Advertisement

ಆಧುನಿಕ ಶಿಕ್ಷಣದಿಂದ ಸಂಕುಚಿತ ಭಾವ

11:37 AM Jun 12, 2019 | Naveen |

ಸಾಗರ: ಭಾರತೀಯ ಪರಂಪರೆಯಲ್ಲಿ ಶಿಕ್ಷಣಕ್ಕೆ ವಿಶೇಷ ಮಹತ್ವವಿದೆ. ಆದರೆ ಆಧುನಿಕ ಶಿಕ್ಷಣ ಕೇವಲ ವಿಷಯಕ್ಕೆ ಸೀಮಿತಗೊಳಿಸಿ ವ್ಯಕ್ತಿಯನ್ನು ಸಂಕುಚಿತವಾಗಿಸುತ್ತಿದೆ ಎಂದು ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

Advertisement

ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಧರ್ಮಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಹಿಂದೆ ಎಲ್ಲ ರೀತಿಯ ಕಲೆಯನ್ನು ಅರಿತು ಜ್ಞಾನಪೂರ್ಣತೆ ಹೊಂದುವ ಶಿಕ್ಷಣ ಪಡೆಯುವ ಸ್ಥಾನ ನಮ್ಮ ಗುರುಕುಲ ಮಾದರಿ ಶಿಕ್ಷಣ ಪದ್ಧತಿಯಲ್ಲಿತ್ತು. ತಕ್ಷಶಿಲಾ ಮಾದರಿಯ ವಿಶ್ವವಿದ್ಯಾಲಯ ಸಾವಿರಾರು ವರ್ಷಗಳ ಹಿಂದೆ ಶಿಕ್ಷಣದ ಕ್ರಮವನ್ನು ಜಗತ್ತಿಗೆ ಮಾದರಿಯಾಗಿ ನೀಡಿತ್ತು. ಆದರೆ ಇಂದು ಕೇವಲ ಪಠ್ಯ ಬೋಧನೆಗೆ ಸೀಮಿತವಾಗಿ ಅದರಿಂದಾಚೆ ಯಾವ ವಿಷಯವೂ ತಿಳಿಯದ ಶಿಕ್ಷಣವನ್ನು ನೀಡುತ್ತಿದ್ದೇವೆ. ನಿಜವಾಗಿಯೂ ಗಮನಿಸಿದಾಗ ಆಧುನಿಕ ಶಿಕ್ಷಣ ನಿಶ್ಚಿತವಾಗಿ ಯಾವುದೋ ಒಂದು ಉದ್ಯೋಗ ಮಾಡುವುದಕ್ಕೆ ತರಬೇತಿ ನೀಡುವ ಶಿಕ್ಷಣವೇ ಹೊರತು ವಿದ್ಯಾರ್ಥಿಯೊಬ್ಬನಲ್ಲಿ ವ್ಯಕ್ತಿತ್ವ ರೂಪಿಸುವ ಶಿಕ್ಷಣವಾಗಿ ಉಳಿದಿಲ್ಲ ಎಂದರು.

ಪ್ರಸ್ತುತ ಧರ್ಮಕ್ಷೇತ್ರಗಳು ಹಾಗೂ ಮಠ-ಮಂದಿರಗಳು ಆಧುನಿಕ ಶಿಕ್ಷಣ ಪದ್ಧತಿಯ ಆಚೆಗಿರುವ ಜ್ಞಾನ ಶಿಕ್ಷಣ ನೀಡುವ ಪರಿಕ್ರಮದತ್ತ ಹೆಜ್ಜೆ ಇಡಬೇಕಿದೆ. ಈಗಾಗಲೇ ರಾಮಚಂದ್ರಾಪುರ ಮಠದಿಂದ ಗುರುಕುಲ ಮಾದರಿಯ ಶಿಕ್ಷಣ ಪದ್ಧತಿ ನಡೆಯುತ್ತಿದ್ದು ಶೀಘ್ರದಲ್ಲಿ ಗೋಕರ್ಣ ಅಶೋಕೆಯಲ್ಲಿ ತಕ್ಷಶಿಲಾ ಮಾದರಿಯ ಮಹಾಗುರುಕುಲ ಆರಂಭಗೊಳ್ಳುತ್ತಿದೆ. ಇದರ ಮೂಲಕ ವ್ಯಕ್ತಿಗೆ ಬೇಕಾದ ಜ್ಞಾನ ಶಿಕ್ಷಣ ನೀಡುವ ಸಂಕಲ್ಪ ನಮ್ಮದು ಎಂದರು.

