ಸಾಗರ: ಪ್ರಾಥಮಿಕ ಸಹಕಾರಿ ಸಂಸ್ಥೆಗಳು ಎಲ್ಲದಕ್ಕೂ ಡಿಸಿಸಿ ಬ್ಯಾಂಕ್ ಅವಲಂಬಿಸುವ ಬದಲು ಸ್ವಂತ ಕಾಲಿನ ಮೇಲೆ ನಿಲ್ಲುವ ಪ್ರಯತ್ನ ನಡೆಸಬೇಕು. ರೈತರಿಗೆ ಕೇವಲ ಬೆಳೆಸಾಲ ನೀಡಲು ಮಾತ್ರ ಸೀಮಿತವಾಗದೆ ಇತರ ಮೂಲಗಳಿಗೂ ಸಾಲ ನೀಡಿ ಲಾಭದಾಯಕ ಸ್ಥಿತಿಯತ್ತ ಹೆಜ್ಜೆ ಇರಿಸಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ತಿಳಿಸಿದರು.
ನಗರದ ಮಲೆನಾಡು ಸಿರಿ ಸಭಾಂಗಣದಲ್ಲಿ ಶನಿವಾರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟ, ಪಿಗ್ಮಿ ಸಂಗ್ರಹಕಾರರು ಮತ್ತು ಡಿಸಿಸಿ ಬ್ಯಾಂಕ್ ಸಿಬ್ಬಂದಿಗಳ ಸಂಘಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪಕ್ಕದ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶೇ. 80ರಷ್ಟು ಪ್ರಾಥಮಿಕ ಸಹಕಾರಿ ಸಂಘಗಳು ಡಿಸಿಸಿ ಬ್ಯಾಂಕ್ ಸಾಲ ಪಡೆಯದೆ ಬೇರೆ ಬೇರೆ ವಿಧದಲ್ಲಿ ವಹಿವಾಟು ನಡೆಸಿ, ಲಾಭ ಗಳಿಸುವ ಮೂಲಕ ಸ್ವತಂತ್ರ ಅಸ್ತಿತ್ವ ಕಂಡುಕೊಂಡಿವೆ. ಶಿವಮೊಗ್ಗ ಜಿಲ್ಲೆಯಲ್ಲಿಯೂ ಇದು ಮೊದಲ್ಗೊಳ್ಳಬೇಕು ಎಂದರು.
ಇತ್ತೀಚಿನ ವರ್ಷಗಳಲ್ಲಿ ಸಹಕಾರಿ ನಿಯಮ, ಕಾನೂನುಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆಗುವ ಬದಲಾವಣೆ ಮನಗಂಡು ಬದಲಾವಣೆ ಜೊತೆ ಹೆಜ್ಜೆ ಹಾಕುವುದು ಅನಿವಾರ್ಯ. ಈ ಬಗ್ಗೆ ಸದಸ್ಯರಿಗೆ, ರೈತರಿಗೆ ಅರಿವು ಮೂಡಿಸಬೇಕು. ಡಿಸಿಸಿ ಬ್ಯಾಂಕ್ ಬಗ್ಗೆ ಎಲ್ಲಿಯೋ ಕುಳಿತು ಮಾತನಾಡುವುದನ್ನು ಬಿಟ್ಟು, ವಾಸ್ತವತೆ ಅರಿಯುವ ಪ್ರಯತ್ ನಡೆಸಬೇಕು. ಜಿಲ್ಲೆಯಲ್ಲಿ 483 ಕೋಟಿ ರೂ. ಸಾಲ ಜೂನ್ ಅಂತ್ಯದವರೆಗೆ ಸಾಲ ನೀಡಿದೆ. ಇನ್ನೂ 150 ಕೋಟಿ ರೂ. ಸಾಲದ ಬೇಡಿಕೆ ಇದೆ. ಅಪ್ಪ ದುಡ್ಡು ಕೊಡುತ್ತಾನೆ, ಮಗ ಖರ್ಚು ಮಾಡುತ್ತಾನೆ ಎನ್ನುವಂತೆ ಆಗದೆ, ಕೊಟ್ಟ ಸಾಲ ಸದ್ಬಳಕೆ ಮಾಡಿಕೊಳ್ಳಬೇಕು. ಸಹಕಾರಿ ಸಂಸ್ಥೆಗಳು ಲಾಭ ಉದ್ದೇಶದ ಸಂಸ್ಥೆಗಳಲ್ಲ. ಬದಲಾಗಿ ಇದೊಂದು ಸೇವಾಕ್ಷೇತ್ರವಾಗಿದೆ. ನಷ್ಟ ಅನುಭವಿಸದೆ, ಸರಿದೂಗಿಸಿಕೊಂಡು ಹೋಗುವ ಕೆಲಸವನ್ನು ಜವಾಬ್ದಾರಿ ಸ್ಥಾನದಲ್ಲಿ ಇರುವವರು ಮಾಡಬೇಕಾಗುತ್ತದೆ ಎಂದು ತಿಳಿಸಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಕೆ. ಚನ್ನವೀರಪ್ಪ ಮಾತನಾಡಿ, ಡಿಸಿಸಿ ಬ್ಯಾಂಕ್‌ನ ನೌಕರರು ಮಾಡಿದ ಲೋಪದಿಂದ ಬ್ಯಾಂಕ್ ಸಂಕಷ್ಟಕ್ಕೆ ಒಳಗಾಗಿದ್ದಾಗ ಆರ್.