Advertisement

ರೈತರನ್ನು ಜೈಲಿಗೆ ಅಟ್ಟುವ ವ್ಯವಸ್ಥಿತ ಪ್ರಯತ್ನ:ಗಂಗಾಧರ್‌

05:33 PM Apr 20, 2019 | Team Udayavani |

ಸಾಗರ: ಕೆಲವು ರೈತ ವಿರೋಧಿ ಕಾಯ್ದೆಗಳನ್ನು ಕಾನೂನು ಆಗಿ ರೂಪಿಸಿ ರೈತರನ್ನು ಜೈಲಿಗೆ ಕಳಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಇಂತಹ ರಾಜನೀತಿಯನ್ನು ರೈತಸಂಘ ಒಪ್ಪುವುದಿಲ್ಲ. 192- ಎ ಕಾಯ್ದೆಯಡಿ ಕೇಸ್‌ ದಾಖಲಿಸಿ ರೈತರನ್ನು ಜೈಲಿಗೆ ಕಳಿಸುವ ಪ್ರಯತ್ನ ಮಾಡಿದರೆ ರೈತ ಸಂಘ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ರೈತ ಮುಖಂಡ ಕೆ.ಟಿ. ಗಂಗಾಧರ್‌ ಎಚ್ಚರಿಕೆ ನೀಡಿದ್ದಾರೆ.

Advertisement

ನಗರದ ಸರ್ಕಾರಿ ನೌಕರರ ಭವನದಲ್ಲಿ ಡಾ| ಎಚ್‌.
ಗಣಪತಿಯಪ್ಪ ಸೇವಾ ಟ್ರಸ್ಟ್‌, ಕರ್ನಾಟಕ ಜಾನಪದ ಪರಿಷತ್‌ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಕಾಗೋಡು ಚಳುವಳಿ ನೆನಪು ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಭೂಮಿ ಇವತ್ತಿನ ಆತಂಕಗಳು’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಮಲೆನಾಡಿನಲ್ಲಿ ಅಲ್ಪಸ್ವಲ್ಪ ಜಮೀನು ಬದುಕಿನ ಉದ್ದೇಶಕ್ಕಾಗಿ ಸಾಗುವಳಿ ಮಾಡಿಕೊಂಡು ಬಂದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಮಾರಕವಾಗಿರುವ 192- ಎ ಕಾಯ್ದೆಯನ್ನು ತಕ್ಷಣ
ತಿದ್ದುಪಡಿ ಮಾಡಬೇಕು. ಮುಖ್ಯಮಂತ್ರಿಗಳು, ಅರಣ್ಯ
ಸಚಿವರು ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣ ತಮ್ಮ ಕೈ ಕೆಳಗಿನ ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಯಾವುದೇ ಕಾರಣಕ್ಕೂ ರೈತರಿಗೆ ನೋಟಿಸ್‌ ನೀಡಬಾರದು. 192- ಎ ಕಾಯ್ದೆಯನ್ನು ವ್ಯವಸಾಯ ಭೂಮಿಗೆ ಅನ್ವಯಿಸುವುದಿಲ್ಲ ಎನ್ನುವ ಸಣ್ಣ ತಿದ್ದುಪಡಿಯನ್ನು ಮಾಡದೆ ಇರುವುದೇ ರೈತರು ಜೈಲಿಗೆ ಹೋಗುವ ಆತಂಕದ ಸ್ಥಿತಿ ಎದುರಿಸಲು ಕಾರಣವಾಗಿದೆ ಎಂದು ಹೇಳಿದರು.

