Advertisement

ರೋಗಿಗಳ ಆಹಾರದಲ್ಲೂ ಅವ್ಯವಹಾರ; ತನಿಖೆಗೆ ಕಾಂಗ್ರೆಸ್ ಒತ್ತಾಯ

04:52 PM Jun 30, 2022 | Kavyashree |

ಸಾಗರ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿರುವ ಪಥ್ಯಾಹಾರ ಸರಬರಾಜು ಟೆಂಡರ್‌ನಲ್ಲಿ ಆಗಿರುವ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ಗುರುವಾರ ನಗರ ಕಾಂಗ್ರೆಸ್ ವತಿಯಿಂದ ಸಾಗರ ಹೋಟೆಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಈ ಪ್ರಕರಣ ಒಂದರ್ಥದಲ್ಲಿ ಅಧಿಕಾರವನ್ನು ದಿವಾಳಿತನದ ಕಡೆ ಕೊಂಡೊಯ್ಯುವ ಪ್ರಯತ್ನ. ಇದು ತೀವ್ರ ಖಂಡನೀಯ. ಅಡುಗೆ ಮನೆ ಇಲ್ಲದ ಕಡೆ ಹೊರಗಿನಿಂದ ಪಥ್ಯಾಹಾರ ತರಿಸುವ ನಿಯಮ ಇದ್ದಾಗ್ಯೂ, ಸಾಗರ ಆಸ್ಪತ್ರೆಯಲ್ಲಿ ನಿಯಮ ಮೀರಿ ಗುತ್ತಿಗೆದಾರರಿಂದ ಆಹಾರ ತರಿಸಿಕೊಳ್ಳುತ್ತಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಪ್ರತಿಭಟನೆ ಮೂಲಕವೇ ಸರ್ಕಾರವನ್ನು ಎಚ್ಚರಿಸುವ ಸ್ಥಿತಿ ಬಂದಿರುವುದು ಬೇಸರದ ಸಂಗತಿ. ಟೆಂಡರ್ ರದ್ದುಪಡಿಸುವಂತೆ ಸಚಿವರಿಗೆ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶ ಬಾಬು ಮಾತನಾಡಿ, ಪಥ್ಯಾಹಾರ ಸರಬರಾಜು ಮಾಡುವಲ್ಲಿ ಸಾಗರ ಉಪವಿಭಾಗೀಯ ಆಸ್ಪತ್ರೆಯ ವೈದ್ಯಾಧಿಕಾರಿಗಳು ನಡೆಸಿರುವ ಭ್ರಷ್ಟಾಚಾರ ಎದ್ದು ಕಾಣುತ್ತಿದೆ. ವೈದ್ಯಾಧಿಕಾರಿ ಡಾ. ಪರಪ್ಪ ಹಿಂದೆ ಕಡೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಡೂರಿನವರಿಗೆ ಆಹಾರ ಸರಬರಾಜು ಗುತ್ತಿಗೆಯನ್ನು ನೀಡಲಾಗಿದೆ. ಗುತ್ತಿಗೆ ಹಿಡಿದವರು ಸಾಗರದ ಬಿಜೆಪಿ ಮುಖಂಡರೊಬ್ಬರಿಗೆ ಆಹಾರ ಸರಬರಾಜು ಮಾಡು ಒಳಗುತ್ತಿಗೆ ನೀಡಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ 60 ರೂಪಾಯಿಗೆ ಸಿಗುವ ಊಟಕ್ಕೆ 190 ರೂಪಾಯಿ ನಿಗದಿಪಡಿಸಲಾಗಿದೆ. ಸರ್ಕಾರಕ್ಕೆ ತಿಂಗಳಿಗೆ ಬರೋಬ್ಬರಿ ಏಳರಿಂದ ಎಂಟು ಲಕ್ಷ ರೂಪಾಯಿ ನಷ್ಟವಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗುತ್ತಿದ್ದರೂ ಶಾಸಕರು ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ತಕ್ಷಣ ಟೆಂಡರ್ ರದ್ದುಪಡಿಸದೆ ಹೋದಲ್ಲಿ ಆಸ್ಪತ್ರೆಯೆದುರು ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ ಮಾತನಾಡಿದರು. ಪ್ರತಿಭಟನೆಯಲ್ಲಿ ಮಹಾಬಲ ಕೌತಿ, ತಾರಾಮೂರ್ತಿ, ಡಿ.ದಿನೇಶ್, ಮಧುಮಾಲತಿ, ಸುಮಂಗಲಾ ರಾಮಕೃಷ್ಣ, ಕೆ.ಸಿದ್ದಪ್ಪ, ಅನ್ವರ್ ಭಾಷಾ, ಮರಿಯಾ, ಸಂತೋಷ್, ಯಶವಂತ ಪಣಿ, ನಾರಾಯಣ ಅರಮನೆಕೇರಿ, ಸೈಯದ್ ತಾಹೀರ್, ಸಚಿನ್, ರವಿಕುಮಾರ್, ಷಣ್ಮುಖ, ಹಮೀದ್, ರಮೇಶ್ ಚಂದ್ರಗುತ್ತಿ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next