ಎಂ. ಮಂಜುನಾಥ ಗೌಡ ಅವರ ನೇತೃತ್ವದಲ್ಲಿ ಬ್ಯಾಂಕ್ ಪುನಶ್ಚೇತನಗೊಳ್ಳಲು ಆಡಳಿತ ಮಂಡಳಿ ಹೆಚ್ಚು ಪರಿಶ್ರಮ ಪಟ್ಟಿದೆ. ಈ ಸಂದರ್ಭದಲ್ಲಿ ಸಾಗರ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳು ಬ್ಯಾಂಕ್ ಬೆನ್ನಿಗೆ ನಿಂತು ಬೆಂಬಲ ನೀಡಿರುವುದು ಸ್ಮರಣಾರ್ಹ ಸಂಗತಿ. ತಾಲೂಕಿಗೆ ಸುಮಾರು 70 ಕೋಟಿ ರೂ. ಶೂನ್ಯ ಬಡ್ಡಿದರದಲ್ಲಿ ಸಾಲ- ಸೌಲಭ್ಯವನ್ನು ನೀಡಲಾಗಿದೆ. ಕಳೆದ ಮೂರು ವರ್ಷದಲ್ಲಿ ಅಪಪ್ರಚಾರದ ನಡುವೆಯೂ ಬ್ಯಾಂಕ್ 850 ಕೋಟಿ ರೂ. ಠೇವಣಿ ಸಂಗ್ರಹ ಮಾಡಿದೆ. ಮಂಜುನಾಥ ಗೌಡರು ಈ ಬಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಬ್ಯಾಂಕ್ ನಿರ್ದೇಶಕ ಶ್ರೀಪಾದ ಹೆಗಡೆ ನಿಸ್ರಾಣಿ ಮಾತನಾಡಿ, ಸಣ್ಣ ಮತ್ತು ಅತಿಸಣ್ಣ ರೈತರು ಡಿಸಿಸಿ ಬ್ಯಾಂಕ್‌ನಿಂದ ಸಾಕಷ್ಟು ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಸದೃಢರಾಗಿದ್ದಾರೆ. ರೈತರು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಡಿಸಿಸಿ ಬ್ಯಾಂಕ್ ಪರ ನಿಲ್ಲುವ ಅಗತ್ಯವಿದೆ. ಇದರಿಂದ ಡಿಸಿಸಿ ಬ್ಯಾಂಕ್ ಮೂಲಕ ಇನ್ನಷ್ಟು ಸೌಲಭ್ಯಗಳನ್ನು ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ತಲುಪಿಸಲು ಸಾಧ್ಯವಾಗುತ್ತದೆ. ಗೌಡರು ಸತತ 10 ಬಾರಿ ಬ್ಯಾಂಕ್ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಡಿಸಿಸಿ ಬ್ಯಾಂಕ್ 1500 ಕೋಟಿ ವಹಿವಾಟು ಹೊಂದಿದೆ ಎಂದು ಹೇಳಿದರು.
ಗುರುಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಗಡಿ ಅಶೋಕ್, ಪರಮೇಶ್ವರ ಎಚ್.ಕೆ., ಯೋಗೀಶ್, ತಾಪಂ ಉಪಾಧ್ಯಕ್ಷ ಅಕ್ಕಿ ಪರಶುರಾಮ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ರವಿಕುಮಾರ್ ಹುಣಾಲಮಡಿಕೆ, ನಿರ್ದೇಶಕ ಕೆ. ಹೊಳೆಯಪ್ಪ, ಟಿಎಪಿಎಂಸಿಎಸ್ ಅಧ್ಯಕ್ಷ ವಿರೇಶ್ ಗೌಡ, ವ್ಯವಸಾಪ§ಕ ನಿದೇಶಕ ರಾಜಣ್ಣ ರೆಡ್ಡಿ, ಲೆಕ್ಕ ಪರಿಶೋಧಕ ಶಿವಪ್ಪ ವಿ.ಸಿ. ಇನ್ನಿತರರು ಇದ್ದರು.
ಸಾಧನ ಕಲಾ ಬಳದ ಸದಸ್ಯರು ಪ್ರಾರ್ಥಿಸಿದರು. ರಮೇಸ್ ಎಸ್.ಎಸ್. ಸ್ವಾಗತಿಸಿದರು. ಎಚ್.ಕೆ. ವೆಂಕಟೇಶ್ ಹುಲಿಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಮೇಶ್ವರ ಕರೂರು ನಿರೂಪಿಸಿದರು.