Advertisement

ಡಿ.15ರಿಂದ ಸಿಗಂದೂರು ಸೇತುವೆ ಕಾಮಗಾರಿ ಶುರು

04:00 PM Nov 09, 2019 | Team Udayavani |

ಸಾಗರ: ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟ ಅನುದಾನ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಗುತ್ತಿಗೆದಾರ ಸಂಸ್ಥೆ ಸಹ ನೇಮಕ ಮಾಡಲಾಗಿದೆ. ಡಿ. 15ರೊಳಗೆ ಅಂಬಾರಗೊಡ್ಲು- ಕಳಸವಳ್ಳಿ ನಡುವಿನ ಸಿಗಂದೂರು ಸೇತುವೆ ಕಾಮಗಾರಿ ಕಾರ್ಯಾರಂಭವಾಗಲಿದೆ ಎಂದು ಶಾಸಕ ಎಚ್‌.ಹಾಲಪ್ಪ ತಿಳಿಸಿದ್ದಾರೆ.

Advertisement

ತಾಲೂಕಿನ ಕೋಳೂರು ಗ್ರಾಪಂ ವ್ಯಾಪ್ತಿಯ ಅಂಬಾರಗೊಡ್ಲು ಭಾಗದಲ್ಲಿನ ಸೇತುವೆ ನಿರ್ಮಾಣದ ಉದ್ದೇಶಿತ ಸ್ಥಳಕ್ಕೆ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ನಿಗಮದ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದ ಅವರು, ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸೇತುವೆ ನಿರ್ಮಾಣ ಸಂಬಂಧ ಡಿಪಿಆರ್‌ ತಯಾರಿಸಿ, ಮಣ್ಣು ಪರೀಕ್ಷೆ ಸಂಬಂಧ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ಮುಂದಿನ 15 ದಿನಗಳ ಕಾಲ ಸೇತುವೆ ನಿರ್ಮಾಣ ಪ್ರದೇಶ ವ್ಯಾಪ್ತಿಯಲ್ಲಿ ಮಣ್ಣು ಪರೀಕ್ಷೆ ನಡೆಸಿ ವರದಿ ನೀಡಲಿದ್ದಾರೆ.

ಈಗಾಗಲೇ ಕಾಮಗಾರಿ ಪ್ರಾರಂಭ ಮಾಡಲು ಅಗತ್ಯವಾದ ಎಲ್ಲ ಸಾಮಗ್ರಿಗಳನ್ನು ಸ್ಥಳದಲ್ಲಿ ಸಂಗ್ರಹಿಸಲಾಗಿದೆ. ಮಣ್ಣು ಪರೀಕ್ಷೆ
ವರದಿ ನಂತರ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ತುಮರಿ ಸೇತುವೆ ನಿರ್ಮಾಣಕ್ಕೆ ಕೇಂದ್ರದ ಭಾರತ್‌ ಮಾಲಾ ಯೋಜನೆಯಡಿ 423 ಕೋಟಿ ರೂ. ಹಣ ಮಂಜೂರಾಗಿದೆ. ಸ್ಥಳೀಯ ಜನರ ಅಹವಾಲಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸೇತುವೆ ನಿರ್ಮಾಣಕ್ಕೆ ಮುಂದಾಗಿದೆ. ಸೇತುವೆ ನಿರ್ಮಾಣದ ಹಿಂದೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಸಂಸದರಾದ ರಾಘವೇಂದ್ರ ಅವರ ಪಾತ್ರ ಅತ್ಯಂತ ಗಮನಾರ್ಹವಾದದ್ದು ಎಂದು ಹೇಳಿದರು.

ಸೇತುವೆ 2.1 ಕಿಮೀ ಉದ್ದ ಹಾಗೂ 18 ಮೀಟರ್‌ ಅಗಲದಲ್ಲಿ ನಿರ್ಮಾಣಗೊಳ್ಳಲಿದೆ. ಇದರ ಜೊತೆಗೆ ಅಂಬಾರಗೊಡ್ಲು ದಡದಿಂದ 2 ಕಿಮೀ ಮತ್ತು ಕಳಸವಳ್ಳಿ ದಡದಿಂದ 3 ಕಿಮೀ ರಸ್ತೆ ನಿರ್ಮಾಣಗೊಳ್ಳಲಿದೆ. ಇದರ ಜೊತೆಗೆ ಸಾಗರ ನಗರದ ಶಿವಪ್ಪ ನಾಯಕ ವೃತ್ತದಿಂದ ಮರಕುಟಿಗ ಗ್ರಾಮದವರೆಗೆ ಸುಮಾರು 69 ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ಸಿದ್ದವಾಗುತ್ತಿದೆ. ತಕ್ಷಣ ಟೆಂಡರ್‌ ಕರೆದು ಕಾಮಗಾರಿ ಪ್ರಾರಂಭ ಮಾಡುವಂತೆ ಸಂಸದರಿಗೆ ಮನವಿ ಮಾಡಲಾಗಿದೆ ಎಂದರು.

Advertisement

ತಾಲೂಕು ಬಿಜೆಪಿ ಅಧ್ಯಕ್ಷ ಪ್ರಸನ್ನ ಕೆರೆಕೈ, ರಾಷ್ಟ್ರೀಯ ಹೆದ್ದಾರಿ ನಿಗಮದ ಮುಖ್ಯ ಅಭಿಯಂತರ ಗೋವಿಂದರಾಜು, ಸಹಾಯಕ ಕಾರ್ಯಪಾಲಕ ಅಭಿಯಂತರ ಪೀರ್‌ಪಾಷಾ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next