Advertisement

ಸಹಕಾರಿ ಸಂಸ್ಥೆ ಕುಟುಂಬವಿದ್ದಂತೆ: ಈಶ್ವರಪ್ಪ

03:18 PM Dec 08, 2019 | Team Udayavani |

ಸಾಗರ: ಸಹಕಾರಿ ಸಂಸ್ಥೆ ಎಂದರೆ ಅದೊಂದು ಕೂಡು ಕುಟುಂಬ ಇದ್ದಂತೆ. ಒಟ್ಟು ಕುಟುಂಬದಲ್ಲಿರುವ ಎಲ್ಲ ನಿಯಮಾವಳಿಗಳೂ ಸಹಕಾರಿ ಸಂಸ್ಥೆಯಲ್ಲಿರುವುದರಿಂದ ಸಂಸ್ಥೆಯು ಮನೆಯ ವಾತಾವರಣದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

Advertisement

ತಾಲೂಕಿನ ಖಂಡಿಕಾ ಗ್ರಾಮದಲ್ಲಿ ಶನಿವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕುಟುಂಬವೊಂದು ಹೇಗೆ ಅಭಿವೃದ್ಧಿಯಾಗಬೇಕು ಎಂದು ಎಲ್ಲರೂ ಕುಳಿತು ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳುತ್ತಾರೆ. ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿ ಸಹ ಸಂಘಟನಾತ್ಮಕವಾಗಿ ನಿರ್ಧಾರ ಕೈಗೊಂಡು ತನ್ಮೂಲಕ ಅಭಿವೃದ್ಧಿ ಕೆಲಸ ಕೈಗೊಳ್ಳುವ ಜೊತೆಗೆ ಸದಸ್ಯರ ಹಿತ ಕಾಯುವ ಕೆಲಸ ಮಾಡುತ್ತಿದ್ದಾರೆ. ಸಹಕಾರಿ ಸಂಸ್ಥೆಯೊಂದು ಶತಮಾನೋತ್ಸವ ಆಚರಿಸುತ್ತಿದೆ ಎಂದರೆ ಅದರ ಹಿಂದೆ ಕೆಲಸ ಮಾಡಿದವರನ್ನು ಸ್ಮರಿಸುವುದು ಅತ್ಯಗತ್ಯ. ಖಂಡಿಕಾ ಸಹಕಾರಿ ಸಂಸ್ಥೆಯ ಸಾಧನೆ ನಿಜಕ್ಕೂ ಅವಿಸ್ಮರಣೀಯವಾಗಿದ್ದು, ಇಂತಹ ಸಂಸ್ಥೆ ಇತರೆ ಸಹಕಾರಿ ಸಂಸ್ಥೆಗಳಿಗೂ ಮಾದರಿಯಾಗಿದೆ ಎಂದು ಹೇಳಿದರು.

ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ನಂಬಿಕೆ. ವಿಶ್ವಾಸ ಮತ್ತು ಸತ್ಯ ಎಲ್ಲಿ ಇರುತ್ತದೆಯೋ ಅಂತಹ ಸಂಸ್ಥೆಗಳು ಸಹಜವಾಗಿ ಉನ್ನತ ಸ್ಥಾನಕ್ಕೇರುತ್ತವೆ. ಸಹಕಾರಿಗಳಿಂದ, ಸಹಕಾರಿಗಳಿಗಾಗಿ, ಸಹಕಾರಿ ಸಂಸ್ಥೆ ಮೂಲಕ ಪ್ರಜಾಪ್ರಭುತ್ವದ ತತ್ವಾದರ್ಶದಲ್ಲಿ ನಡೆದುಕೊಂಡು ಬರುತ್ತಿರುವ ಸಹಕಾರಿ ಸಂಸ್ಥೆಗಳು ದೇಶದ ಆರ್ಥಿಕತೆಯ ಬೆನ್ನೆಲುಬಾಗಿ ಕೆಲಸ ಮಾಡುತ್ತಿವೆ. ಇಂತಹ ಸಂಸ್ಥೆಯನ್ನು ನೂರು ವರ್ಷಗಳ ಕಾಲ ಅತ್ಯಂತ ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿರುವ ಅಂದಿನಿಂದ ಇಂದಿನವರೆಗಿನ ಆಡಳಿತ ಮಂಡಳಿ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕಚೇರಿ ಸಂಕೀರ್ಣ ಉದ್ಘಾಟಿಸಿದ ಶಾಸಕ ಕುಮಾರ ಬಂಗಾರಪ್ಪ ಮಾತನಾಡಿ, ಮನೆ- ಮನೆ ತಿರುಗಿ ಸಹಕಾರಿಗಳನ್ನು ಸಂಘಟಿಸಿ ಸಹಕಾರಿ ಸಂಸ್ಥೆ ಕಟ್ಟುವುದು ಸುಲಭದ ಕೆಲಸವಲ್ಲ. ಸಂಸ್ಥೆಯೊಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ ಎಂದರೆ ಇಲ್ಲಿನ ಸಹಕಾರಿಗಳ ಸೇವಾ ಮನೋಭಾವದ ಅಗಾಧತೆ ಅದರ ಹಿಂದೆ ಇರುತ್ತದೆ. ಸಮಾಜಕ್ಕೆ ಇಂತಹ ಸಹಕಾರಿ ಸಂಸ್ಥೆಗಳು ಮಾರ್ಗದರ್ಶನವಾಗಿದೆ ಎಂದು ಹೇಳಿದರು.

Advertisement

“ಸಾರ್ಥಕ ಶಥ’ ಸ್ಮರಣ ಸಂಚಿಕೆಯನ್ನು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌. ಎಂ.ಮಂಜುನಾಥ ಗೌಡ ಬಿಡುಗಡೆ ಮಾಡಿದರು. ಸಂಘದಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಭಾವಚಿತ್ರವನ್ನು ಸಿಗಂದೂರು ಕ್ಷೇತ್ರದ ಪ್ರಧಾನ ಅರ್ಚಕರಾದ ಎಸ್‌.ಪಿ.ಶೇಷಗಿರಿ ಭಟ್‌ ಅನಾವರಣ ಮಾಡಿದರು. ಸಂಸ್ಥೆಯ ಅಧ್ಯಕ್ಷ ಕೆ.ಎಂ. ರಮೇಶ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಚ್‌.ಹಾಲಪ್ಪ ಹರತಾಳು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿದರು.

ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಉಪಾಧ್ಯಕ್ಷ ಅಶೋಕ ಬರದವಳ್ಳಿ, ಜಿಪಂ ಸದಸ್ಯ ರಾಜಶೇಖರ ಗಾಳಿಪುರ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ, ಗ್ರಾಪಂ ಅಧ್ಯಕ್ಷೆ ನಿರ್ಮಲ ಗಣಪತಿ, ಆಪ್ಸ್ ಕೋಸ್‌ ಅಧ್ಯಕ್ಷ ಇಂದೂಧರ ಗೌಡ,
ಎಂ.ಎಸ್‌. ಗೌಡ, ಮಹಾಬಲೇಶ್ವರ ಕುಗ್ವೆ, ಭಾಗೀರಥಿ ಚಂದ್ರಶೇಖರ್‌, ಕೆ.ವಿ. ಶ್ರೀಧರರಾವ್‌ ಇನ್ನಿತರರು ಇದ್ದರು.

ಸರಸ್ವತಿ ಶಾಂತರಾವ್‌ ಪ್ರಾರ್ಥಿಸಿದರು. ಭಾಸ್ಕರ ಭಟ್‌ ಕೆ.ಎಸ್‌. ಸ್ವಾಗತಿಸಿದರು. ಕೆ.ಎಂ. ಸೂರ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ರತ್ನಾಕರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next