಬಂದಗದ್ದೆ ಆಯ್ಕೆಯಾಗಿದ್ದಾರೆ. ಗಾರ್ಗಿ ತಾಲೂಕಿನ ಪ್ರಮುಖ ಚಿಂತಕ ಶೈಲೇಂದ್ರ ಬಂದಗದ್ದೆ ಹಾಗೂ ಸರಸ್ವತಿ ಅವರ ಪುತ್ರಿ.

Advertisement

ಗಾರ್ಗಿ ಬಹುಮುಖ ಪ್ರತಿಭೆ: ಗಾರ್ಗಿ ಅವರ ತಂದೆ ಶೈಲೇಂದ್ರ ತಮ್ಮ ಕವಿತೆ, ಲೇಖನದ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೆಗ್ಗೋಡಿನ ನೀನಾಸಂ ಜತೆ ಅವರ ನಿಕಟ ಸಂಪರ್ಕವಿದೆ. ಸರಸ್ವತಿ ಹೆಗಡೆ ಕೂಡ ಯಕ್ಷಗಾನ ಕುಟುಂಬದ ಹಿನ್ನೆಲೆಯಿಂದ ಬಂದವರು. ಇಂಥ ವಾತಾವರಣದಲ್ಲಿ ಬೆಳೆದ ಗಾರ್ಗಿ ಅವರಿಗೆ ಸಹಜವಾಗಿ ಓದು ಬರವಣಿಗೆಯಲ್ಲಿ ಆಸಕ್ತಿ ಬೆಳೆದಿದೆ. ಸತತ ಮೂರು ವರ್ಷ ಪ್ರಾಥಮಿಕ ಶಾಲಾ ಮಟ್ಟದ ಪ್ರತಿಭಾ ಕಾರಂಜಿಯ ‘ಕಥೆ ಹೇಳುವ ಸ್ಪರ್ಧೆ’ಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. 8ನೇ ವಯಸ್ಸಿನಲ್ಲಿಯೇ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸಿ, ಪ್ರಸ್ತುತಪಡಿಸಿದ ‘ಅಮ್ಮ’ ಮತ್ತು ‘ಅಕ್ಕ’ ಕವಿತೆಗಳು ಜನಮೆಚ್ಚುಗೆ ಗಳಿಸಿದವು. ಶಿವಮೊಗ್ಗದಲ್ಲಿ ನಡೆದ ‘ಚಿಣ್ಣರ ಸಾಹಿತ್ಯ ಚಿಲುಮೆ’ ಕಾರ್ಯಾಗಾರದಲ್ಲಿ ಭಾಗವಹಿಸಿ, ‘ಕನಸು’ ಆಶುಕವನಕ್ಕೆ ಪ್ರಥಮ ಸ್ಥಾನ ಲಭಿಸಿದೆ.

2013 ಮತ್ತು 2014 ರಲ್ಲಿ ಸತತ ಎರಡು ವರ್ಷ ಆದಿಚುಂಚನಗಿರಿಯಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಕಥಾ ಗೋಷ್ಠಿಯಲ್ಲಿ ಹೇಳಿದ ಸ್ವರಚಿತ ಕಥೆ ‘ದೇವರು’ ಹಾಗೂ ಕವಿಗೋಷ್ಠಿಯಲ್ಲಿ ಹೇಳಿದ ‘ವಿಸ್ಮಯ’ ಕವನ ಹಂಸಲೇಖ ಹಾಗೂ ಬಿ.ಆರ್‌.ಲಕ್ಷ್ಮಣರಾವ್‌ ಅವರ ಪ್ರಶಂಸೆಗೆ ಪಾತ್ರವಾಗಿತ್ತು.

ಈ ವರ್ಷ ಶಿಕ್ಷಣ ಇಲಾಖೆ ಹಾಗೂ ಪ್ರಾಚ್ಯ ವಸ್ತುಗಳ ಸಂಶೋಧನಾ ಇಲಾಖೆ ವತಿಯಿಂದ ನಡೆಸಿದ ಭಾಷಣ ಸ್ಪರ್ಧೆಯಲ್ಲಿ ಹಾಗೂ ಟಿಪ್ಪು ಸಹರಾ ಯುವಜನ ಸಂಘ ಮತ್ತು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರತಿಭಾ ಕಾರಂಜಿಯ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಗಾರ್ಗಿ ಅವರು ಕರಿಬೇವು ಎಂಬ ನಾಟಕ ಬರೆದಿದ್ದಾರೆ. ದೇವರು, ಕೇಕಿನ ಗೃಹದತ್ತ ನನ್ನ ಚಿತ್ತ, ವಿವಿಧತೆಯಲ್ಲಿ ಏಕತೆ ಎಂಬ ತಲೆಬರಹದ ಕಥೆ ಬರೆದಿದ್ದಾರೆ.

Advertisement

ಅಕ್ಕ, ಅಮ್ಮ, ಅಪ್ಪ, ನಮ್ಮ ಶಾಲೆ, ಮಳೆ, ಗುಲಾಬಿ, ಕನಸು, ವಿಸ್ಮಯ, ಪರಿಸರ, ಗಣಪ, ನಮ್ಮ ದೇಶ ಎಂಬ ಕವಿತೆಗಳನ್ನು ಹೆಣೆದಿದ್ದಾರೆ. ಪಠ್ಯೇತರ ಚಟುವಟಿಕೆಯಲ್ಲದೆ ಶಾಲಾ ಪಠ್ಯದಲ್ಲೂ ಗಾರ್ಗಿಯವರು ಹಿಂದೆ ಬಿದ್ದಿಲ್ಲ. ಇತೀಚೆಗೆ ನಡೆದ ಪ್ರೌಢಶಾಲಾ ಮಟ್ಟದ ‘ರಾಬಿಯಾ ಕ್ವಿಜ್‌ ಕಾಂಟೆಸ್ಟ್‌’ನಲ್ಲಿ ಅವರ ಶಾಲಾ ತಂಡ ಪ್ರಥಮ ಸ್ಥಾನ ಗಳಿಸಿದ್ದು ಶಾಲೆಗೆ ಹೆಮ್ಮೆ ತಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next