ಸಾಗರ: ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡುವ ಬಗ್ಗೆ ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರಿಗೆ ಸಾಕಷ್ಟು ಎಚ್ಚರಿಕೆ ನೀಡಲಾಗಿದೆ. ಆದರೂ ನನ್ನ ಮನಸ್ಸಿಗೆ ತೃಪ್ತಿ ತರುವಂತೆ ಕಾಮಗಾರಿಗಳು ನಡೆಯುತ್ತಿಲ್ಲ. ಇನ್ನು ಮುಂದೆ ಕಾಮಗಾರಿಗಳನ್ನು ವೈಜ್ಞಾನಿಕವಾಗಿ ನಿರ್ವಹಿಸದೆ ಹೋದಲ್ಲಿ ಸಂಬಂಧಪಟ್ಟ ಇಂಜಿನಿಯರ್‌ಗಳನ್ನು ಇಲ್ಲಿಂದ ಕಡ್ಡಾಯವಾಗಿ ವರ್ಗಾವಣೆ ಮಾಡುವುದು ಅನಿವಾರ್ಯ ಎಂದು ಶಾಸಕ ಎಚ್. ಹಾಲಪ್ಪ ಎಚ್ಚರಿಕೆ ನೀಡಿದರು.
ನಗರದ ಕೆಳದಿ ರಸ್ತೆಯಲ್ಲಿ ಶುಕ್ರವಾರ ಲೋಕೋಪಯೋಗಿ ಇಲಾಖೆಯಿಂದ ನಿರ್ವಹಿಸುತ್ತಿರುವ ಕೆಳದಿ ರಸ್ತೆ ಡಾಂಬರೀಕರಣ ಮತ್ತು ಡ್ರೈನೇಜ್ ಕಾಮಗಾರಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಇಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಕನಿಷ್ಟ ಕಾಮಗಾರಿ ಯಾವ ರೀತಿ ಮಾಡಬೇಕು ಎನ್ನುವ ಮಾಹಿತಿಯನ್ನಾದರೂ ಪಡೆದುಕೊಳ್ಳಿ. ಬೇಕಾಬಿಟ್ಟಿಯಾಗಿ ರಸ್ತೆ ನಿರ್ಮಾಣ ಮಾಡಿದರೆ ಆರು ತಿಂಗಳಿನಲ್ಲಿ ಡಾಂಬರು ಕಿತ್ತು ಹೋಗುತ್ತದೆ. ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಲು ನನ್ನ ಅವಧಿಯಲ್ಲಿ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಕಾಮಗಾರಿ ಕೈಗೆತ್ತಿಕೊಳ್ಳುವ ಮೊದಲು ಗುತ್ತಿಗೆದಾರರಿಗೆ ಲೋಕೋಪಯೋಗಿ ಇಲಾಖೆ ಅಭಿಯಂತರರು ಎಚ್ಚರಿಕೆ ನೀಡಬೇಕು. ಕೆಲವು ವೈಜ್ಞಾನಿಕ ಕ್ರಮಗಳನ್ನು ಅನುಸರಿಸದೆ ಹೋದರೆ ಕಾಮಗಾರಿ ಮಾಡಿಯೂ ಮಾಡದಂತೆ ಆಗುವ ಸಾಧ್ಯತೆ ಇದೆ. ಪದೇ ಪದೇ ಇದನ್ನು ಹೇಳಲು ಸಾಧ್ಯವಿಲ್ಲ. ಮುಂದಿನ ಒಂದು ವಾರದೊಳಗೆ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡದೆ ಹೋದಲ್ಲಿ ನೀವು ಸಾಗರದಿಂದ ಬೇರೆ ಕಡೆ ವರ್ಗಾವಣೆ ಮಾಡಿಕೊಂಡು ಹೋಗಿ. ಇಲ್ಲವಾದರೆ ನಾನೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ವರ್ಗಾವಣೆ ಮಾಡಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದರು.
ಇಂದಿರಾ ಕ್ಯಾಂಟೀನ್ ಶೀಘ್ರ ಆರಂಭ: ಇಂದಿರಾ ಕ್ಯಾಂಟೀನ್ ತೆರೆಯಲು ನನ್ನ ಯಾವ ವಿರೋಧವೂ ಇಲ್ಲ. ಕೆಲವರು ನಾನು ಅಡ್ಡಿಪಡಿಸುತ್ತಿದ್ದೇನೆ ಎನ್ನುವ ಅಪಪ್ರಚಾರ ಮಾಡುತ್ತಿದ್ದಾರೆ. ಬಡಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಪೂರೈಕೆ ಮಾಡುವ ಈ ಯೋಜನೆಗೆ ನಾನು ಅಡ್ಡಿ ಉಂಟು ಮಾಡಲಾರೆ. ಈ ಕ್ಯಾಂಟೀನ್ ಬಗ್ಗೆ ಕೆಲವು ಅಪಸ್ವರಗಳು ರಾಜ್ಯಾದ್ಯಂತ ಇದೆ. ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಶೀಘ್ರ ಪ್ರಾರಂಭ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ನಗರಸಭೆ ಸದಸ್ಯರಾದ ಟಿ.ಡಿ. ಮೇಘರಾಜ್, ಆರ್. ಶ್ರೀನಿವಾಸ್, ಕೆ.ಆರ್. ಗಣೇಶಪ್ರಸಾದ್, ಶಂಕರ್ ಅಳ್ವಿಕೋಡು, ಮೈತ್ರಿ ವಿ. ಪಾಟೀಲ್, ವಿನಾಯಕ ರಾವ್ ಮನೆಘಟ್ಟ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ದಿನೇಶ್ ಇನ್ನಿತರರು ಇದ್ದರು.