ರೈತ ಚಳುವಳಿ ಎಂದರೆ ನಿರಾಯುಧರು, ನಿಶ್ಯಕ್ತರು,
ಅಸಂಘಟಿತರು, ಆರ್ಥಿಕವಾಗಿ ಸಬಲರಲ್ಲದವರು ತಮ್ಮ ಹಕ್ಕಿಗೆ ಚ್ಯುತಿ ಬಂದಾಗ ಬೇರೆ ದಾರಿ ಇಲ್ಲದೆ ಹೋರಾಟದ ಹಾದಿ ಹಿಡಿಯುವಂತಹದ್ದಾಗಿದೆ. ಚಳುವಳಿಯಲ್ಲಿ ಪಾಲ್ಗೊಂಡ ರೈತರನ್ನು ಹತ್ತಿಕ್ಕಲು ಅವರನ್ನು ಜೈಲಿಗೆ ಕಳಿಸುವುದು. ಅವರ ಮೇಲೆ
ಕೇಸು ಹಾಕುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತವಾಗಿದೆ. ಇತ್ತೀಚಿನ ಸರ್ಕಾರಗಳು ಇದನ್ನು ಮಾಡುತ್ತಿದ್ದು, ಇದರಿಂದ ಕೃಷಿ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತದೆ ಎಂದು ವಿಶ್ಲೇಷಿಸಿದರು.

ಜಾಗತೀಕರಣ ಬಂದ ಮೇಲೆ ನಮ್ಮ ಭೂಮಿ, ಕೃಷಿ ಅದನ್ನು ಅವಲಂಬಿಸಿಕೊಂಡು ಬಂದ ರೈತರ ಸ್ಥಿತಿ ಆತಂಕದಲ್ಲಿದೆ. ನಮ್ಮ ಭೂಮಿಯನ್ನು ಬಹುರಾಷ್ಟ್ರೀಯ ಕಂಪನಿಗಳ ಕೈಗೆ ಕೊಡುವ ಹುನ್ನಾರ ನಡೆಯುತ್ತಿದೆ. ಭಾರತ್‌ ಮಾತಾಕೀ ಜೈ ಎಂದ ತಕ್ಷಣ ರೈತರ ಭೂಮಿ ರಕ್ಷಣೆಯಾಗುವುದಿಲ್ಲ. ಬದಲಾಗಿ ಭಾರತ್‌ ಮಾತಾ ಎಂದರೆ ಭೂಮಿ. ಅದರ ರಕ್ಷಣೆ ಆಗಬೇಕು. ಮೇಕ್‌ ಇನ್‌ ಇಂಡಿಯಾ ಪರಿಕಲ್ಪನೆಯನ್ನು ಆಡಳಿತ ನಡೆಸುವವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಭೂಮಿಯಲ್ಲಿ ರೈತರು ಉತ್ಪಾದನೆ ಮಾಡಿದರೆ ಅದೆ ಮೇಕ್‌ ಇನ್‌ ಇಂಡಿಯಾ ಎಂದು ಅಭಿಪ್ರಾಯಿಸಿದರು.

Advertisement

ಭೂಮಿ, ಒಕ್ಕಲುತನಕ್ಕೆ ಸಂಬಂಧಪಟ್ಟಂತೆ ನಡೆದ ಕಾಗೋಡು ಚಳುವಳಿ ಅಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಬಂದ ತಕ್ಷಣ ಪ್ರಭುತ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸ್ವಾತಂತ್ರ್ಯಾ
ನಂತರ ನಡೆದ ಮೊದಲ ರೈತರ ಬಂಡಾಯ ಕಾಗೋಡು ಚಳುವಳಿಯಾಗಿದ್ದು, ಇದರಿಂದ ಲಕ್ಷಾಂತರ ಗೇಣಿ ರೈತರ ಬದುಕು ಹಸನಾಗಿದ್ದು ಇಂದು ಇತಿಹಾಸ. ಇಂತಹ ಚಳುವಳಿಯನ್ನು ಮೆಲಕು ಹಾಕುವ ಜೊತೆಗೆ ಯುವಪೀಳಿಗೆ ಚಳುವಳಿಯ ಮಹತ್ವ ಅರಿತುಕೊಳ್ಳಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ. ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರಕಾಶ್‌ ಆರ್‌. ಕಮ್ಮಾರ್‌ ಇದ್ದರು. ವಸಂತ ಕುಗ್ವೆ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪರಮೇಶ್ವರ ಕರೂರು ಸ್ವಾಗತಿಸಿದರು. ಟ್ರಸ್ಟ್‌ ಅಧ್ಯಕ್ಷ ಉಮೇಶ್‌ ಹಿರೇನೆಲ್ಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌. ಬಸವರಾಜ್‌ ವಂದಿಸಿದರು. ಕಿರಣ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next