ಧರ್ಮಕ್ಷೇತ್ರಗಳಲ್ಲಿ ಭಕ್ತಿ ಹೊತ್ತು ಬರುವ ಭಕ್ತರು ತಮ್ಮ ಜೀವನದಲ್ಲಿ ನೆಮ್ಮದಿ ಬೇಕಾಗಿ ಪ್ರಾರ್ಥಿಸುವುದನ್ನು ನೋಡುತ್ತೇವೆ. ಆ ಪ್ರಾರ್ಥನೆಗಳು ದೇವರ ಸಾಮಿಪ್ಯಕ್ಕೆ ತಲುಪಿಸುವ ಕಾರ್ಯವನ್ನು ಪೂಜೆಯ ಮೂಲಕ ಅರ್ಚಕರು ಮಾಡುತ್ತಾರೆ. ಇಂತಹ ನಂಬಿಕೆಯಿಂದಲೇ ಜನ ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ ಎಂದಾದ ಮೇಲೆ ನಿಜವಾಗಿಯೂ ಭಗವಂತ ಅವರ ಬದುಕಿನಲ್ಲಿ ಒಳಿತನ್ನು ಮಾಡಿದ್ದಾನೆ ಎಂದರ್ಥ. ಅಂತಯೇ ಸಿಗಂದೂರು ಕ್ಷೇತ್ರದಲ್ಲಿ ನೆಲೆ ನಿಂತಿರುವ ದೇವಿ ದೂರದ ಊರುಗಳಿಂದ ಬರುವ ಅಸಂಖ್ಯಾತ ಭಕ್ತರ ಪಾಲಿಗೆ ವರವನ್ನು ಕರುಣಿಸುವ ತಾಯಿಯಾಗಿ ನಿಂತಿದ್ದಾಳೆ. ಮಾತ್ರವಲ್ಲ ಭಕ್ತರ ನಂಬಿಕೆ ದೃಢವಾಗಿದೆ ಎನ್ನುವುದಕ್ಕೆ ಇಲ್ಲಿ ಮತ್ತೆ ಮತ್ತೆ ಜನರು ಬಂದು ಪೂಜೆ ಮಾಡಿಸುವುದೇ ಸಾಕ್ಷಿ. ಹಾಗಾಗಿ ನಮಗೆಲ್ಲರಿಗೂ ಅಗೋಚರವಾದ ಶಕ್ತಿ ನಮ್ಮನ್ನು ಕಾಪಾಡಲಿದೆ ಎಂದರು.

Advertisement

ಇದೇ ವೇಳೆ ಶ್ರೀಗಳು ಕೆಳದಿ ಪತ್ರಿಕಾ ಸಂಸ್ಥೆ ಕೊಡ ಮಾಡುವ ಕೆಳದಿ ಶ್ರೀ ಪುರಸ್ಕಾರವನ್ನು ಸಿಗಂದೂರು ಕ್ಷೇತ್ರದ ಪ್ರಧಾನ ಅರ್ಚಕರಾದ ವೇ|ಮೂ| ಶೇಷಗಿರಿ ಭಟ್ ಮತ್ತು ಧರ್ಮದರ್ಶಿಗಳಾದ ರಾಮಪ್ಪನವರಿಗೆ ಪ್ರದಾನ ಮಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಶ್ರೀಕ್ಷೇತ್ರದಿಂದ ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ಬೆಳಗ್ಗೆ ಶ್ರೀಗಳಿಗೆ ಗೋಡಂಬಿಯಿಂದ ತುಲಾಭಾರ ಸೇವೆ ನಡೆಯಿತು. ಶ್ರೀಗಳವರು ಜಗಜ್ಜನನಿ ಗೋಶಾಲೆಯನ್ನು ಲೋಕಾರ್ಪಣಗೊಳಿಸಿದರು. ಚಂಡಿಹವನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಧರ್ಮದರ್ಶಿ ಸಿಗಂದೂರು ರಾಮಪ್ಪ, ಪ್ರಧಾನ ಅರ್ಚಕರಾದ ವೇದಮೂರ್ತಿ ಶೇಷಗಿರಿ ಭಟ್, ಸಾಮಾಜಿಕ ಕಾರ್ಯಕರ್ತ ಹು.ಭಾ. ಅಶೋಕ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next