ಸಾಗರ: ನಗರದ ಗಣಪತಿ ಕೆರೆಯಲ್ಲಿಯೇ ಗಣಪತಿ ವಿಸರ್ಜನೆಗೆ ಅಗತ್ಯ ಸೌಲಭ್ಯ ಒದಗಿಸುಂತೆ ಒತ್ತಾಯಿಸಿ ಮಂಗಳವಾರ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಒಕ್ಕೂಟದ ವತಿಯಿಂದ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘ ಪರಿವಾರದ ಪ್ರಮುಖರಾದ ಅ.ಪು. ನಾರಾಯಣಪ್ಪ, ಸಾಗರ ನಗರ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಗಣೇಶೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿವೆ. ಜೊತೆಗೆ ಸಾವಿರಾರು ಮನೆಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದು, ಅದರ ವಿಸರ್ಜನಾ ಕಾರ್ಯ ಇತಿಹಾಸ ಪ್ರಸಿದ್ಧವಾದ ಗಣಪತಿ ಕೆರೆಯಲ್ಲಿ ಲಾಗಾಯ್ತಿನಿಂದ ನೆರವೇರಿಸಿಕೊಂಡು ಬರಲಾಗುತ್ತಿದೆ. ಆದರೆ ಗಣಪತಿ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಗಣಪತಿ ವಿಸರ್ಜನೆ ಮಾಡುವ ಸ್ಥಳವನ್ನು ಮುಚ್ಚುವ ಪ್ರಯತ್ನ ನಡೆಸಿರುವುದು ಖಂಡನೀಯ ಎಂದರು.
ಗಣಪತಿ ಕೆರೆಯ ಪಶ್ಚಿಮ ದಂಡೆಯಲ್ಲಿ ಬಿಎಚ್ ರಸ್ತೆಯಿಂದ ಕೆರೆಕೋಡಿ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಬಾಕ್ಸ್ ಚರಂಡಿ ನಿರ್ಮಾಣ ಮಾಡಲಾಗಿದೆ. ಚರಂಡಿಯಿಂದ ಕೆರೆಯ ಕಡೆಗೆ ಸುಮಾರು 20 ಅಡಿಗಳಷ್ಟು ದೂರ ಮಣ್ಣು ತುಂಬಿ ಗಣಪತಿ ಕೆರೆಗೆ ಗಣೇಶಮೂರ್ತಿಯನ್ನು ತೆಗೆದುಕೊಂಡು ಹೋಗುವ ಮಾರ್ಗವನ್ನು ಮುಚ್ಚಲಾಗಿದೆ. ಗಣಪತಿ ವಿಸರ್ಜನೆಗೆ ಒಯ್ಯುವ ಮಾರ್ಗವನ್ನು ಮುಚ್ಚುವ ಜೊತೆಗೆ ಕೆರೆ ಜಾಗಕ್ಕೆ ಮಣ್ಣು ತುಂಬಿ ಕೆರೆಯನ್ನು ಕಿರಿದುಗೊಳಿಸಲಾಗುತ್ತಿದೆ. ಇದು ಸುಪ್ರೀಂ ಕೋರ್ಟ್ ಮತ್ತು ಹಸಿರು ಪೀಠದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.
ಗಣಪತಿ ಹಬ್ಬ ಸಮೀಪಿಸುತ್ತಿರುವುದರಿಂದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಗಣಪತಿ ದೇವಸ್ಥಾನದವರೆಗೆ ಮೊದಲಿನಂತೆ ಕೆರೆದಂಡೆಯಲ್ಲಿ ಸೋಪಾನ ನಿರ್ಮಿಸಬೇಕು. ಬಾಕ್ಸ್ ಚರಂಡಿಯ ಮೇಲ್ಭಾಗದಲ್ಲಿ ಗಣಪತಿ ಮೂರ್ತಿಯನ್ನು ಕೆರೆಯ ಒಳಗೆ ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ ಕಲ್ಲು ಚಪ್ಪಡಿಗಳನ್ನು ಅಳವಡಿಸಬೇಕು. ಗಣಪತಿ ವಿಸರ್ಜನೆಗೆ ತಾಲೂಕು ಆಡಳಿತದ ವತಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ದೊಡ್ಡ ಗಣಪತಿ ಮೂರ್ತಿಯನ್ನು ವಿಸರ್ಜಿಸಲು ಹೊಸ ಬಾಕ್ಸ್ ಚರಂಡಿಯಿಂದ ಹಳೆ ಬಾಕ್ಸ್ ಚರಂಡಿವರೆಗೆ ಮೇಲ್ಭಾಗದ ಮಣ್ಣು ತೆಗೆದು ದಾರಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ರಾಘವೇಂದ್ರ ಭಟ್ ಮಾತನಾಡಿ, ಹಂತಹಂತವಾಗಿ ಇತಿಹಾಸ ಪ್ರಸಿದ್ಧವಾದ ಗಣಪತಿ ಕೆರೆಯನ್ನು ಮುಚ್ಚುವ ಪ್ರಯತ್ನ ನಡೆಯುತ್ತಿದೆ. ನಮ್ಮ ಶ್ರದ್ಧಾಭಕ್ತಿಯ ಉತ್ಸವವಾಗಿರುವ ಗಣೇಶೋತ್ಸವವನ್ನು ಆಚರಿಸಲು ಸಹ ಅಡ್ಡಿ ಉಂಟು ಮಾಡಲಾಗುತ್ತಿದೆ. ತಾಲೂಕು ಆಡಳಿತ ಗಣಪತಿ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ಹೋದಲ್ಲಿ ಹಿಂದೂ ಸಮುದಾಯದ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಕಾಮತ್, ಪ್ರಮುಖರಾದ ಐ.ವಿ. ಹೆಗಡೆ, ನಾರಾಯಣಮೂರ್ತಿ ಕಾನುಗೋಡು, ಮುರಳಿ ಮಂಚಾಲೆ, ಎನ್. ಕುಮಾರ್, ಸಂತೋಷ್, ಕೋಮಲ್ ರಾಘವೇಂದ್ರ, ಗಣೇಶ್ ಗಟ್ಟಿ, ಸಂತೋಷ್ ಕೆ.ಜಿ., ರಾಮು ಚವ್ಹಾನ್, ಕುಸುಮಾ ಸುಬ್ಬಣ್ಣ, ಕಿರಣ್, ಮಹೇಶ್, ಶಿವಾಜಿ, ಕೆ.ವಿ. ಪ್ರವೀಣಕುಮಾರ್, ಕೆ.ಎಚ್. ಸುದರ್ಶನ್ ಇನ್ನಿತರರು ಇದ್ದರು.