Advertisement

ಅಸ್ಮಿತೆ ಮರೆತ ಕನ್ನಡಿಗರು

03:23 PM Nov 23, 2019 | Naveen |

ಸಾಗರ: ಕನ್ನಡ ಎಲ್ಲ ರಂಗದಲ್ಲಿ ಶ್ರೇಷ್ಠತೆ ಉಳಿಸಿಕೊಂಡಿದೆಯಾದರೂ ಕನ್ನಡಿಗರು ಮಾತ್ರ ಕನ್ನಡದ ಅಸ್ಮಿತೆಯನ್ನು ಮರೆತಿದ್ದಾರೆ ಎಂದು ಖ್ಯಾತ ವಾಗ್ಮಿ, ಚಿಂತಕ ಡಾ| ಪಾವಗಡ ಪ್ರಕಾಶ ರಾವ್‌ ಬೇಸರ ವ್ಯಕ್ತಪಡಿಸಿದರು.

Advertisement

ನಗರದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಕಸಾಪ ಏರ್ಪಡಿಸಿರುವ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಮ್ಮೇಳನದ ಸನ್ಮಾನ ಸಮಿತಿ ಹೊರತಂದಿರುವ ಅಕ್ಷರೋತ್ಸವದ ಅಭಿನಂದನೀಯರು ಎಂಬ ಸಾಧಕರ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಇಂಗ್ಲೆಂಡ್‌ನ‌ಲ್ಲಿ ಶೇಕ್ಸ್‌ಪಿಯರ್‌ನ ಸಮಾಧಿ ಯನ್ನು ನೋಡುವ ಸ್ಥಳವೆಂದು ಗುರುತಿಸುತ್ತಾರೆ. ಆದರೆ ನಮ್ಮಲ್ಲಿ ಸಾಹಿತ್ಯಾಭಿಮಾನವಿಲ್ಲ. ಬಹುತೇಕ ಕನ್ನಡಿಗರಿಗೆ ಕುಮಾರವ್ಯಾಸನ ಸಮಾಧಿ ಎಲ್ಲಿದೆ ಗೊತ್ತಿಲ್ಲ. ಊರು ಗೊತ್ತಿಲ್ಲ. ರಾಘವಾಂಕನ ಕಾವ್ಯ ಪರಿಚಯವಿಲ್ಲ. ನಮಗೆ ಕನ್ನಡ ಸಾಹಿತ್ಯದ ಗಂಧ ಇಲ್ಲ.
ತಪಸ್ಸು ಮಾಡದಿದ್ದರೆ ಯಾವುದೂ ಸಿದ್ಧಿಸುವುದಿಲ್ಲ. ನಮಗೆ ಕನ್ನಡ ಭಾಷೆಯ ಸ್ವಾಭಿಮಾನವಿಲ್ಲ. ತಮಿಳಿನಲ್ಲಿ ಸಾಮಾನ್ಯ ಜನರೂ ಭಾಷೆಯ ಅಭಿಮಾನವನ್ನು ಉಳಿಸಿಕೊಂಡಿದ್ದಾರೆ. ಕನ್ನಡಿಗರಿಗೆ ಇಂಗ್ಲೀಷ್‌ ಭಾಷೆಯ ಮೇಲೆ ಅತಿಯಾದ ಪ್ರೇಮ ಎಂದು ವಿಷಾದಿಸಿದರು.

