ಸಾಗರ: ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉನ್ನತಿ ಪಡೆದರೆ ಮಾತ್ರ ಸಮಾಜದ ಮುಖ್ಯವಾಹಿನಿಯಲ್ಲಿ ಅವರು ಸೇರ್ಪಡೆಗೊಳ್ಳುತ್ತಾರೆ ಎಂಬ ಆಶಯಕ್ಕೆ ವಿರುದ್ಧವಾಗಿ ಸರ್ಕಾರದ ನಿಯಮವೊಂದು ಹಿಂದುಳಿದ ವರ್ಗದ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಸೌಲಭ್ಯದಿಂದ ವಂಚಿತರಾಗುವಂತೆ ಮಾಡುತ್ತಿದ್ದರೂ ಈವರೆಗೆ ಅದನ್ನು ಸರಿಪಡಿಸುವ ಕೆಲಸ ಆಗಿಲ್ಲ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ವಸತಿ ಸೌಲಭ್ಯ ಬಯಸುವವರು ಜು. 12ರೊಳಗೆ ಅರ್ಜಿ ಸಲ್ಲಿಸಬೇಕಾದುದು ಸರ್ಕಾರದ ನಿಯಮ. ಆದರೆ ಸ್ನಾತಕೋತ್ತರ ಪದವಿಯ ತರಗತಿಗಳಿಗೆ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗುವುದೇ ಜು. 23ರ ನಂತರ! ಈ ಕಾರಣದಿಂದ ಪ್ರತಿ ವರ್ಷ ಸ್ನಾತಕೋತ್ತರ ಪದವಿ ಅಧ್ಯಯನದ ಹಂಬಲಹೊತ್ತ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯದ ಅವಕಾಶ ಬಳಸಿಕೊಳ್ಳಲಾಗದೆ ಅರ್ಹತೆ ಇದ್ದರೂ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿರುವ ಘಟನೆ ನಡೆಯುತ್ತಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ವಸತಿ ಸೌಲಭ್ಯ ಬಯಸುವವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯ ನಂತರ ಸ್ಥಳೀಯ ಶಾಸಕರ ಅಧ್ಯಕ್ಷತೆಯ ಸಮಿತಿ ಅರ್ಹರನ್ನು ಆಯ್ಕೆ ಮಾಡಿ ಅಂತಿಮ ಪಟ್ಟಿ ಸಿದ್ಧಪಡಿಸಿ, ವಸತಿ ಅವಕಾಶ ಕಲ್ಪಿಸುವುದು ವಾರ್ಷಿಕ ಕ್ರಮ. ಸ್ನಾತಕೋತ್ತರ ಪದವಿಯ ತರಗತಿಗಳಿಗೆ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗುವುದೇ ಜು. 23ರ ನಂತರವಾಗುವುದು ಪ್ರತಿ ವರ್ಷದ ಸಂಪ್ರದಾಯ. ಈ ಬಾರಿಯಂತೂ ಈ ಪ್ರಕ್ರಿಯೆ ಆಗಸ್ಟ್ ಮೊದಲ ವಾರದಲ್ಲಿ ನಡೆಯುವ ಸಾಧ್ಯತೆ ಇದೆ. ರೋಸ್ಟರ್ ಪದ್ಧತಿ ಪ್ರಕಾರ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ. ಆನಂತರವೂ ಎರಡನೇ ವಾರಗಳಲ್ಲಿ ತರಗತಿಗಳು ಪ್ರಾರಂಭವಾಗುತ್ತವೆ. ಒಂದೆಡೆ ವಿದ್ಯಾರ್ಥಿ ನಿಲಯದಲ್ಲಿ ಅವಕಾಶ ಸಿಗದಿರುವುದರಿಂದ ಹೆಚ್ಚುವರಿ ಹಣ ತೆತ್ತು ಖಾಸಗಿ ವಸತಿ ಸೌಕರ್ಯ ಪಡೆದುಕೊಳ್ಳಲು ಸಾಧ್ಯವಾಗದೆ ಉನ್ನತ ಶಿಕ್ಷಣದ ಕನಸನ್ನು ಮೊಟಕುಗೊಳಿಸುತ್ತಾರೆ. ಅಧ್ಯಯನಕ್ಕೆ ಸೀಟು ಸಿಕ್ಕಿದರೂ ಹಾಸ್ಟೆಲ್ ಸಿಗದ ಕಾರಣ ಗ್ರಾಮಾಂತರದ ಪ್ರತಿಭಾನ್ವಿತರು ಪಿಜಿ ಪಡೆದುಕೊಳ್ಳಲಾಗುವುದಿಲ್ಲ. ಡಿಪ್ಲೋಮಾ ವಿದ್ಯಾರ್ಥಿಗಳಿಗೂ ಇದೇ ಸಮಸ್ಯೆ ಕಾಡುತ್ತಿದೆ.
22ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಮಸ್ಯೆ: ಸಾಗರ ತಾಲೂಕಿನಲ್ಲಿ ಇಲಾಖೆಯ ಅಡಿಯಲ್ಲಿ 14 ಪೋಸ್ಟ್ ಮೆಟ್ರಿಕ್ ವಸತಿ ನಿಲಯಗಳಿವೆ. ತಾಲೂಕಿನಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಅಥವಾ ವೃತ್ತಿಪರ ವಿದ್ಯಾರ್ಥಿಗಳ ಪ್ರತ್ಯೇಕ ವಸತಿ ನಿಲಯ ಇಲ್ಲ. ಜಿಲ್ಲೆಯಲ್ಲಿ ಶಂಕರಘಟ್ಟದಲ್ಲಿ ಹಾಗೂ ಶಿವಮೊಗ್ಗದಲ್ಲಿ ಅಂಥ ವಿದ್ಯಾರ್ಥಿ ನಿಲಯಗಳಿವೆ. ತಾಲೂಕಿನಲ್ಲಿ ಗಣಿತ, ರಸಾಯನಶಾಸ್ತ್ರ, ವಾಣಿಜ್ಯ ಶಾಸ್ತ್ರ ಮುಂತಾದ ಎಂ.ಎ., ಎಂ.ಎಸ್‌ಸಿ. ಹಾಗೂ ಎಂ.ಎ. ಪದವಿಗಳ ಸೌಲಭ್ಯವಿದೆ. ಇಂದಿರಾ ಗಾಂಧಿ ಸರ್ಕಾರಿ ಪದವಿ ಕಾಲೇಜು ಮತ್ತು ಕೆ.ಎಚ್. ಶ್ರೀನಿವಾಸ್ ಸ್ನಾತಕೋತ್ತರ ಅಧ್ಯಯನ ಕೇಂದ್ರ ಎಂಬೆರಡು ಕೇಂದ್ರಗಳಲ್ಲಿ ಸ್ನಾತಕೋತ್ತರ ಅಧ್ಯಯನದ ಅವಕಾಶಗಳಿವೆ. ಸ್ನಾತಕೋತ್ತರ ಅಭ್ಯಾಸ ಮಾಡಲು ಬಯಸುವ ಸುಮಾರು 22ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸತಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇಂಥ ವಂಚಿತ ವಿದ್ಯಾರ್ಥಿಗಳ ಸಂಖ್ಯೆ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಇದೆ ಎನ್ನಲಾಗುತ್ತದೆ. ಇಲಾಖೆಯ ನಿಯಮಾವಳಿ ಅಡ್ಡ ಬಂದ ಕಾರಣ ಸೊರಬ, ಹಾನಗಲ್, ಹೊಸನಗರ, ಶಿವಮೊಗ್ಗ ಮುಂತಾದ ಭಾಗದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಕಳೆದ ಸಾಲಿನಲ್ಲಿ ಸಾಗರದ ತಾಪಂ ಈ ಸಮಸ್ಯೆ ಕುರಿತು ಕೆಡಿಪಿ ಸಭೆಯಲ್ಲಿ ಚರ್ಚಿಸಿ, ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುವ ಗ್ರಾಮಾಂತರದ ವಿದ್ಯಾರ್ಥಿಗಳಿಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಈ ಸಾಲಿನಲ್ಲಿ ವಿದ್ಯಾರ್ಥಿಗಳಿಂದ ಯಾವುದೇ ದೂರು ಬಾರದ ಹಿನ್ನೆಲೆಯಲ್ಲಿ ಅಂಥ ಯಾವ ಒತ್ತಡವನ್ನೂ ತಾಪಂ ಹಾಕುತ್ತಿಲ್ಲ. ಈ ಬಾರಿ ಜು. 23ರಂದು ವೃತ್ತಿಪರ ಕೋರ್ಸ್‌ಗಳ ವಸತಿ ಸೌಕರ್ಯದ ಅರ್ಜಿಗಳು ಆನ್‌ಲೈನ್‌ನಲ್ಲಿ ಲಭ್ಯವಾಗುತ್ತವೆ. ಆದರೆ ಇದು ಶಿವಮೊಗ್ಗ, ಶಂಕರಘಟ್ಟದ ಹಾಸ್ಟೆಲ್ಗಳ ಆಕಾಂಕ್ಷಿಗಳಿಗೆ ಮಾತ್ರ ಅವಕಾಶ ಕಲ್ಪಿಸುತ್ತದೆ. ಆದರೆ ಸಾಗರದ ಸ್ನಾತಕೋತ್ತರ ಕೇಂದ್ರಗಳಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳ ಸಂಕಟಕ್ಕೆ ಪರಿಹಾರವಿಲ್ಲವಾಗಿದೆ.