ಸಾಗರ: ಶರಾವತಿ ನದಿ ನೀರಿನ ಜೊತೆ ಜನರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಯಾವುದೇ ಒತ್ತಡಗಳ ಅಗತ್ಯವಿಲ್ಲದೆ ಜನರು ಸ್ವಯಂಪ್ರೇರಿತವಾಗಿ ಬಂದ್ ಬೆಂಬಲಿಸುವ ಜೊತೆಗೆ ಹೋರಾಟಕ್ಕೆ ಸಹಕಾರ ನೀಡುತ್ತಾರೆ. ಶಿವಮೊಗ್ಗ ಜಿಲ್ಲಾ ಬಂದ್‌ಗೆ ಬಿಜೆಪಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಈ ಸಂಬಂಧ ನಡೆಯುವ ಎಲ್ಲ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದು ಶಾಸಕ ಎಚ್. ಹಾಲಪ್ಪ ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಪ್ರಸ್ತಾಪವನ್ನು ಉಪ ಮುಖ್ಯಮಂತ್ರಿಗಳು ಬೆಳಗ್ಗೆ 10-30ಕ್ಕೆ ಘೋಷಣೆ ಮಾಡಿದಾಗ, ಮಧ್ಯಾಹ್ನ 12ಕ್ಕೆ ನಾನು ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ, ಪ್ರಧಾನ ಕಾರ್ಯದರ್ಶಿಗಳಿಗೆ ಸಾಗರದ ಜನರ ಪರವಾಗಿ ವಿರೋಧದ ಪತ್ರ ನೀಡಿದ್ದೇನೆ. ಡಿಪಿಆರ್ ತಯಾರಿಸಲು ಸಭೆಯೊಂದರಲ್ಲಿ ಡಿಸಿಎಂ ಸೂಚಿಸಿದ್ದಾರೆ ಎಂಬ ಅಂಶದ ಹೊರತು ಅದಕ್ಕೆ ಸಂಬಂಧಪಟ್ಟ ಯಾವ ಮಾಹಿತಿಯೂ ಸರ್ಕಾರದಿಂದ ಈವರೆಗೆ ನನಗೆ ಸಿಕ್ಕಿಲ್ಲ ಎಂದರು.
ಕೆಲವರು ಅತಿ ಉತ್ಸಾಹದಿಂದ ತಮ್ಮಿಂದಲೇ ಹೋರಾಟ ಶುರುವಾಗಿದೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಬೆಂಗಳೂರಿಗರಿಗೆ ನೀರು ಪೂರೈಕೆ ಮಾಡಲು ಪರ್ಯಾಯ ಮಾರ್ಗ ಹುಡುಕಬೇಕು. ಇದು ನಮ್ಮ ಜೀವಿತಾವಧಿಯಲ್ಲಿ ಅಲ್ಲ, ಮುಂದಿನ ಪೀಳಿಗೆಯ ಜೀವಿತಾವಧಿಯಲ್ಲಿ ಮಾಡಲು ಸಾಧ್ಯವಾಗದ ಯೋಜನೆ. ಸರ್ಕಾರ ಗೋದಾವರಿ, ಗಂಗಾನದಿಗಳಿಂದ ಬೆಂಗಳೂರಿಗೆ ನೀರು ಒದಗಿಸುವ ಮೂಲವಾಗಿ ಗುರುತಿಸಿಕೊಳ್ಳುವ ಅಗತ್ಯವಿದೆ. ಶರಾವತಿ ನದಿ ನೀರಿಗೆ ಕೈ ಹಾಕುವುದರಿಂದ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಪ್ರದೇಶಕ್ಕೆ ಧಕ್ಕೆ ಉಂಟಾಗುತ್ತದೆ. ಸಾಗರ- ಹೊಸನಗರಗಳು ಈ ಬಾರಿಯೂ ಬರಗಾಲ ಅನುಭವಿಸಿವೆ. ಸಾಗರದ 35 ಹಾಗೂ ಹೊಸನಗರದ 31 ಗ್ರಾಪಂಗಳಿಗೆ ಕುಡಿಯುವ ನೀರು ಒದಗಿಸುವ ಕೆಲಸ ಮೊದಲು ಆಗಬೇಕು ಎಂದು ಹೇಳಿದರು.
ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯಬಾರದು ಎಂಬ ವಿಷಯವನ್ನು ಸದನದಲ್ಲಿ ಚರ್ಚೆ ನಡೆಸಲಾಗುತ್ತದೆ. ಈಗಾಗಲೇ ಎತ್ತಿನಹೊಳೆಯಿಂದ ನೀರು ತರುವ ಸರ್ಕಾರದ ಯೋಜನೆ ವೈಫಲ್ಯ ಕಂಡಿದೆ. ಈಗ 400 ಕಿ.ಮೀ. ದೂರ ನೀರು ಒಯ್ಯುವ ಇಂತಹ ಯೋಜನೆ ಯಾವುದೇ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗುತ್ತದೆ. ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯಲು ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ತೀರ್ಮಾನ ಮಾಡಲಾಗಿತ್ತು ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ಬೆಂಗಳೂರಿಗೆ ಬೇರೆಬೇರೆ ಕಡೆಯಿಂದ ನೀರು ತರುವ ಅನೌಪಚಾರಿಕ ಚರ್ಚೆ ನಡೆದಿತ್ತು. ಆನಂತರ ತ್ಯಾಗರಾಜ ಸಮಿತಿ ವರದಿ ನೀಡಿದೆ. ಇದಿಷ್ಟು ಬಿಟ್ಟರೆ ಯಡಿಯೂರಪ್ಪನವರನ್ನು ಆರೋಪಿಸುವುದು ಸಮ್ಮತವಲ್ಲ ಎಂದರು.
ಸದ್ಯವೇ ದೆಹಲಿಗೆ ತೆರಳಿ ವಿವಿಧ ಸಚಿವರನ್ನು ಭೇಟಿ ಮಾಡಿ ಕ್ಷೇತ್ರದ ವಿವಿಧ ಯೋಜನೆಗಳ ಬಗ್ಗೆ ಮಾತುಕತೆ ನಡೆಸಲಿದ್ದೇನೆ. ತುಮರಿ ಸೇತುವೆ, ರಸ್ತೆ ಅಗಲೀಕರಣದ ಕುರಿತು ನಿತಿನ್ ಗಡ್ಕರಿ ಅವರಲ್ಲಿ ಸೋಮವಾರ ಮಾತನಾಡಲು ಸಮಯ ಪಡೆಯಲಾಗಿದೆ. ಇದೇ ವೇಳೆ ಪ್ರಕಾಶ್ ಜಾವಡೇಕರ್, ಪ್ರಹ್ಲಾದ್ ಸಿಂಗ್ ಪಟೇಲ್ ಮೊದಲಾದವರ ಜೊತೆ ವಿವಿಧ ಬೇಡಿಕೆ ಕುರಿತಾಗಿ ಮಾತನಾಡಲಿದ್ದೇನೆ ಎಂದರು.