Advertisement

Sagara: ಅಸ್ವಸ್ಥ ಸ್ಥಿತಿಯಲ್ಲಿ ಅಪರೂಪದ ಚಿರತೆ ಬೆಕ್ಕು ಪತ್ತೆ

08:47 PM Oct 30, 2023 | |

ಸಾಗರ: ತಾಲೂಕಿನ ಹೆಗ್ಗೋಡು ಸಮೀಪದ ಗಡಿಕಟ್ಟೆಯ ಬಳಿ ರಸ್ತೆ ಪಕ್ಕದಲ್ಲಿ ಸೋಮವಾರ ಅಸ್ವಸ್ಥ ಸ್ಥಿತಿಯಲ್ಲಿದ್ದ ಅಪರೂಪದ ಚಿರತೆ ಬೆಕ್ಕು ಪತ್ತೆಯಾಗಿದೆ. ಲೆಪರ್ಡ್ ಕ್ಯಾಟ್ ಎಂದು ಕರೆಸಿಕೊಳ್ಳುವ ಈ ಚಿರತೆ ಬೆಕ್ಕನ್ನು ಗಮನಿಸಿ ನಾಯಿಗಳು ದಾಳಿ ಮಾಡಲು ಪ್ರಯತ್ನಿಸಿವೆ. ಈ ವೇಳೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತೀರಾ ಗಂಭೀರ ಸ್ಥಿತಿಯಲ್ಲಿದ್ದ ಸುಮಾರು ಆರು ವರ್ಷದ ವಯಸ್ಸಿನದೆಂದು ಅಂದಾಜಿಸಲಾಗಿರುವ ಚಿರತೆ ಬೆಕ್ಕನ್ನು ತತ್ ಕ್ಷಣ ಅರಣ್ಯ ಇಲಾಖೆ ಶಿವಮೊಗ್ಗದ ತಾವರೆಕೊಪ್ಪದಲ್ಲಿ ಚಿಕಿತ್ಸೆ ಕೊಡಿಸುವಲ್ಲಿ ಯಶಸ್ವಿಯಾಗಿದೆ.

Advertisement

ಈ ಕುರಿತಂತೆ ಚಿಕಿತ್ಸೆಯ ಮೇಲ್ವಿಚಾರಣೆ ನಡೆಸಿರುವ ತಾವರೆಕೊಪ್ಪದ ಪಶು ವೈದ್ಯ ಡಾ. ಮುರುಳಿ ಮೋಹನ್ ಪತ್ರಿಕೆಯೊಂದಿಗೆ ಮಾತನಾಡಿ, ಸುಮಾರು ಮಧ್ಯಾಹ್ನ ಮೂರೂವರೆ ಸಮಯದಲ್ಲಿ ನಮ್ಮಲ್ಲಿಗೆ ಕರೆತರಲಾದ ತುಂಬಾ ನಿಶ್ಯಕ್ತ ಸ್ಥಿತಿಯಲ್ಲಿದ್ದ ಚಿರತೆ ಬೆಕ್ಕು ಆಹಾರ ಸ್ವೀಕರಿಸಿಲ್ಲ. ಆದರೆ ಅದಕ್ಕೆ ಡ್ರಿಪ್ ನೀಡಿದ ನಂತರದಲ್ಲಿ ಒಮ್ಮೆ ಚೇತರಿಸಿಕೊಂಡು ಓಡಾಡಿದೆ. ಸ್ವಭಾವ ಸಹಜವಾಗಿ ಕಚ್ಚುವ ಪ್ರಯತ್ನ ನಡೆಸಿತ್ತು. ಆದರೆ ಅದರ ಪರಿಸ್ಥಿತಿ ಗಂಭೀರವಾಗಿಯೇ ಇದೆ. ನಾವು ಅದನ್ನು ಉಳಿಸುವ ಪೂರ್ಣ ಪ್ರಯತ್ನದಲ್ಲಿದ್ದೇವೆ. ಆದರೆ ಮಂಗಳವಾರ ಬೆಳಗಿನವರೆಗೆ ಏನನ್ನೂ ಹೇಳಲಾಗುವುದಿಲ್ಲ ಎಂದರು.

ಮೇಲ್ನೋಟದ ಪರಿಶೀಲನೆಯಂತೆ ಯಾವುದೇ ಅಪಘಾತದಿಂದ ಗಾಯಗೊಂಡಿಲ್ಲ ಅಥವಾ ಯಾರೋ ಹೊಡೆದು ಹಾಕಿದಂತಿಲ್ಲ. ಈ ಕುರಿತಂತೆ ಎಕ್ಸರೇ ತೆಗೆಯಲಾಗಿದೆ. ವಿಷಪ್ರಾಶನದ ಕುರಿತಾಗಿಯೂ ಮೊದಲ ವೀಕ್ಷಣೆಯಲ್ಲಿ ಅನುಮಾನ ವ್ಯಕ್ತವಾಗುತ್ತಿಲ್ಲ. ಈ ಸಂಬಂಧ ರಕ್ತವನ್ನು ಸಂಗ್ರಹಿಸಿ ಪ್ರಯೊಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಆ ವರದಿ ಸ್ಪಷ್ಟ ಚಿತ್ರಣ ಕೊಡಲಿದೆ ಎಂದರು.

ಲೆಪರ್ಡ್ ಕ್ಯಾಟ್‌ನ ಕುರಿತಾಗಿ ಮಾಹಿತಿ ನೀಡಿದ ಅವರು, ಇದು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಮೊದಲ ಪಟ್ಟಿಯಲ್ಲಿಯೇ ಇದೆ. ಮಲೆನಾಡು ಭಾಗದಲ್ಲಿ ಇವುಗಳ ವಸತಿ ಕಾಣಿಸುತ್ತದೆಯಾದರೂ ರಾತ್ರಿ ವೇಳೆಯೇ ಸಂಚರಿಸುವುದರಿಂದ ಅವುಗಳು ಜನರ ಗಮನಕ್ಕೆ ಬರುವುದಿಲ್ಲ. ಇಂತಹ ಅಪರೂಪದ ಪ್ರಾಣಿಯನ್ನು ಉಳಿಸುವ ಪ್ರಯತ್ನ ನಮ್ಮ ತಂಡದ್ದು. ಇದನ್ನು 24 ಘಂಟೆಗಳ ಪರಿವೀಕ್ಷಣೆಯಲ್ಲಿ ಇಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next