ಸಾಗರ: ಇಲ್ಲಿನ ಎಲ್‌ಬಿ ಕಾಲೇಜಿನ ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿರುವ ಜಿ.ಬಿ. ಆಕಾಶ್ ಒಂದು ಕೈನ ಒಂದೇ ಬೆರಳನ್ನು ನೆಲಕ್ಕೆ ಊರಿಕೊಂಡು 15 ಸೆಕೆಂಡುಗಳಲ್ಲಿ 4 ಪುಷ್‌ಅಪ್‌ಗಳನ್ನು ಮಾಡುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ. ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಜಿ.ಬಿ.ಆಕಾಶ್ ಅವರ ಈ ಸಾಹಸವನ್ನು 15 ಸೆಕೆಂಡ್‌ಗಳಲ್ಲಿ ಏಕ ಬೆರಳಿನ ಅತಿ ಹೆಚ್ಚು ಪುಷ್‌ಅಪ್ ಎಂಬ ದಾಖಲೆಗೆ ಪರಿಗಣಿಸಿ, ಪ್ರಮಾಣಪತ್ರ ನೀಡಲಿದೆ.
ಮೂಲತಃ ಶಿಕಾರಿಪುರ ತಾಲೂಕಿನ ಕಣವಿಮನೆ ಗ್ರಾಮದ ಬಿ.ಜಿ.ಗಂಗಾಧರ ಮತ್ತು ಜಿ.ಬಿ.ಭಾಗ್ಯ ಅವರ ಕಿರಿಯ ಪುತ್ರ ಆಕಾಶ್ ಇಲ್ಲಿನ ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದಾರೆ. ಬಾಲ್ಯದಿಂದಲೇ ತುಂಟ ಹುಡುಗನಾಗಿರುವ ಆಕಾಶ್ ಕರಾಟೆ ಮತ್ತು ಜೂಡೋ ಕ್ರೀಡಾಪಟುವಾಗಿದ್ದು, ವಿವಿ ಮಟ್ಟದಲ್ಲಿ ಪದಕ ಗಳಿಸಿದ್ದಾರೆ. ಕರಾಟೆಯ ಬ್ಲ್ಯಾಕ್ ಬೆಲ್ಟ್ ಮತ್ತು ಜೂಡೋದಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ್ದಾರೆ.
ಕೃಷಿಕ ಪೋಷಕರ ಮಗನಾಗಿದ್ದರೂ ಆಕಾಶ್ ಸ್ಟಂಟ್‌ಗಳ ಬಗ್ಗೆ ಬಹಳ ಆಸಕ್ತಿ ಹೊಂದಿದ್ದು, ಕೇವಲ ಭುಜಗಳನ್ನು ಮಾತ್ರ ಬಳಸಿ ಎರಡು ಕೈಗಳಿಂದ ಅಡಕೆ ಮರ ಏರುವ ಸ್ಟಂಟ್ ಮಾಡಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪುಷ್‌ಅಪ್ ತೆಗೆಯುವ ದಾಖಲೆ ಬಗ್ಗೆ ಆಸಕ್ತಿ ಮೂಡಿದ್ದರಿಂದ ಎರಡು ಬೆರಳು, ಒಂದು ಬೆರಳು ಬಳಸಿ ಪುಷ್‌ಅಪ್‌ಗಳನ್ನು ವೇಗವಾಗಿ ತೆಗೆಯುವ ಯತ್ನ ಮಾಡಿದ್ದಾರೆ. ಬ್ರೂಸ್ಲಿಯವರು 15 ಸೆಕೆಂಡ್‌ಗಳಲ್ಲಿ 3 ಪುಷ್‌ಅಪ್ ತೆಗೆದಿರುವುದನ್ನು ಗಮನಿಸಿದ್ದರಿಂದ, ಆಕಾಶ್ 4 ಪುಷ್‌ಅಪ್‌ಗಳನ್ನು ತೆಗೆಯುವ ಸಾಹಸಕ್ಕೆ ಯತ್ನಿಸಿದ್ದಾರೆ.
ಇದನ್ನೂ ಓದಿ : ಆತ್ಮಹತ್ಯೆಗೆ ಯತ್ನಿಸುವ ವೇಳೆ ಬುದ್ಧಿವಾದ: ಯುವಕನಿಂದ ರಾಡ್‌ನಿಂದ ದಾಳಿ
ಬಸ್ ಪ್ರಯಾಣದಲ್ಲಿ ಜತೆಯಾದ ಧಾರವಾಡದ ಸರ್ವೋತ್ತಮ ಎಂಬುವವರ ಸಲಹೆಯಿಂದಾಗಿ ಏಕ ಬೆರಳಿನ ಪುಷ್‌ಅಪ್ ಸಾಧನೆಯ ಕುರಿತು ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಮಾಹಿತಿ ನೀಡಿದ್ದಾರೆ. ಸರ್ವೋತ್ತಮ ಅವರೇ ಅಗತ್ಯ ಅರ್ಜಿ ಇನ್ನಿತರ ಮಾಹಿತಿ ನೀಡಿದ್ದಾರೆ. ವಿಡಿಯೋ ಕಳುಹಿಸಿದ ಹಿನ್ನೆಲೆಯಲ್ಲಿ ಜಿ.ಬಿ. ಆಕಾಶ್ ಸಾಧನೆ ವಿಶ್ವ ದಾಖಲೆ ಎಂಬ ಮನ್ನಣೆ ಪಡೆದುಕೊಂಡಿದೆ.