ಕರ್ನಾಟಕ ಶಕ್ತವಾದ ರಾಜ್ಯ. ಭಾರತದ ಖಜಾನೆಯಲ್ಲಿ ಶೇ. 90ರಷ್ಟು ಚಿನ್ನವಿರುವುದು ಕರ್ನಾಟಕದ್ದು. ಅಮೇರಿಕದ ನಾಸಾದಲ್ಲಿ ಹೆಮ್ಮೆಯ ಕನ್ನಡಿಗ ತಂತ್ರಜ್ಞರಿದ್ದಾರೆ. ವಿಮಾನ ಕಂಡು ಹಿಡಿಯಲು ರೈಟ್ಸ್‌ ಸಹೋದದರಿಗೆ ನೀಲಿ ನಕ್ಷೆ ಸಿದ್ಧಪಡಿಸಿಕೊಟ್ಟವರು ಕನ್ನಡಿಗರು. ಭೌತಶಾಸ್ತ್ರ, ವಿಜ್ಞಾನ, ಯೋಗ ಮುಂತಾದ ಕ್ಷೇತ್ರಗಳಲ್ಲಿ ಕನ್ನಡಿಗರದೇ ಸಿಂಹಪಾಲಿದೆ. ಒಂದು ಕಾಲದಲ್ಲಿ ಕನ್ನಡಿಗರಿಗೆ ಅಸ್ಮಿತೆ ಇತ್ತು. ಇದು ತಂದೆ, ತಾಯಿಯಿಂದ ಬರಬೇಕು. ಈ ನೆಲದ ದವಸಧಾನ್ಯ ತಿಂದು ಹಣ ಸಂಪಾದನೆಗೆ ವಿದೇಶಕ್ಕೆ ನಮ್ಮ ಮಕ್ಕಳು ಹೋಗುತ್ತಾರೆ. ಮಕ್ಕಳಿಗೆ ಕನ್ನಡದ ಸತ್ವ ತಿಳಿಸಿಕೊಡಬೇಕು. ಇಲ್ಲದೇ ಹೋದರೆ ಇನ್ನು 200 ವರ್ಷಗಳ ನಂತರ ಕನ್ನಡ ಸಾಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್‌.ವಿ. ಹಿತಕರ ಜೈನ್‌ ಮಾತನಾಡಿ, ಕಳೆದ ನಾಲ್ಕು ವರ್ಷದಿಂದ ಸನ್ಮಾನ ಸಮಿತಿಯವರೇ ಎಲ್ಲ ಖರ್ಚುವೆಚ್ಚಗಳನ್ನು ಭರಿಸಿ ಸನ್ಮಾನ ಸಮಾರಂಭಕ್ಕೆ ಸಿದ್ಧತೆ ಮಾಡಿ ನಮ್ಮ ಹೊರೆ ಕಡಿಮೆ ಮಾಡಿದ್ದಾರೆ. ಈ ಬಾರಿ ಸನ್ಮಾನಿತರಿಗೆ 10 ಗ್ರಾಂ. ಬೆಳ್ಳಿ ನಾಣ್ಯವನ್ನು ನೀಡಲಾಗುತ್ತಿದೆ. ತೆರೆಮರೆಯಲ್ಲಿದ್ದು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುತ್ತಿದೆ.

Advertisement

ಇಂಥ ಕಾರ್ಯ ರಾಜ್ಯಕ್ಕೇ ಮಾದರಿಯಾಗಿದೆ ಎಂದರು. ನಿವೃತ್ತ ಪ್ರಾಚಾರ್ಯ ಡಾ| ಜಿ.ಎಸ್‌. ಭಟ್ಟ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯೆ ನಾದಿರಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ನಿವೃತ್ತ ಪ್ರಾಚಾರ್ಯ ಎ.ಆರ್‌. ಲಂಬೋದರ್‌, ಗಣಪತಿ ಬ್ಯಾಂಕ್‌ ನಿರ್ದೇಶಕಿ ಶೋಭಾ ಲಂಬೋದರ್‌, ಕನ್ನಡ ಸಾಹಿತ್‌ ಪರಿಷತ್ತಿನ ಪದಾಧಿಕಾರಿಗಳು, ಸನ್ಮಾನ ಸಮಿತಿ ಸದಸ್ಯರು ಇದ್ದರು. ಪರಿಷತ್ತಿನ ಜಿಲ್ಲಾ ಕಾರ್ಯಾಧ್ಯಕ್ಷ ಮ.ಸ. ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಸ್ವತಿ ನಾಗರಾಜ್‌ ಪ್ರಾರ್ಥಿಸಿದರು. ಜಿ. ಪರಮೇಶ್ವರಪ್ಪ ಸ್ವಾಗತಿಸಿದರು. ಪಾಪಣ್ಣ ನಾಯಕ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next